ಕುಮಟಾ: ತಾಲೂಕಿನ ಮಿರ್ಜಾನದಲ್ಲಿ ಸರ್ಕಾರದಿಂದ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಅಡ್ಡಡ್ಡ ಕಡಿದು ಗಟಾರ ನಿರ್ಮಿಸಿಕೊಂಡಿದ್ದಲ್ಲದೇ ಇದನ್ನು ಪ್ರಶ್ನಿಸಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಕುಮಟಾ ಠಾಣೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ರಭಾರ ಪಿಡಿಒ ವಿಠಲ ಮಾರುತಿ ತಿಗಡಿ ದೂರು ದಾಖಲಿಸಿದ್ದಾರೆ. ಮಿರ್ಜಾನದ ಬಿಜಿಎಸ್ ಶಾಲೆಯ ಹಿಂದುಗಡೆಯ ಕಾಂಕ್ರೀಟ್ ರಸ್ತೆಯನ್ನು ಸ್ಥಳೀಯ ನಿವಾಸಿಗಳಾದ ಅಯ್ಯಪ್ಪ ನಾರಾಯಣ ಮುಕ್ರಿ ಹಾಗೂ ಹೆಗಡೆಯ ಮಂಜು ಬೆಳ್ಳಿ ಮುಕ್ರಿ ಅವರು ಒಡೆದು ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದರು.
ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಲ್ಲದೇ ಸರ್ಕಾರಿ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದಾರೆ. ಇನ್ನೊಮ್ಮೆ ಇಲ್ಲಿಗೆ ಬಂದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಪ್ರಭಾರ ಪಿಡಿಒ ವಿಠಲ ಮಾರುತಿ ತಿಗಡಿ ದೂರಿನಲ್ಲಿ ತಿಳಿಸಿದ್ದಾರೆ.
ಕಾಂಕ್ರೀಟ್ ರಸ್ತೆ ಕಡಿದ ಆರೋಪಿಗಳಾದ ಅಯ್ಯಪ್ಪ ನಾರಾಯಣ ಮುಕ್ರಿ ಹಾಗೂ ಹೆಗಡೆಯ ಮಂಜು ಬೆಳ್ಳಿ ಮುಕ್ರಿ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.