ಹನಿಟ್ರ್ಯಾಪ್‌ ಪ್ರಕರಣ ಸಿಬಿಐ/ಹೈಕೋರ್ಟ್ ಜಡ್ಜ್‌ರಿಂದ ತನಿಖೆಯಾಗಲಿ : ಎನ್.ರವಿಕುಮಾರ

KannadaprabhaNewsNetwork |  
Published : Mar 27, 2025, 01:06 AM ISTUpdated : Mar 27, 2025, 01:27 PM IST
26ಕೆಡಿವಿಜಿ3-ದಾವಣಗೆರೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ವಿಪ ಮುಖ್ಯ ಸಚೇತಕ ಎನ್.ರವಿಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹನಿಟ್ರ್ಯಾಪ್ ಹಿಂದೆ ಯಾರೆಲ್ಲಾ ಇದ್ದಾರೆಂಬುದನ್ನು ಬಯಲಿಗೆಳೆಯಲು ಇಡೀ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಾಜ್ಯ ಸರ್ಕಾರ ತನಿಖೆಗೆ ಒಪ್ಪಿಸುವಂತೆ ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

 ದಾವಣಗೆರೆ : ಹನಿಟ್ರ್ಯಾಪ್ ಹಿಂದೆ ಯಾರೆಲ್ಲಾ ಇದ್ದಾರೆಂಬುದನ್ನು ಬಯಲಿಗೆಳೆಯಲು ಇಡೀ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಾಜ್ಯ ಸರ್ಕಾರ ತನಿಖೆಗೆ ಒಪ್ಪಿಸುವಂತೆ ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ ಒತ್ತಾಯಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದ ವಿಚಾರದಲ್ಲಿ ರಾಜ್ಯ ಸರ್ಕಾರದ ನೀತಿ, ಧೋರಣೆ, ನಿರ್ಧಾರವನ್ನು ವಿರೋಧಿಸಿ ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿ ರಾಜ್ಯವ್ಯಾಪಿ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದರು.

ಅತ್ಯಂತ ಗಂಭೀರವಾದ ಹನಿಟ್ರ್ಯಾಪ್ ಪ್ರಕರಣ ಬಗ್ಗೆ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ದೆಹಲಿಗೆ ಹೋಗಿ ಬಂದ ನಂತರ ಹೋರಾಟದ ರೂಪುರೇಷೆಯನ್ನು ಪಕ್ಷ ಸಿದ್ಧಪಡಿಸಲಿದೆ ಎಂದು ತಿಳಿಸಿದರು.

ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡುವ ಮುಸ್ಲಿಂ ತುಷ್ಟೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿರುವುದೇ ಸಂವಿಧಾನಬಾಹಿರವಾಗಿದೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದೇ ರೀತಿ ಕರ್ನಾಟಕದ ವಿಚಾರದಲ್ಲೂ ತಡೆಯಾಜ್ಞೆ ಸಿಗಲಿದೆ ಎಂದು ಅವರು ಹೇಳಿದರು.

ಮುಸ್ಲಿಂ ದಂಪತಿಗೆ ಮಾತ್ರವೇ ₹50 ಸಾವಿರ ಸಹಾಯಧನ ಏಕೆ? ಹಿಂದು ಬಡವರಿಗೂ ಸಹಾಯಧನ ನೀಡಿ. ವಿದೇಶದಲ್ಲಿ ವ್ಯಾಸಂಗ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ₹30 ಲಕ್ಷ ನೀಡುವುದು ಎಷ್ಟರಮಟ್ಟಿಗೆ ಸರಿ? ಪರಿಶಿಷ್ಟ ಜಾತಿ-ಪಂಗಡಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಘೋರ ಅನ್ಯಾಯವಾಗಿದೆ. ಎಸ್‌ಸಿಪಿ-ಟಿಎಸ್‌ಪಿಯಲ್ಲಿ ₹38 ಸಾವಿರ ಕೋಟಿಗಳನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಡಿ.ಕೆ.ಶಿವಕುಮಾರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.

ಕಾರ್ಮಿಕ ಇಲಾಖೆಯಲ್ಲೂ ಕಾರ್ಮಿಕರ ಕಿಟ್‌ಗೆ ಹೆಚ್ಚುವರಿ ಹಣ ನೀಡಿ, ಖರೀದಿಸುವ ಮೂಲಕ ದೊಡ್ಡಮಟ್ಟದ ಭ್ರಷ್ಟಾಚಾರ ಮಾಡಲಾಗಿದೆ. ಕಾರ್ಮಿಕರಿಗೆ ಕಿಟ್‌ಗಳನ್ನು ಬಿಡುಗಡೆ ಮಾಡಿರುವ ಪಟ್ಟಿಯನ್ನು ಕಾರ್ಮಿಕ ಇಲಾಖೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಸುಮಾರು ₹75 ಕೋಟಿಯಷ್ಟು ಹಗರಣ ನಡೆದಿದ್ದು, ಕಾರ್ಮಿಕ ಸಚಿವರು ರಾಜೀನಾಮೆ ನೀಡಬೇಕು. ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂದು ದೂರಿದರು.

ಮುಸ್ಲಿಮರ ಹಬ್ಬಕ್ಕೆ ಪ್ರಧಾನಿ ನೀಡುವ ಕಿಟ್‌ನಲ್ಲಿ ಯಾವುದೇ ವಿಶೇಷವೇನೂ ಇಲ್ಲ. ಎಲ್ಲ ಬಡವರಿಗೂ ನೀಡಲಿ ಎಂದು ವಿಪ ಮುಖ್ಯ ಸಚೇತಕ ಎನ್.ರವಿಕುಮಾರ ಮನವಿ ಮಾಡಿದರು.

ಪಕ್ಷದ ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ರವಿ, ಲಿಂಗರಾಜ, ಹರೀಶ ಹೊನ್ನೂರು ಇತರರು ಇದ್ದರು.

ತೊಗರಿ ರೈತರಿಗೆ ₹800 ಕೋಟಿ ಪ್ಯಾಕೇಜ್‌ ಘೋಷಿಸಿರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ರೈತರಿಗೆ ಪರಿಹಾರವಾಗಲೀ, ನ್ಯಾಯವಾಗಲಿ ಸಿಗುತ್ತಿಲ್ಲ. ತೊಗರಿ ರೈತರ ಹಿತ ಕಾಯಲು ₹800 ಕೋಟಿ ಪ್ಯಾಕೇಜನ್ನು ಸರ್ಕಾರ ಘೋಷಣೆ ಮಾಡಬೇಕು. ಸ್ಮಾರ್ಟ್ ಮೀಟರ್ ರಾಜ್ಯದ ಜನರಿಗೆ ಹೊರೆಯಾಗಿದೆ. ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಸಾವಿರಾರು ಕೋಟಿ ರು. ಭ್ರಷ್ಟಾಚಾರ ನಡೆದಿದೆ. ಉತ್ತರ ಪ್ರದೇಶದಲ್ಲಿ ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ರಾಜ್ಯ ಸರ್ಕಾರ ಗುತ್ತಿಗೆ ನೀಡಿದೆ. ಇಂಧನ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸ್ಮಾರ್ಟ್ ಮೀಟರ್ ಹಗರಣದ ಬಗ್ಗೆಯೂ ಉನ್ನತಮಟ್ಟದ ತನಿಖೆ ಆಗಬೇಕು ಎಂದರು. 

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ