ದಲಿತ ಕಾಲೋನಿಯ ಸರ್ಕಾರಿ ಜಾಗ ಕಬಳಿಕೆ ಹುನ್ನಾರ; ದಲಿತ ಮುಖಂಡರಿಂದ ಪ್ರತಿಭಟನೆ

KannadaprabhaNewsNetwork |  
Published : Sep 21, 2025, 02:00 AM IST
ಕೆ ಕೆ ಪಿ ಸುದ್ದಿ 01: ದಲಿತ ಕಾಲೋನಿಯಲ್ಲಿರುವ ಸರ್ಕಾರಿ ಜಾಗ ಕಬಳಿಸಲು  ಹುನ್ನಾರ ನಡೆಸುತ್ತಿರುವುವರ ವಿರುದ್ಧ ದಲಿತ ಮುಖಂಡರ ಆಕ್ರೋಶ.  | Kannada Prabha

ಸಾರಾಂಶ

ಕೆಲ ಮೇಲ್ವರ್ಗದವರು ಏಕಾಏಕಿ ಬಂದು ಸುಳ್ಳು ದಾಖಲೆ ತೋರಿಸಿ, ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಿ ಎಂದು ಆರಕ್ಷಕರ ಮೂಲಕ ಬೆದರಿಕೆ ಹಾಕುತ್ತಿದ್ದು, ನಾವು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಮೂಲ ದಾಖಲೆ ಪ್ರಕಾರ ಈ ಜಾಗವನ್ನು ತಾಲೂಕು ಆಡಳಿತ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಕೆಲ ಪಟ್ಟಭದ್ರ ಶಕ್ತಿಗಳ ಕೈವಾಡದಿಂದ ದಲಿತರ ಕೇರಿಯ ಜಾಗ ಕಬಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ನಗರದ ಅಂಬೇಡ್ಕರ್ ಕಾಲೋನಿಯ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಇರುವ 30 ಗುಂಟೆ ಸರ್ಕಾರಿ ಜಾಗ ಲಪಾಟಯಿಸುವ ಹುನ್ನಾರದ ವಿರುದ್ಧ ಜಾಗದ ಸುತ್ತಮುತ್ತಲಿನ ನಿವಾಸಿಗಳು ಹಾಗೂ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ದಲಿತ ಮುಖಂಡ ಗೋಪಿ ಮಾತನಾಡಿ, ಪೂರ್ವಜರ ಕಾಲದಿಂದಲೂ ಈ ಜಾಗ ಸರ್ಕಾರಿ ದಾಖಲೆಗಳಲ್ಲಿ ಸರ್ಕಾರಿ ಕಟ್ಟೆ ಎಂದು ಉಲ್ಲೇಖವಿದ್ದು, ಈಗಲೂ ಸಹ ಭೂ ಪಹಣಿಯಲ್ಲಿ ಅದೇ ಹೆಸರು ಬರುತ್ತಿದ್ದು, ಶಿವನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.83 ಎಂದೇ ದಾಖಲಾಗಿದೆ. ಆದರೆ ಕೆಲವರು ಕಂದಾಯ ಇಲಾಖೆ ಸಿಬ್ಬಂದಿ ಜೊತೆ ಶಾಮೀಲಾಗಿ ಈ ಜಾಗ ಕಬಳಿಸಲು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೆಲ ಮೇಲ್ವರ್ಗದವರು ಏಕಾಏಕಿ ಬಂದು ಸುಳ್ಳು ದಾಖಲೆ ತೋರಿಸಿ, ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಿ ಎಂದು ಆರಕ್ಷಕರ ಮೂಲಕ ಬೆದರಿಕೆ ಹಾಕುತ್ತಿದ್ದು, ನಾವು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಮೂಲ ದಾಖಲೆ ಪ್ರಕಾರ ಈ ಜಾಗವನ್ನು ತಾಲೂಕು ಆಡಳಿತ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

ದಲಿತ ಯುವ ಮುಖಂಡ ಶೇಖರ್ ಮಾತನಾಡಿ, ಹಲವು ದಶಕಗಳಿಂದ ನಮ್ಮ ಹಿರಿಯರು ಇಲ್ಲಿ ವಾಸಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಸರ್ಕಾರಿ ಶಾಲೆ ತೆರೆದಿದ್ದು, ಪಕ್ಕದಲ್ಲಿಯೇ ಅಂಗನವಾಡಿಯೂ ಇದೆ. ನಮ್ಮ ಮಕ್ಕಳ ಕ್ರೀಡಾ ಚಟುವಟಿಕೆಗಾಗಿ ಈ ಜಾಗ ಬಳಸುತ್ತಿರುವುದನ್ನು ಸಹಿಸದ ಕೆಲವರು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ಮನೆಯಲ್ಲಿ ಪುರುಷರು ಇಲ್ಲದ ವೇಳೆ ಬಂದು ಇದು ನಮ್ಮ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದು, ಮಹಿಳೆಯರು ಭಯಭೀತರಾಗಿದ್ದಾರೆ.ಮುಂದಿನ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಏನೇ ತೊಂದರೆಯಾದರೂ ತಾಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್‌ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಸಿದರು.

ದಲಿತ ಮುಖಂಡರಾದ ವಿಜಯ್ ಕುಮಾರ್, ಗುಂಡ ಪ್ರಮೋದ, ಮಹೇಶ್.ಎಂ., ಮಹೇಶ್.ಎಸ್, ನಟರಾಜು ರವಿಕಿರಣ್, ಚಂದ್ರಕಾಂತ್, ವಿಠ್ಠಲ, ಕೋಳಿ ಶಿವಲಿಂಗಯ್ಯ ಹಾಗೂ ಸ್ಥಳೀಯ ದಲಿತ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ