ಸಭೆ ಬಹಿಷ್ಕರಿಸಿ ಡಿಸಿ ವಿರುದ್ಧ ದಲಿತ ಮುಖಂಡರ ಆಕ್ರೋಶ

KannadaprabhaNewsNetwork |  
Published : Mar 27, 2025, 01:06 AM IST
26ಕೆಆರ್ ಎಂಎನ್ 7.ಜೆಪಿಜಿರಾಮನಗರ ಜಿಪಂ ಸಭಾಂಗಣದಲ್ಲಿ ದಲಿತ ಮುಖಂಡರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು. | Kannada Prabha

ಸಾರಾಂಶ

ಏ.5ರ ಬಾಬು ಜಗಜೀವನರಾಂ ಜಯಂತಿ ಹಾಗೂ ಏ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಗೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಗೈರಾಗಿದ್ದಕ್ಕೆ ದಲಿತಪರ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಏ.5ರ ಬಾಬು ಜಗಜೀವನರಾಂ ಜಯಂತಿ ಹಾಗೂ ಏ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಗೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಗೈರಾಗಿದ್ದಕ್ಕೆ ದಲಿತಪರ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಯಂತಿ ಆಚರಣೆಯ ರೂಪುರೇಷೆ ಕುರಿತು ಚರ್ಚಿಸಲು ಜಿಲ್ಲಾಡಳಿತ ದಲಿತ ಮುಖಂಡರು ಹಾಗೂ ಪ್ರಮುಖರ ಪೂರ್ವಭಾವಿ ಸಭೆ ಆಯೋಜಿತ್ತು. ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್ ಸಭೆ ನಡೆಸಲು ಮುಂದಾದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರ ಉಪಸ್ಥಿತಿಯಲ್ಲಿಯೇ ಪೂರ್ವಭಾವಿ ನಡೆಸಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಮುಖಂಡರು ಸಮಾಧಾನ ಪಡಿಸಲು ಪ್ರಯತ್ನಿಸಿದಾಗ ವಾಗ್ವಾದ ನಡೆಯಿತು. ಕೊನೆಗೆ ಮುಖಂಡರು ಸಭಾಂಗಣದಲ್ಲಿಯೇ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಕಚೇರಿ ಮುಂಭಾಗ ಆಗಮಿಸಿ ಧರಣಿ ಕುಳಿತರು.

ಜಿಲ್ಲಾಧಿಕಾರಿಗಳು ಕಚೇರಿಯಲ್ಲಿದ್ದರೂ ಬೇಕೆಂತಲೇ ಪೂರ್ವಭಾವಿ ಸಭೆಗೆ ಗೈರಾಗುವ ಮೂಲಕ ದಲಿತ ಮುಖಂಡರನ್ನು ಕಡೆಗಣಿಸಿದ್ದಾರೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರತಿಬಂಧಕ ಕಾಯ್ದೆ 1989 ರ ಪ್ರಕಾರ ಜಿಲ್ಲಾಕಾರಿ ಯಶವಂತ್ ವಿ. ಗುರುಕರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಬಾಬು ಜಗಜೀವನರಾಂ ಮತ್ತು ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದರೂ ಜಿಲ್ಲಾಡಳಿತ ಕೇವಲ ಕಾಟಾಚಾರಕ್ಕೆ ಜಯಂತಿ ನಡೆಸುವ ಹುನ್ನಾರ ನಡೆಸುತ್ತಿದೆ. ಹೀಗಾಗಿಯೇ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆಗೆ ಗೈರಾಗಿದ್ದಾರೆ. 5 ವರ್ಷದಲ್ಲಿ ಮೂರು ಬಾರಿ ಚುನಾವಣೆ ಸಮಯ ಇರುತ್ತದೆ. ಸಿಕ್ಕ ಒಂದೆರಡು ಅವಕಾಶಗಳಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಿಸಬೇಕೆಂಬುದು ಸಾರ್ವಜನಿಕರ ಕನಸಾಗಿದೆ. ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುತ್ತೇವೆ ಎಂದರು.

ಸಮತಾ ಸೈನಿಕ ದಳ ಯುವ ಘಟಕ ರಾಜ್ಯಾಧ್ಯಕ್ಷ ಗೋವಿಂದಯ್ಯ ಮಾತನಾಡಿ, ಜಿಲ್ಲೆಯ 4 ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಅದ್ಧೂರಿ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಮುಖಂಡರಾದ ಪಟ್ಲು ಗೋವಿಂದರಾಜು, ಮಲ್ಲಿಕಾರ್ಜುನ್ , ಶಿವಶಂಕರ್, ಕೊತ್ತೀಪುರ ಗೋವಿಂದರಾಜು, ಅಂಜನಾಪುರ ವಾಸು, ಚನ್ನಪಟ್ಟಣ ಹನುಮಂತಯ್ಯ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಹರೀಶ್ ಬಾಲು, ಕಷ್ಣಮೂರ್ತಿ, ಹರೀಶ್, ನರಸಿಂಹಯ್ಯ, ಸುರೇಶ್, ಪುನೀತ್, ರಮೇಶ್, ಕಷ್ಣಪ್ಪ, ಲೋಕೇಶ್ ಇತರರಿದ್ದರು.

ಡಿಸಿ ವಿರುದ್ಧ ಎಸ್ಪಿಗೆ ದೂರು

ದಲಿತ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಶ್ರೀನಿವಾಸ್‌ಗೆ ಜಿಲ್ಲಾಧಿಕಾರಿ ಯಶವಂತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕನ ವಿರುದ್ಧ ದಲಿತ ಮುಖಂಡರು ಕ್ರಮ ಜರುಗಿಸುವಂತೆ ಲಿಖಿತ ದೂರು ನೀಡಿದರು.

ಪೂರ್ವಭಾವಿ ಸಭೆ ಸ್ಥಳಾಂತರ

ಮೊದಲು ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಹಾಗಾಗಿ ದಲಿತ ಮುಖಂಡರೆಲ್ಲರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸಭೆ ಆರಂಭವಾಗುವ ಮುನ್ನಾ ಏಕಾಏಕಿ ಸಭೆ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಸ್ಥಳಾಂತರಗೊಂಡಿತು. ಇದು ಸಹ ಮುಖಂಡರ ಕೋಪಕ್ಕೆ ಕಾರಣವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ