ನಾಲೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

KannadaprabhaNewsNetwork | Published : Mar 26, 2024 1:00 AM

ಸಾರಾಂಶ

ಮಳೆ ಕೊರತೆ, ನೀರಿನ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ರಾಜ್ಯದ ಕಾವೇರಿ ಕಣಿವೆ ರೈತರು ಹಾಗೂ ಜನರ ಹಿತ ಬಲಿಕೊಟ್ಟಿದೆ. ಜಲಾಶಯಗಳಲ್ಲಿ ಇದ್ದ ನೀರು ನೆರೆ ರಾಜ್ಯಕ್ಕೆ ಹರಿದ ಪರಿಣಾಮ ಇಲ್ಲಿನ ರೈತರು ಬೆಳೆ ಹಾಕದ ಪರಿಸ್ಥಿತಿ ನಿರ್ಮಾಣವಾಗಿದೆ, ಜಮೀನಿನಲ್ಲಿರುವ ಬೆಳೆ ಬಿರು ಬಿಸಿಲಿಗೆ ಒಣಗಿ ತರಗಾಗುತ್ತಿದೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಬೆಳೆದು ನಿಂತಿರುವ ಬೆಳೆಗಳಿಗೆ ಕೂಡಲೇ ನೀರು ಹರಿಸಿ ಸಂರಕ್ಷಣೆ ಮಾಡುವುದರ ಜೊತೆಗೆ ಭೀಕರ ಬರಗಾಲದಿಂದ ತತ್ತರಿಸಿರುವ ಜನರಿಗೆ ಬರಪರಿಹಾರ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರಿನಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.

ಮಳೆ ಕೊರತೆ, ನೀರಿನ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ರಾಜ್ಯದ ಕಾವೇರಿ ಕಣಿವೆ ರೈತರು ಹಾಗೂ ಜನರ ಹಿತ ಬಲಿಕೊಟ್ಟಿದೆ. ಜಲಾಶಯಗಳಲ್ಲಿ ಇದ್ದ ನೀರು ನೆರೆ ರಾಜ್ಯಕ್ಕೆ ಹರಿದ ಪರಿಣಾಮ ಇಲ್ಲಿನ ರೈತರು ಬೆಳೆ ಹಾಕದ ಪರಿಸ್ಥಿತಿ ನಿರ್ಮಾಣವಾಗಿದೆ, ಜಮೀನಿನಲ್ಲಿರುವ ಬೆಳೆ ಬಿರು ಬಿಸಿಲಿಗೆ ಒಣಗಿ ತರಗಾಗುತ್ತಿದೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಆದರೂ ಸಹ ಆಳುವ ಸರ್ಕಾರ ಚುನಾವಣೆ ಕಾರ್ಯಚಟುವಟಿಕೆಯಲ್ಲಿ ಬ್ಯುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ, ಕೃಷ್ಣ, ಭೀಮಾ ನದಿ ಕರ್ನಾಟಕವನ್ನು ಸುತ್ತುವರಿದಿದ್ದರೂ ಸಹ ನೆರೆ ರಾಜ್ಯಗಳೊಂದಿಗೆ ಉಂಟಾಗಿರುವ ಜಲ ವಿವಾದಗಳಲ್ಲಿ ಕೇಂದ್ರ-ರಾಜ್ಯ ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಕಾನೂನು ಹೋರಾಟದಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ ಇದರಿಂದ ಕರ್ನಾಟಕದ ನೀರಿನ ಪಾಲು ಮರೀಚಿಕೆಯಾಗಿದೆ ಎಂದರು.

ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಮುಂದಾಗಬೇಕು, ಜನ- ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಬೇಕು ಹಾಗೂ ರೈತರು, ಕೃಷಿ ಕಾರ್ಮಿಕರಿಗೆ ತಲಾ ೫೦ ಸಾವಿರ ರು.ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಅನಿಲ್‌ಕುಮಾರ್ ಕೆರಗೋಡು, ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ, ಸೋಮಶೇಖರ್, ಭಾಗ್ಯಮ್ಮ, ಗೀತಾ ಮೇಲುಕೋಟೆ, ಸುಕನ್ಯಾ, ಸುರೇಶ್‌ಕುಮಾರ್, ಬಿ.ಆನಂದ, ಬಸವರಾಜ್, ಬಲರಾಮ ಇತರರಿದ್ದರು.

Share this article