ಕೊಪ್ಪಳ: ಕಲಬುರಗಿಗೆ ಸರ್ಕಾರ ನಾಲ್ಕು ಬಾರಿ ಹೋಗಿ ಸುಮಾರು 24 ಸಾವಿರ ಕೋಟಿ ರೂಪಾಯಿಯ ಯೋಜನೆ ಘೋಷಣೆ ಮಾಡಿದೆ. ಆದರೆ ಈ ವರೆಗೆ 24 ರೂಪಾಯಿಯೂ ಬಿಡುಗಡೆಯಾಗಿಲ್ಲ. ಎನೂ ಮಾಡದೇ ಕಾಂಗ್ರೆಸ್ ಸರ್ಕಾರ ಚಪ್ಪಾಳೆ ಹೊಡೆಸಿಕೊಳ್ಳುತ್ತಿದೆ ಎಂದು ವಿಪ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ವಾಹನದಲ್ಲಿ ಹಣ ಸಾಗಿಸುವ ಮಟ್ಟದಲ್ಲಿ ಇಳಿದಿದೆ. ಈ ಪ್ರಕರಣಗಳಲ್ಲಿ ಇಲಾಖೆ ಹಾಗೂ ಸರ್ಕಾರ ಜಾಯಿಂಟ್ ವೆಂಚರ್ ಮಾಡಿಕೊಂಡಿದೆ ಎಂಬ ಅನುಮಾನ ಮೂಡುತ್ತಿದೆ. ದ್ವೇಷಭಾಷಣ ಹೆಸರಿನಲ್ಲಿ ಬಿಲ್ ತಂದಿದ್ದಾರೆ. ಇದಕ್ಕೆ ಪ್ರತ್ಯೇಕ ಕಾನೂನು ಬೇಕಿರಲಿಲ್ಲ ಎಂದು ಹೇಳಿದ್ದೇವೆ. ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡಿದರೆ ಜೈಲಿಗೆ ಕಳುಹಿಸುತ್ತಿದ್ದಾರೆ. ನಾರಾಯಣಗೌಡರನ್ನು ಜೈಲಿಗೆ ಹಾಕಿದ್ದರು. ದ್ವೇಷಭಾಷಣ ಕಾಯ್ದೆ ತಂದು ದಲಿತ, ರೈತ ಸಂಘ ಹಾಗೂ ಪ್ರತಿಪಕ್ಷದವರನ್ನು ಹದ್ದುಬಸ್ತಿನಲ್ಲಿಡಲು ಹೊರಟಿದ್ದಾರೆ. ಇದು ಹಿಟ್ಲರ್ ಸರ್ಕಾರನಾ? ಎಂದು ಪ್ರಶ್ನಿಸಿದರು.
ಶಿಡ್ಲಘಟ್ಟದಲ್ಲಿ ಕೆಎಎಸ್ ಮಹಿಳಾ ಅಧಿಕಾರಿಗೆ ರಾಜೀವಗೌಡ ಕೆಟ್ಟ ಮಾತುಗಳಿಂದ ಬೈಯ್ದಿದ್ದಾರೆ. ಇದು ದ್ವೇಷ ಭಾಷಣವಲ್ಲ? ಅವರ ಮೇಲೆ ಏನು ಕೇಸ್ ಹಾಕ್ತೀರಿ? ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ಸಣ್ಣ ವಿಷಯಕ್ಕೆ ಭರತರಡ್ಡಿ ಮನೆ ಸುಡುತ್ತೀನಿ ಎಂದಿದ್ದಾರೆ ಅದು ದ್ವೇಷ ಭಾಷಣವಲ್ಲವಾ? ಈ ಘಟನೆಯಲ್ಲಿ ಸತ್ತವರು, ಗುಂಡು ಹೊಡೆದವರ ಗನ್ ಮ್ಯಾನ್ ಕಾಂಗ್ರೆಸ್ಸನವರು. ಆದರೆ ಶಾಸಕ ಜನಾರ್ದನ ರೆಡ್ಡಿ ಮೇಲೆ ಏಕೆ ಕೇಸ್ ಹಾಕುತ್ತೀರಿ. ಬೇರೆ ಪಕ್ಷದವರು ಮಾಡಿದರೆ ತಪ್ಪು, ಆದರೆ ನಿಮ್ಮ ಪಕ್ಷದವರು ಮಾಡಿದರೆ ತನಿಖೆ ಎನ್ನುತ್ತೀರಿ. ಇದು ಗೂಂಡಾಗಿರಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿಮ್ಮನ್ನು ಸೋಲಿಸಿ ದೂರವಿಟ್ಟರೆ ಅದಕ್ಕೆ ವೋಟ್ ಚೋರಿ ಎನ್ನುತ್ತೀರಿ. ಮುಂಬೈಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಇದು ವೋಟ್ ಚೋರಿ ಅಲ್ಲ ಇದು ದಿಲ್ ಚೋರಿ. ವೋಟ್ ಚೋರಿಯಾಗಿದ್ದಕ್ಕೆ ದೆಹಲಿಯಲ್ಲಿ ಪರಿಸರ ಹಾನಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಮುಂಬೈನಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ನಿರ್ನಾಮವಾಗಿದೆ.
ರಾಹುಲ್ ಗಾಂಧಿ, ಸಿಎಂ ಹಾಗೂ ಡಿಸಿಎಂರನ್ನು ಫುಟ್‌ಪಾತ್ ನಲ್ಲಿ ನಿಲ್ಲಿಸಿದ್ದಾರೆ. ಅವರನ್ನು ಬೀದಿಪಾಲು ಮಾಡಿದ್ದಾರೆ. ಕನಿಷ್ಠ ಕೂಡಿಸಿ ಮಾತನಾಡುವ ಸೌಜನ್ಯವಿಲ್ಲ. ರಾಜ್ಯದಲ್ಲಿ ಅರಾಜಕತೆ ಇದೆ. ಈ ಕುರಿತು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರು ಕೊಪ್ಪಳಕ್ಕೆ ಬಂದಾಗ ದುಂಡಾವರ್ತನೆ ಮಾಡಿದರು. ನಾವು ಸಾಂವಿಧಾನಿಕ ಹೋರಾಟ ಮಾಡುತ್ತೇವೆ. ಆದರೆ ಕಾಂಗ್ರೆಸ್‌ನವರು ಚೇರ್ ಎತ್ತಿಕೊಂಡು ಹೊಡೆಯಲು ಹೋಗುತ್ತಾರೆ, ಇದು ಗುಂಡಾವರ್ತನೆ ಅಲ್ಲವೇ. ಕೇಸ್ ಕೊಟ್ಟರೂ ದೂರು ದಾಖಲಾಗುವುದಿಲ್ಲ. ಮಳೆ, ಬೆಳೆ ಹಾನಿ ಪರಿಹಾರದ ವರದಿ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ದಡೇಸಗೂರು, ಡಾ. ಬಸವರಾಜ ಕ್ಯಾವಟರ್, ನವೀನ ಗುಳಗಣ್ಣನವರ್, ಚಂದ್ರಶೇಖರ ಹಲಗೇರಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ, ಸೋಮಣ್ಣ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.