ಮುತಾಂತರಗೊಳ್ಳುವಂತೆ ದಲಿತ ಮಹಿಳೆಗೆ ಬ್ಲ್ಯಾಕ್‌ಮೇಲ್‌

KannadaprabhaNewsNetwork |  
Published : Apr 22, 2024, 02:15 AM IST
ಅಅಅಅ | Kannada Prabha

ಸಾರಾಂಶ

ನೇಹಾ ಹತ್ಯೆ ಪ್ರಕರಣ ಕಾವು ಪಡೆದಿರುವಾಗಲೇ, ವಿವಾಹಿತ ದಲಿತ ಮಹಿಳೆಯನ್ನು ಇಸ್ಲಾಂಗೆ ಮತಾಂತರ ಮಾಡುವ ಯತ್ನ ನಡೆದಿರುವ ಘಟನೆ ನೇಹಾ ಹತ್ಯೆಯ ಆರೋಪಿ ಫಯಾಜ್‌ನ ಊರಲ್ಲೇ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಬ್ಬಳಿಯಲ್ಲಿ ಕಾಲೇಜು ಆವರಣದಲ್ಲೇ ನೇಹಾ ಹತ್ಯೆ ಪ್ರಕರಣ ಕಾವು ಪಡೆದಿರುವಾಗಲೇ, ವಿವಾಹಿತ ದಲಿತ ಮಹಿಳೆಯನ್ನು ಇಸ್ಲಾಂಗೆ ಮತಾಂತರ ಮಾಡುವ ಯತ್ನ ನಡೆದಿರುವ ಘಟನೆ ನೇಹಾ ಹತ್ಯೆಯ ಆರೋಪಿ ಫಯಾಜ್‌ನ ಊರಲ್ಲೇ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸವದತ್ತಿ ತಾಲೂಕಿನ ರಫೀಕ್‌ ಲಾಲಸಾಬ್‌ ಬೇಪಾರಿ ಬಂಧಿತ. ಈತನಿಗೆ ಸಹಕರಿಸಿದ ಆದಿಲ್‌, ಸೊಹೇಲ್‌, ಮುಕ್ತುಂ, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್‌ ವಿರುದ್ಧ ಸವದತ್ತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಹಿನ್ನೆಲೆ :

ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯ ಕುಟುಂಬಸ್ಥರು ಕಿರಾಣಿ ಅಂಗಡಿ ನಡೆಸುತ್ತಿದ್ದರು. ನೊಂದ ಮಹಿಳೆಯ ಅತ್ತೆ ಕಿರಾಣಿ ಅಂಗಡಿಯಲ್ಲಿ ಕೂರುತ್ತಿದ್ದರು. ಅವರು ಮನೆಗೆ ಹೋದಾಗ ಈ ಮಹಿಳೆ ಆಗಾಗ ಅಂಗಡಿಯಲ್ಲಿ ಕೂರುತ್ತಿದ್ದಳು. ಆರೋಪಿ ರಫೀಕ್‌ ಬೇಪಾರಿ ಇದೇ ಅಂಗಡಿಗೆ ಬಂದು ಅಗತ್ಯ ಸಾಮಗ್ರಿ ಖರೀದಿಸುತ್ತಿದ್ದ. ಇದರಿಂದ ಮಹಿಳೆ ಹಾಗೂ ಆರೋಪಿ ರಫೀಕ್‌ ನಡುವೆ ಪರಿಚಯವಾಗಿದೆ. ನನಗೆ ರಾಜಕಾರಣಿಗಳು, ಅಧಿಕಾರಿಗಳ ಸಂಪರ್ಕ ಇದ್ದು, ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ರಫೀಕ್‌ ನಂಬಿಸಿದ್ದಾನೆ. ಈತನ ಬಣ್ಣದ ಮಾತು ನಂಬಿದ ಮಹಿಳೆ ಆತನೊಂದಿಗೆ ಸಲುಗೆಯಿಂದ ವರ್ತಿಸಿದ್ದಾಳೆ. ಆರೋಪಿ ಪುಸಲಾಯಿಸಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು, ಮಹಿಳೆಯೊಂದಗಿನ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋ ಮಾಡಿಕೊಂಡಿದ್ದಾನೆ. ನಂತರ ದಿನಗಳಲ್ಲಿ ಮಹಿಳೆ ಹಾಗೂ ಪತಿಯ ಮಧ್ಯೆ ವೈಮನಸ್ಸು ತಂದಿಟ್ಟುದ್ದು, ಮಹಿಳೆ ಗಂಡನೊಂದಿಗೆ ಜಗಳವಾಡಿ ಎರಡು ತಿಂಗಳು ತವರು ಮನೆ ಸೇರಿದ್ದಳು.

ಬಳಿಕ ಹಿರಿಯರು ಸೇರಿ ದಂಪತಿಗೆ ತಿಳಿಹೇಳಿದ ಬಳಿಕ ಮಹಿಳೆ ಗಂಡನ ಮನೆಗೆ ಮರಳಿದ್ದಳು. ಆದರೂ ಸುಮ್ಮನಾಗದ ರಫೀಕ್‌ ಮಹಿಳೆಗೆ ಮೇಲಿಂದ ಮೇಲೆ ಫೋನ್‌ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ರಫೀಕ್‌ ನೀನು ದೂರಾದರೆ ನನ್ನ ಹಾಗೂ ನಿನ್ನ ಖಾಸಗಿ ಕ್ಷಣದ ಫೋಟೋ ಬಹಿರಂಗಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಆತ ಹೇಳಿದಂತೆ ನಡೆದುಕೊಂಡಿದ್ದಾಳೆ. ಪಕ್ಕದ ಮನೆಯ ಮಹಿಳೆಯಿಂದ ಈ ವಿಷಯ ಊರಿನ ಜನರಿಗೆಲ್ಲ ಗೊತ್ತಾಗಿ ಮತ್ತೆ ದಂಪತಿ ನಡುವೆ ಜಗಳವಾಗಿ ಮುನಿಸಿಕೊಂಡ ಮಹಿಳೆ ತವರು ಮನೆಗೆ ಹೋಗಲು ಮುಂದಾಗಿದ್ದಾಳೆ. ಈ ವಿಷಯ ತಿಳಿದ ಆರೋಪಿ ರಫೀಕ್‌, ಮಹಿಳೆಗೆ ಫೋನ್‌ ಮಾಡಿ ತವರು ಮನೆಗೆ ಹೋಗುವುದು ಬೇಡ. ನಿನಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತೇನೆ. ಆದಿಲ್‌ ಎಂಬಾತ ಕಾರು ತೆಗೆದುಕೊಂಡು ಬರುತ್ತಾನೆ. ಆತನೊಂದಿಗೆ ಬೆಳಗಾವಿಗೆ ಹೋಗುವಂತೆ ತಿಳಿಸಿದ್ದಾನೆ.

ಬಳಿಕ ಆದಿಲ್‌ ಮಹಿಳೆಯನ್ನು ಬೆಳಗಾವಿಯಲ್ಲಿರುವ ಆಯಿಷಾ ಎಂಬ ಮಹಿಳೆ ಬಳಿ ಕರೆದುಕೊಂಡು ಹೋಗಿದ್ದು, ಆಕೆ ಬೆಳಗಾವಿ ಶಾಹುನಗರದ ದುರ್ಗಾಮಾತಾ ಗಲ್ಲಿಯಲ್ಲಿರುವ ಶಾರದಾ ಮಾತಾ ಸ್ವಾಧಾರ ಕ್ಷೇಂದ್ರಕ್ಕೆ ತಂದು ಬಿಟ್ಟಿದ್ದಾಳೆ. ಆರೋಪಿ ಹೇಳಿದಂತೆ ಮಹಿಳೆ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ದಾವೆ ಹಾಕಿದ್ದಾಳೆ. ನಾಲ್ಕು ತಿಂಗಳ ಕಾಲ ಸ್ವಾಧಾರ ಕೇಂದ್ರಲ್ಲಿ ವಾಸವಾಗಿದ್ದ ಮಹಿಳೆಯನ್ನು ಬಳಿಕ ಬಸವ ಕಾಲನಿಯಲ್ಲಿರುವ ಬಾಡಿಗೆ ಮನೆಯಲ್ಲಿ ಇಟ್ಟಿದ್ದಾನೆ. ಈ ಮನೆಗೆ ಕೌಸರ್‌ ಎಂಬುವವಳನ್ನು ಕಾವಲಿಗೆ ಇಟ್ಟು, ಹೊರಗೆ ಎಲ್ಲೂ ಹೋಗದಂತೆ ನೋಡಿಕೊಂಡು ನಿರಂತರ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ನೀನು ಕೀಳು ಜಾತಿಯವಳು, ನನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸಿದ್ದಾನೆ. ಹಣೆ ಮೇಲೆ ಕುಂಕುಮ ಹಚ್ಚಬೇಡ, ದಿನಕ್ಕೆ 5 ಬಾರಿ ನಮಾಜ್‌ ಪಠಿಸು, ಬುರ್ಕಾ ಧರಿಸು, ಅಲ್ಲಾ ಒಬ್ಬನೆ ದೇವರು ಎಂದು ನಂಬಿ ಅವನನ್ನಷ್ಟೇ ಪ್ರಾರ್ಥಿಸುವಂತೆ ಒತ್ತಾಯಿಸಿದ್ದು, ತಾನು ಹೇಳಿದಂತೆ ಮಾಡದಿದ್ದಲ್ಲಿ ನೀನು ನಿನ್ನ ಕುಟುಂಬವನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಿನ್ನ ಗಂಡನನ್ನು ಹತ್ಯೆ ಮಾಡಲು ಪ್ಲ್ಯಾನ್‌ ಮಾಡಿರುವುದಾಗಿ ತಿಳಿಸಿದ್ದಾನೆ.

ಹೇಗೋ ಮಹಿಳೆ ಇರುವ ಸ್ಥಳ ಪತ್ತೆ ಹಚ್ಚಿದ ಪತಿ ಮಹಿಳೆ ಇದ್ದಲ್ಲಿಗೆ ಬಂದಾಗ ನಡೆದಿರುವ ಎಲ್ಲ ವಿಷಯವನ್ನು ಮಹಿಳೆ ತಿಳಿಸಿದ್ದು, ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆರೋಪಿ ರಫೀಕ್‌ನ ಸ್ನೇಹಿತರಾದ ಸೋಹೆಲ್‌, ಮುಕ್ತುಂ, ಆದಿಲ್‌ ಮತ್ತು ಉಮರ್‌ ಅವರನ್ನು ಹಿಂಬಾಲಿಸಿ ಮಹಿಳೆಗೆ ಫೋನ್‌ ಮಾಡಿ, ನಿನ್ನ ಬಳಿಯಿರುವ ಫೋಟೋ ಹಾಗೂ ಮೊಬೈಲ್‌ ಕೊಡದಿದ್ದರೆ ನಿನ್ನ ಹಾಗೂ ನಿನ್ನ ಗಂಡನನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಈಗಾಗಲೇ ಪ್ರಮುಖ ಆರೋಪಿ ರಫೀಕ್‌ ಬೇಪಾರಿಯನ್ನು ಬಂಧಿಸಲಾಗಿದೆ. ಎಲ್ಲ ಆಯಾಯಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.

-ಡಾ.ಭೀಮಾಶಂಕರ ಗುಳೇದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೆಳಗಾವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!