ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದ ಅಮಕುಂದಿ ಗ್ರಾಮದ ದಲಿತ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ರಾಜ್ಯದಲ್ಲಿ ವಿಪರೀಪತ ಮಳೆಯಾಗಿ ಡ್ಯಾಂ ಭರ್ತಿಯಾಗಿದ್ದರೂ ತಾಲೂಕಿನಲ್ಲಿ ಬರದ ಛಾಯೆ ಆವರಿಸಿತ್ತು. ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಮಂಗಳವಾರ ತಡರಾತ್ರಿ ಸುರಿದ ಗುಡುಗು ಭರಿತ ಭರ್ಜರಿ ಮಳೆಯಿಂದಾಗಿ ಕೃಷಿ ಹೊಂಡ, ಚೆಕ್ ಡ್ಯಾಂ ಸೇರಿ ಪ್ರಮುಖ ಜಲಪಾತ್ರೆಗಳಿಗೆ ಜೀವ ಕಳೆ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ತಾಲೂಕಿನ ಅಮಕುಂದಿ ಗ್ರಾಮದಲ್ಲಿ ಸೂಕ್ತ ಚರಂಡಿ ಇಲ್ಲದೇ ದಲಿತ ಕಾಲೋನಿ ಮನೆಗಳಿಗೆ ಮಳೆ ನೀರು ನುಗ್ಗಿ ಬಾರಿ ಅವಾಂತರ ಸೃಷ್ಟಿಸಿದೆ. ಚರಂಡಿಗೆ ತಡೆ ಹಾಕಿರುವ ಪರಿಣಾಮ ತಗ್ಗು ಪ್ರದೇಶದ 20 ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿ ದವಸ-ಧಾನ್ಯ, ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗಿವೆ. ಕೆಲ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದೆ ಎನ್ನಲಾಗಿದೆ.ಮನೆಗೆ ನುಗ್ಗಿರುವ ನೀರು ಹೊರ ಹಾಕುವಲ್ಲಿ ನಿವಾಸಿಗಳು ಹೈರಾಣಾಗಿದ್ದಾರೆ. ಮಕ್ಕಳು ಮಹಿಳೆಯರು ಪಾತ್ರೆ ಬಕೆಟ್ ಹಿಡಿದು ನೀರು ಹೊರ ಹಾಕಿದ್ದಾರೆ. ಕಾಲೋನಿಗೆ ಸೂಕ್ತ ಚರಂಡಿ ನಿರ್ಮಿಸದ ಪರಿಣಾಮವಾಗಿ ಈ ಸಮಸ್ಯೆ ಎದುರಾಗಿದೆ. ನಮಗೆ ಚರಂಡಿ ನಿರ್ಮಿಸಬೇಕೆಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ತಿಳಿದು ತಹಸೀಲ್ದಾರ್ ಜಗದೀಶ ಸೇರಿ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯ ಅವಾಂತರದಿಂದ ಸಮಸ್ಯೆಯಾಗಿದ್ದ ಮನೆಗಳಿಗೆ ವೀಕ್ಷಣೆ ಮಾಡಿ ಮಳೆ ನೀರು ಸಾಗಲು ಸೂಕ್ತ ಚರಂಡಿ ನಿರ್ಮಿಸುವ ಭರವಸೆ ವ್ಯಕ್ತ ಪಡಿಸಿದ್ದಾರೆ.