ದಲಿತ ವಿದ್ಯಾರ್ಥಿಗೆ ಮಾನಸಿಕ ಹಿಂಸೆ ಆರೋಪ

KannadaprabhaNewsNetwork |  
Published : May 20, 2026, 12:45 AM IST
ಪತ್ರಿಕಾಗೋಷ್ಠಿಯಲ್ಲಿ ಮಂಜು ತೇಜೂರು, ಉಮೇಶ್ ಹೆಚ್.ಜೆ., ರಾಮು ನರಸಿನಕುಪ್ಪೆ, ತೋಟೇಶ್ ನಿಟ್ಟೂರು ಹಾಗೂ ಗಣೇಶ್ ವೇಲಾಪುರಿ ಇತರರು  ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಪರಿಶಿಷ್ಠ ಜಾತಿಗೆ ಸೇರಿದ ವರ್ಧನ್ ಎಂ. ಬಿನ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿ 2023ರ ಜನವರಿ 6ರಂದು ಹಾಸನದ ಪಶುವೈದ್ಯಕೀಯ ಕಾಲೇಜಿಗೆ ಎನ್‌ಆರ್‌ಐ ಕೋಟಾದಡಿ ಪ್ರಥಮ ಬಿ.ವಿ.ಎಸ್/ಎ. ಎಚ್ ಕೋರ್ಸ್‌ಗೆ ದಾಖಲಾಗಿದ್ದಾನೆ.

- ಪಶುವೈದ್ಯಕೀಯ ಕಾಲೇಜಿನ ವಿರುದ್ಧ ಸಮಿತಿ ಆಕ್ರೋಶ । ಪ್ರಕರಣ ದಾಖಲಿಸಲು ಸಂದೇಶ್ ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ಇಲ್ಲಿನ ಪಶುವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಲಿತ ವಿದ್ಯಾರ್ಥಿಗೆ ರ್ಯಾಗಿಂಗ್, ಮಾನಸಿಕ ಕಿರುಕುಳ ಹಾಗೂ ಶಿಕ್ಷಣದಲ್ಲಿ ಅನ್ಯಾಯ ಮಾಡಲಾಗಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಎಚ್. ಕೆ. ಸಂದೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಿದ್ಯಾರ್ಥಿಯ ಭವಿಷ್ಯ ಹಾಳು ಮಾಡಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಸರ್ಕಾರವನ್ನು ಆಗ್ರಹಿಸಿದರು. ಪರಿಶಿಷ್ಠ ಜಾತಿಗೆ ಸೇರಿದ ವರ್ಧನ್ ಎಂ. ಬಿನ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿ 2023ರ ಜನವರಿ 6ರಂದು ಹಾಸನದ ಪಶುವೈದ್ಯಕೀಯ ಕಾಲೇಜಿಗೆ ಎನ್‌ಆರ್‌ಐ ಕೋಟಾದಡಿ ಪ್ರಥಮ ಬಿ.ವಿ.ಎಸ್/ಎ. ಎಚ್ ಕೋರ್ಸ್‌ಗೆ ದಾಖಲಾಗಿದ್ದಾನೆ. ಈ ಕೋರ್ಸ್‌ಗೆ ವಾರ್ಷಿಕ ಸುಮಾರು 12 ಲಕ್ಷ ಶುಲ್ಕ ಪಾವತಿಸಲಾಗಿದ್ದು, ಎಲ್ಲಾ ವೆಚ್ಚಗಳನ್ನು ಸೇರಿಸಿ ಭಾರೀ ಮೊತ್ತ ಖರ್ಚು ಮಾಡಲಾಗಿದೆ ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಪ್ರಥಮ ವರ್ಷದಲ್ಲಿ ಅನುತ್ತೀರ್ಣನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಹಾಗೂ ಪೋಷಕರು ಉತ್ತರ ಪತ್ರಿಕೆಗಳನ್ನು ತೋರಿಸಲು ಕಾಲೇಜು ಮಂಡಳಿಗೆ ಮನವಿ ಮಾಡಿದರೂ, ಕಾಲೇಜು ಆಡಳಿತ ಮಂಡಳಿ ಉತ್ತರ ಪತ್ರಿಕೆಗಳನ್ನು ನೀಡಲು ನಿರಾಕರಿಸಿದೆ. ಸೀಟು ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ಮತ್ತೆ ವಾರ್ಷಿಕ 12 ಲಕ್ಷ ಪಾವತಿಸಿ ವಿದ್ಯಾರ್ಥಿಯನ್ನು ಪುನಃ ಅದೇ ವರ್ಷಕ್ಕೆ ದಾಖಲಿಸಲಾಗಿದೆ. ಇದೇ ವೇಳೆ ಕಾಲೇಜು ಹಾಸ್ಟೆಲ್ ಮತ್ತು ಕ್ಯಾಂಪಸ್‌ನಲ್ಲಿ ಕೆಲ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಕಿರುಕುಳದಿಂದ ವಿದ್ಯಾರ್ಥಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ. ಬಳಿಕ ವಿದ್ಯಾರ್ಥಿ ತನ್ನ ಪೋಷಕರೊಂದಿಗೆ ಚರ್ಚಿಸಿ 2024ರ ಫೆಬ್ರವರಿ 26ರಂದು ಕಾಲೇಜಿನ ಡೀನ್‌ಗೆ ಲಿಖಿತ ದೂರು ನೀಡಿದ್ದಾನೆ. ದೂರಿನ ಹಿನ್ನೆಲೆಯಲ್ಲಿ ಕಾಲೇಜು ಆಡಳಿತವು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಈ ಸಮಿತಿ ತನಿಖೆ ನಡೆಸಿ 2024ರ ಮಾರ್ಚ್ 2ರಂದು ರ್ಯಾಗಿಂಗ್ ನಡೆದಿರುವುದು ಸತ್ಯ ಎಂಬ ವರದಿ ನೀಡಿದೆ ಎಂದು ಸಂಘಟನೆ ತಿಳಿಸಿದೆ. ಆದರೆ ವರದಿ ಸ್ಪಷ್ಟವಾಗಿದ್ದರೂ ರ್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇವಲ ಸಣ್ಣ ಪ್ರಮಾಣದ ಶಿಕ್ಷೆ ವಿಧಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ. ಇದರ ನಂತರ ವಿದ್ಯಾರ್ಥಿಯನ್ನು ಕಾಲೇಜು ಆಡಳಿತವೇ ಟಾರ್ಗೆಟ್ ಮಾಡಿದೆ. ಆಂತರಿಕ ಅಂಕಗಳನ್ನು ಸರಿಯಾಗಿ ನೀಡದೇ ಮತ್ತೆ ಪ್ರಥಮ ವರ್ಷದಲ್ಲೇ ಅನುತ್ತೀರ್ಣಗೊಳಿಸುವ ಮೂಲಕ ವಿದ್ಯಾರ್ಥಿಗೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ದೂರಿದರು.

ಈ ಕುರಿತು ವಿದ್ಯಾರ್ಥಿ ಅನುತ್ತೀರ್ಣನಾಗಲು ಕಾರಣವಾದ ಅಂಶಗಳನ್ನು ತಿಳಿಸಿ ಉತ್ತರ ಪತ್ರಿಕೆಗಳನ್ನು ತೋರಿಸಲು ಮನವಿ ಮಾಡಿದ್ದಾನೆ. ರಾಜ್ಯ ಮಾಹಿತಿ ಆಯೋಗವು 2026ರ ಜನವರಿ 22ರಂದು ಉತ್ತರ ಪತ್ರಿಕೆ ತೋರಿಸಲು ಸೂಚನೆ ನೀಡಿದ್ದರೂ ಕಾಲೇಜು ಮಂಡಳಿ ಅದನ್ನು ಪಾಲಿಸಿಲ್ಲ. ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌ನ ರಿಜಿಸ್ಟ್ರಾರ್ ಅವರಿಗೆ 2024ರ ಡಿಸೆಂಬರ್ 11 ಹಾಗೂ 2025ರ ಡಿಸೆಂಬರ್ 21ರಂದು ಲಿಖಿತ ದೂರು ನೀಡಲಾಗಿದೆ.

ಇದೇ ವೇಳೆ ಕಾಲೇಜಿನ ಅವ್ಯವಸ್ಥೆ ಮತ್ತು ಮಿತಿಮೀರಿದ ರ್ಯಾಗಿಂಗ್ ಪ್ರಕರಣಗಳ ಕುರಿತು 2026ರ ಏಪ್ರಿಲ್ 28ರಂದು ವಿವಿಧ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳಲ್ಲಿ ಪ್ರಸಾರವಾದ ಸುದ್ದಿಗಳನ್ನು ಉಲ್ಲೇಖಿಸಿ, ಕಾಲೇಜಿನ ಆಡಳಿತ ವೈಫಲ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಕಾಲೇಜಿನ ಹಿಂದಿನ ಡೀನ್ ಶಿವಕುಮಾರ್, ಪ್ರಸ್ತುತ ಡೀನ್ ಹುದ್ದೆಯ ಜವಾಬ್ದಾರಿ ನಿರ್ವಹಿಸುತ್ತಿರುವ ನಟರಾಜ್ ಹಾಗೂ ರ್ಯಾಗಿಂಗ್ ನಡೆಸಿದ ಆರೋಪ ಇರುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ-1989ರಡಿ ಪ್ರಕರಣ ದಾಖಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜು ತೇಜೂರು, ಉಮೇಶ್ ಎಚ್. ಜೆ, ರಾಮು ನರಸಿನಕುಪ್ಪೆ, ತೋಟೇಶ್ ನಿಟ್ಟೂರು ಹಾಗೂ ಗಣೇಶ್ ವೇಲಾಪುರಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಂಚದ ಹಣ ವಶಪಡಿಸಿಕೊಂಡಿಲ್ಲದಕಾರಣಕ್ಕೆ ತನಿಖೆ ರದ್ದಾಗದು: ಕೋರ್ಟ್‌
ಜಂಟಿ ಸರ್ವೆ ಬಳಿಕ ಸಮರೋಪಾದಿಯಲ್ಲಿ ಹಕ್ಕುಪತ್ರ ವಿತರಣೆ: ಶಾಸಕ ಟಿ.ಡಿ.ರಾಜೇಗೌಡ