ಸಾಯುವವರೆಗೂ ದಲಿತ ಸಿಎಂ ಹೋರಾಟ ಬಿಡಲ್ಲ

KannadaprabhaNewsNetwork | Published : Sep 14, 2024 1:48 AM

ಸಾರಾಂಶ

ನಾನು ಸಾಯುವವರೆಗೂ ದಲಿತ ಸಿಎಂ ವಿಚಾರ ಕೈ ಬಿಡುವುದಿಲ್ಲ. ಆ ಕುರಿತು ನಾನು ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾನು ಸಾಯುವವರೆಗೂ ದಲಿತ ಸಿಎಂ ವಿಚಾರ ಕೈ ಬಿಡುವುದಿಲ್ಲ. ಆ ಕುರಿತು ನಾನು ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೆ ದಲಿತ ಸಿಎಂ ಪರ ಧ್ವನಿ ಎತ್ತಿದ್ದಾರೆ. ದಲಿತರು ಈ ದೇಶದಲ್ಲಿ ಏನು ಪಾಪ‌ ಮಾಡಿದ್ದಾರೆ? ದಲಿತರು ಅಯೋಗ್ಯರಾ? ಯಾವುದೇ ಪಕ್ಷದವರಾಗಲಿ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ದಲಿತರು ಮುಖ್ಯಮಂತ್ರಿಗಳಾಗಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲೂ ಆಗಬೇಕಿದೆ. ಯಾವುದೇ ಪಕ್ಷದಲ್ಲಾಗಲಿ ಈ ರಾಜ್ಯದಲ್ಲಿ ಒಬ್ಬ ದಲಿತ ಮುಖ್ಯಮಂತ್ರಿ ಆಗಬೇಕು. ಪಾಪ ಮಲ್ಲಿಕಾರ್ಜುನ ಖರ್ಗೆ ಅವರು ಏನು ತಪ್ಪು ಮಾಡಿದ್ದಾರೆ? ಅವರನ್ನು ಸಿಎಂ ಮಾಡಬಹುದಿತ್ತಲ್ಲಾ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿವಿದರು.ಕಾಂಗ್ರೆಸ್‌ನಲ್ಲೇ ಸಿಎಂ ತಯಾರಿ ನಡೆದಿದೆ:

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಿಕ್ಕಿಹಾಕಿಕೊಂಡಿದ್ದರೂ ಇನ್ನೂ ನಾನು ಸಿಎಂ ಆಗಿ ಮುಂದುವರೆಯುತ್ತೇನೆ ಎನ್ನುತ್ತಾರೆ. ಆದರೆ ಅದು ಆಗುವುದಿಲ್ಲ, ಎರಡು ದಿನ ತಡೆಯಿರಿ ನಿಮಗೇ ಎಲ್ಲಾ ಗೊತ್ತಾಗುತ್ತದೆ. ಸಿದ್ದರಾಮಯ್ಯನವರು ಯಾವಾಗ ಸಿಎಂ ಕುರ್ಚಿ ಖಾಲಿ ಮಾಡುತ್ತಾರೆ? ನಾವು ಯಾವಾಗ ಸಿಎಂ ಆಗೋಣ ಎಂದು ಬಹಳ ಜನ ಅವರ ಪಕ್ಷದಲ್ಲೇ ತಯಾರಾಗಿದ್ದಾರೆ ಎಂದು ತಿವಿದರು.ಗಣೇಶ ವಿಸರ್ಜನೆ ವೇಳೆ ಯಾಕೆ ಗಲಾಟೆ ಆಗಿದೆ ಎಂಬುದರ ಕುರಿತು ಉತ್ತರ ಎಲ್ಲರಿಗೂ ಗೊತ್ತಿದೆ. ಮೇಲ್ನೋಟದಲ್ಲೇ ಘಟನೆ ಏಕಾಯಿತು ಎಂದು ಸರಳವಾಗಿ ಕಾಣಿಸುತ್ತಿದೆ. ಅಷ್ಟು ಇಷ್ಟವಿದ್ದರೇ ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಹೀಗೆ ಪ್ರಚೋದನೆ ನೀಡುವುದು ಸರಿಯಲ್ಲ. ಇವರು ಹೀಗೆ ಮಾಡುವುದರಿಂದ ಅವರಿಗೆ ಸಹಜವಾಗಿ ಪ್ರಚೋದನೆ ಸಿಕ್ಕೇ ಸಿಗುತ್ತದೆ. ಇದೇ ರೀತಿ ಮುಂದುವರಿದರೆ ನಾಗಮಂಗಲದಲ್ಲಷ್ಟೆ ಅಲ್ಲ, ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಹಾಗೂ ಮಹಾರಾಷ್ಟ್ರದಲ್ಲೂ ಗಲಾಟೆ ಆಗುತ್ತದೆ. ಹಾಗಾಗಿ ಯಾವುದೇ ವಿಚಾರದಲ್ಲಿ ಯಾರೂ ಪ್ರಚೋದನೆ ಮಾಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.ರಾಹುಲ್‌ ಗಾಂಧಿ ವಿರುದ್ಧ ಕಿಡಿ:

ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ಗೆ ಹೋಗಿದ್ದ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಅಲ್ಲಿ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ದಲಿತರನ್ನು ಶೋಷಣೆ ಮಾಡುತ್ತ ಬಂದಿದೆ. ಮೀಸಲಾತಿ ದಲಿತರ ಹಕ್ಕು, ಅದನ್ನು ಯಾರೂ ಕಸಿದುಕೊಳ್ಳಲು ಬಿಡುವುದಿಲ್ಲ. ದಲಿತರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ರೂಪಿಸಿಕೊಂಡಿದೆ. ಕಾಂಗ್ರೆಸ್ ಪಕ್ಷ ಬಡ ದಲಿತರ ಶ್ರೇಯೋಭಿದ್ಧಿಗಾಗಿ ಎಂದೂ ಜಮೀನು, ನೀರಾವರಿ ಸೌಲಭ್ಯ ಮಾಡಿಕೊಡುವ ಕೆಲಸ ಮಾಡಲಿಲ್ಲ. ಕೇವಲ ಕಣ್ಣೊರೆಸುವ ಕೆಲಸ ಮಾಡಿದೆ ಎಂದು ಆರೋಪಿಸಿದರು.ನಾನು ಸಮಾಜಕಲ್ಯಾಣ ಮಂತ್ರಿ ಇದ್ದಾಗ ಹೋರಾಟ ಮಾಡಿ ದಲಿತರಿಗೆ ಜಮೀನು, ನೀರಾವರಿ ಸೌಲಭ್ಯ ಕೊಡಿಸುವ ಕಾನೂನು ಜಾರಿಗೆ ತಂದಿದ್ದೇವೆ. ಅಲ್ಲದೆ ದಲಿತ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲಿ ಎಂದು ಮೊರಾರ್ಜಿ ವಸತಿ ಶಾಲೆಗಳನ್ನು ಇಡಿ ರಾಜ್ಯದಲ್ಲಿ ಮಾಡಿದ್ದೇನೆ. ಕಾಂಗ್ರೆಸ್ 75 ವರ್ಷದಲ್ಲಿ ಯಾವುದೇ ಕೆಲಸ ಮಾಡಲಿಲ್ಲ ಎಂದು ದೂರಿದರು.ದೇಶ ವಿಭಜನೆ ಷಡ್ಯಂತ್ರ ರೂಪಿಸುವ ಶಕ್ತಿಗಳೊಂದಿಗೆ ನಿಂತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್‌ಗಾಂಧಿ ಹಾಗೂ ಅವರ ಪಕ್ಷಕ್ಕೆ ಅಭ್ಯಾಸ ಆಗಿದೆ. 70 ವರ್ಷದ ಆಡಳಿತದಲ್ಲಿ ಒಂದಲ್ಲ‌ ಎರಡಲ್ಲ ಬರೋಬ್ಬರಿ 106 ಬಾರಿ ಸಂವಿಧಾನ ತಿದ್ದುವ ಕೆಲಸವನ್ನು ಇವರು ಮಾಡಿದ್ದಾರೆ ಎಂದರು.ದಲಿತರ 25 ಸಾವಿರ ಕೋಟಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಹಂಚಿ ಮೋಸ ಮಾಡಿದ್ದಾರೆ. ಅಲ್ಲದೆ ₹187 ಕೋಟಿ ವಾಲ್ಮಿಕಿ ಹಣವನ್ನು ಬಳ್ಳಾರಿ ಚುನಾವಣೆಯಲ್ಲಿ ಬಳಸಿಕೊಂಡಿದ್ದಾರೆ ಎಂದು ದೂರಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಎಲ್ಲಿಯವರೆಗೂ ಸಮಾಜದಲ್ಲಿ ಸಮಾನತೆ ಬರುವುದಿಲ್ಲವೋ ಅಲ್ಲಿಯವರೆಗೂ ಅಸ್ಪೃಶ್ಯತೆ ಹೋಗುವುದಿಲ್ಲ. ಕಾಂಗ್ರೆಸ್‌ನ ಗಾಂಧಿ ಕುಟುಂಬ ನಾಲ್ಕು ತಲೆಮಾರುಗಳವರೆಗೆ ಆಡಳಿತ ನಡೆಸಿದರೂ ಅವರಿಂದ ಸಮಾನತೆ ಕೊಡಲು ಆಗಿಲ್ಲ. 70 ವರ್ಷ ಆಡಳಿತ ನಡೆಸಿದರೂ ದಲಿತರು ದಲಿತರಾಗೇ ಉಳಿದರೆ ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ. ಗರೀಬಿ ಹಠಾವೋ ಎಂದು ಹೇಳಿ ಗರೀಬರ ಹಟಾವೋ ಮಾಡಿದರು. ಒಬ್ಬ ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬಂತೆ ರಾಹುಲ್‌ಗಾಂಧಿ ಬೇಕಾಬಿಟ್ಟಿ ಮಾತನಾಡುತ್ತಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ್ ಕುಚಬಾಳ, ಮುಖಂಡರಾದ ವಿಜುಗೌಡ ಪಾಟೀಲ್, ಸಂಜೀವ ಐಹೊಳಿ, ಮಳುಗೌಡ ಪಾಟೀಲ್, ಸಾಬು ಮಾಶಾಳ, ಈರಣ್ಣ ರಾವೂರ, ವಿಜಯ ಜೋಷಿ ಉಪಸ್ಥಿತರಿದ್ದರು.

ಎಲ್ಲರೂ ಪಪ್ಪು ಎಂದು ಕರೆಯುವ ರಾಹುಲ್‌ ಗಾಂಧಿ ಪಾರ್ಲಿಮೆಂಟ್‌ನಲ್ಲಿ ದಲಿತರ ಪರ ಎಂದು ಹೇಳುತ್ತಾರೆ. ವಾಷಿಂಗ್ಟನ್‌ನಲ್ಲಿ ಒಳಗೆ ಹೋದಾಗ ಮೀಸಲಾತಿ ರದ್ದುಪಡಿಸುವ ಸಮಯ ಬಂದಿದೆ ಎಂದು ಹೇಳ್ತಾನೆ. ಹೊರಗೆ ಬಂದು ನಾನು ಹಾಗೆ ಹೇಳಿಲ್ಲ ಅಂತಾನೆ. ಮೀಸಲಾತಿ ಎಂಬುದು ಕಾಂಗ್ರೆಸ್‌ನ ಭಿಕ್ಷಾಪಾತ್ರೆ ಅಲ್ಲ. ದಲಿತರು ಹುಟ್ಟುತ್ತಲೇ ಬಂದ ಹಕ್ಕು ಇದು. ದಲಿತರ ಮೀಸಲಾತಿಗೆ ರಾಹುಲ್‌ ಗಾಂಧಿ ಅವರು ಕೊಡಲಿಪೆಟ್ಟು ಹಾಕಿದ್ದಾರೆ.

- ರಮೇಶ ಜಿಗಜಿಣಗಿ, ಸಂಸದ, ಮಾಜಿ ಸಚಿವ.

Share this article