ಮರಿಯಮ್ಮನಹಳ್ಳಿ: ಐತಿಹಾಸಿಕ ಹಿನ್ನೆಲೆಯ ಜಿಲ್ಲೆಯ ಅತಿದೊಡ್ಡ ಕೆರೆ ಡಣಾಯಕನಕೆರೆ ಮಗದ ಬಳಿ ಇರುವ ಕನ್ನೀರಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿ ಕೆರೆಯ ದಂಡೆಯ ಮಣ್ಣು ಕುಸಿದು ಕೆರೆ ಬೊಂಗಾ ಬಿದ್ದಿರುವ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದಾರೆ.
ಕಳೆದ 2-3 ದಿನಗಳಿಂದ ಸತತ ಸುರಿಯುತ್ತಿರುವ ಮಳೆಗೆ ಕೆರೆಯ ಮಣ್ಣು ಸಡಿಲಗೊಂಡು ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಏಕಾಏಕಿ ದೊಡ್ಡದೊಂದು ಬೊಂಗಾ ಬಿದ್ದಿದೆ. ಕಳೆದ ತಿಂಗಳು ಕೆರೆ ತುಂಬಿ ಸಣ್ಣದಾಗಿ ಕೋಡಿ ಬಿದ್ದು ಹರಿಯುತ್ತಿದೆ. ಇದು ವಿಜಯನಗರ ಕಾಲದಲ್ಲಿ ನಿರ್ಮಿಸಿದ ಕೆರೆ. ಸುಮಾರು 2500ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಹೊಂದಿದೆ. ಕೆರೆ ನಂಬಿಕೊಂಡು ನೂರಾರು ರೈತರು ಜೀವನ ಸಾಗಿಸುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಕೆರೆ ತುಂಬಿ ಸಣ್ಣ ಪ್ರಮಾಣದಲ್ಲಿ ಕೋಡಿ ಹರಿದು, ನೀರು ಹರಿದು ಹೋಗುತ್ತಿದೆ. 2022ರಲ್ಲಿ ಇದೇ ಪ್ರದೇಶದಲ್ಲಿ ಬೊಂಗಾ ಬಿದ್ದಿತ್ತು. ಮತ್ತೆ ಈಗ ಕೆರೆ ಬೊಂಗಾ ಬಿದ್ದಿದ್ದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಈ ಕೆರೆ 2009, 2022ರಲ್ಲಿ ಎರಡು ಬಾರಿ ಬೊಂಗಾ ಬಿದ್ದಿತ್ತು. ಮೊದಲ ಬಾರಿಗೆ ಬೊಂಗಾ ಬಿದ್ದ ವೇಳೆ ಅಪಾರ ನೀರು ಪೋಲಾಗಿತ್ತು. ನಂತರ ಅಲ್ಪಪ್ರಮಾಣದಲ್ಲಿ ನೀರು ಪೋಲಾಗಿತ್ತು. ಈ ಬಾರಿ ನೀರು ಪೋಲಾಗದಿದ್ದರಿಂದ ಅನಾಹುತ ತಪ್ಪಿದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕೆರೆಗೆ ಇಲಾಖೆಯ ನಿರ್ವಹಣೆ ಇಲ್ಲದೇ ಪದೇಪದೇ ಕೆರೆಗೆ ಬೊಂಗಾ ಬೀಳುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇಷ್ಟಾದರೂ ಕೆರೆಗೆ ಭೇಟಿ ನೀಡಿಲ್ಲ; ಪರಿಶೀಲಿಸಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕೆರೆ ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.