ಶವಸಂಸ್ಕಾರಕ್ಕೆ ದಲಿತರ ಪರದಾಟ: ಅಧಿಕಾರಿ ಮಧ್ಯಸ್ಥಿಕೆ

KannadaprabhaNewsNetwork |  
Published : Jul 22, 2024, 01:22 AM IST
ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸುತ್ತಿರವುದು | Kannada Prabha

ಸಾರಾಂಶ

ವಡ್ಡಗೆರೆ ಗ್ರಾಮದ ಹನುಮಂತರಾಯಪ್ಪ ಎಂಬ ದಲಿತ ವ್ಯಕ್ತಿ ಅಂತ್ಯಕ್ರಿಯೆಗೆ ಭೂಮಿ ಮಾಲೀಕರು ಅಡ್ಡಿಪಡಿಸಿದ ನಂತರ ತಹಸೀಲ್ದಾರ್‌ ಮಧ್ಯಸ್ಥಿಕೆ ವಹಿಸಿ

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ವಡ್ಡಗೆರೆ ಗ್ರಾಮದ ಹನುಮಂತರಾಯಪ್ಪ ಎಂಬ ದಲಿತ ವ್ಯಕ್ತಿ ಅಂತ್ಯಕ್ರಿಯೆಗೆ ಭೂಮಿ ಮಾಲೀಕರು ಅಡ್ಡಿಪಡಿಸಿದ ನಂತರ ತಹಸೀಲ್ದಾರ್‌ ಮಧ್ಯಸ್ಥಿಕೆ ವಹಿಸಿ ಅಂತ್ಯಕ್ರಿಯೆಗೆ ನೆರವಾಗಿದ್ದಾರೆ.

ಹನುಮಂತರಾಯಪ್ಪ ಶುಕ್ರವಾರ ಸಂಜೆ ಅನಾರೋಗ್ಯದಿಂದ ಮರಣ ಹೊಂದಿದ್ದರು. ಅಂತ್ಯಕ್ರಿಯೆ ವೇಳೆ ಈ ಭೂಮಿ ತಮ್ಮ ತಂದೆಯ ಹೆಸರಿನಲ್ಲಿದೆ, ಹಾಗಾಗಿ ಇಲ್ಲಿ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಜಮೀನು ಮಾಲೀಕರು ಅಡ್ಡಿಪಡಿಸಿದ್ದಾರೆ. ಶತಮಾನಗಳಿಂದ ತಾವು ಇಲ್ಲಿ ಶವ ಸಂಸ್ಕಾರ ಮಾಡುತ್ತ ಬಂದಿದ್ದೇವೆ ಎಂದು ಆದಿ ಕರ್ನಾಟಕ ಜನಾಂಗದವರು ಪ್ರತಿಭಟನೆ ನಡೆಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ್ ಅಂತ್ಯಕ್ರಿಯೆ ಮಾಡಲು ಜಮೀನು ಮಾಲೀಕನ ಮನವೊಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸರ್ವೆ ನಂ 76 ರಲ್ಲಿ ತಲವಾರು ಕಾಯ್ದೆಯಡಿ ವಂಶಸ್ಥರಿಗೆ ಜಮೀನು ಮಂಜೂರಾಗಿದ್ದು, ಹಲವು ತಲೆ ಮಾರುಗಳಿಂದ ಪರಿಶಿಷ್ಟ ಜನಾಂಗದವರು ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 2014 ರಲ್ಲಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಗ್ರಾಮದ ಸರ್ವೆ ನಂ 112 ರಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಾರ್ವಜನಿಕ ಸ್ಮಶಾನ ಗುರುತಿಸಿದ್ದು, ನಾವು ಕೂಡ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗುರುತಿಸಿರುವ ಸ್ಮಶಾನ ಜಾಗವನ್ನು ಅಭಿವೃದ್ಧಿಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ. ಜಮೀನು ಮಾಲೀಕ ಹನುಮಂತಯ್ಯನ ಮಕ್ಕಳಿಗೆ ಈ ಬಾರಿ ಇಲ್ಲೇ ಶವ ಸಂಸ್ಕಾರ ಮಾಡಿಸುವಂತೆ ಕೇಳಿಕೊಂಡಾಗ ಶವ ಸಂಸ್ಕಾರ ಮಾಡಲು ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಯ್ಯ ಮಾತನಾಡಿ, ಜಿಲ್ಲಾಧಿಕಾರಿ ಸ್ಮಶಾನ ಜಾಗ ಗುರುತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಆದರೆ ಸರ್ವೆ ಅಧಿಕಾರಿಗಳು ಕಚೇರಿಯಲ್ಲಿ ಕೂತು ಸ್ಥಳ ಪರಿಶೀಲನೆ ನಡೆಸದೆ ಕಲ್ಲು ಬಂಡೆಗಳು ಸಿಗುವಂತಹ ಜಾಗವನ್ನು ಗುರುತಿಸಿದ್ದಾರೆ. ಈ ಜಾಗವು ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರವಿದೆ. ಒಂದು ಊರು ಬಿಟ್ಟು ಮತ್ತೊಂದು ಊರಿಗೆ ಶವ ಸಾಗಿಸಲು ಕಷ್ಟಕರವಾಗಿದೆ. ದಯವಿಟ್ಟು ಈಗಿರುವ ರುದ್ರ ಭೂಮಿಯನ್ನೇ ನಮಗೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಬ್ ಇನ್‌ಸ್ಪೆಕ್ಟರ್ ಚೇತನ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಯಮುನಾ, ದಲಿತ ಮುಖಂಡರು ಸೇರಿದಂತೆ ಇತರರು ಇದ್ದರು. ಫೋಟೋ: ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ದಲಿತ ಶವಸಂಸ್ಕಾರ ಭೂಮಿಗೆ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ