ಹಳ್ಳದ ಪ್ರವಾಹದಿಂದ ಬೆಳೆ, ಮನೆಗಳಿಗೆ ಹಾನಿ

KannadaprabhaNewsNetwork | Published : Oct 14, 2024 1:17 AM

ಸಾರಾಂಶ

ನವಲಗುಂದ ತಾಲೂಕಿನಾದ್ಯಂತ ಈಗಾಗಲೇ ಮುಂಗಾರು ಬೆಳೆಗಳಾದ ಗೋವಿನಜೋಳ, ಹತ್ತಿ, ತೊಗರಿ, ಶೇಂಗಾ, ಈರುಳ್ಳಿ ಹಾಗೂ ಇನ್ನಿತರ ಬೆಳೆಗಳು ತುಪ್ಪರಿ ಹಳ್ಳ ಮತ್ತು ಬೆಣ್ಣೆಹಳ್ಳಗಳ ಪ್ರವಾಹಕ್ಕೆ ಸಿಲುಕಿ ಸುಮಾರು 9,000 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿ ಮಾಡಿದೆ.

ನವಲಗುಂದ: ಸತತ ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ಹಳ್ಳ-ಕೊಳ್ಳ, ಕೃಷಿ ಹೊಂಡ, ಕೆರೆಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಪಟ್ಟಣದ ಹೊರ ವಲಯದಲ್ಲಿರುವ ಅಂಬೇಡ್ಕರ್‌ ನಗರ ಹಾಗೂ ತಾಲೂಕಿನ ಗುಮ್ಮಗೋಳ, ಶಿರಕೋಳ, ಮೊರಬ, ಹನಸಿ ಗ್ರಾಮಗಳಿಗೆ ನೀರು ನುಗ್ಗಿದರೆ ತಿರ್ಲಾಪುರ ಗ್ರಾಮದ ಕೆರೆ ಭರ್ತಿಯಾಗಿ ಕೆಳಭಾಗದ ವಡ್ಡರ ಓಣಿ ಸೇರಿದಂತೆ ಅನೇಕ ಮನೆಗಳಿಗೆ ನೀರು ನುಗ್ಗುತ್ತಿದೆ. ಸತತ ಮಳೆಯಾದರೆ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗುವ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ.ತಾಲೂಕಿನಾದ್ಯಂತ ಈಗಾಗಲೇ ಮುಂಗಾರು ಬೆಳೆಗಳಾದ ಗೋವಿನಜೋಳ, ಹತ್ತಿ, ತೊಗರಿ, ಶೇಂಗಾ, ಈರುಳ್ಳಿ ಹಾಗೂ ಇನ್ನಿತರ ಬೆಳೆಗಳು ತುಪ್ಪರಿ ಹಳ್ಳ ಮತ್ತು ಬೆಣ್ಣೆಹಳ್ಳಗಳ ಪ್ರವಾಹಕ್ಕೆ ಸಿಲುಕಿ ಸುಮಾರು 9,000 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿ ಮಾಡಿದೆ ಎಂದು ಇಲಾಖೆಗಳಿಂದ ತಿಳಿದುಬಂದಿದೆ. ಬೆಣ್ಣೆಹಳ್ಳದ ನೀರಿನಿಂದ ಆರೇಕುರಹಟ್ಟಿ ಗ್ರಾಮದಲ್ಲಿ ಮನೆಗಳು ಜಲಾವೃತಗೊಂಡರೆ ತಾಲೂಕಿನಾದ್ಯಂತ ಸುರಿದ ಮಳೆಗೆ 130ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಆಹಾರ, ದವಸ-ಧಾನ್ಯಗಳು ಹಾನಿಯಾದರೆ ತಾಲೂಕಿನಾದ್ಯಂತ 40ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಒಂದು ಕಡೆ ಪಡೆಸೂರ, ಹಾಳಕುಸುಗಲ್, ಶಾನವಾಡ, ಅಳಗವಾಡಿ, ತಲೆಮೊರಬ, ಆಹೆಟ್ಟಿ, ಮೊರಬ, ಶಿರೂರ, ಗುಮ್ಮಗೋಳ ಭಾಗದ ರೈತರ ಜಮೀನುಗಳು ತುಪ್ಪರಿ ಹಳ್ಳದ ಪ್ರವಾಹಕ್ಕೆ ತುತ್ತಾದರೆ ಇನ್ನೊಂದೆಡೆ ಕಡದಳ್ಳಿ, ಗುಡಿಸಾಗರ, ನಾಗನೂರ, ಅರಹಟ್ಟಿ, ತಡಹಾಳ ಮತ್ತು ಅಮರಗೋಳ ಗ್ರಾಮಗಳು ಬೆಣ್ಣೆಹಳ್ಳದ ಪ್ರವಾಹದ ಭೀತಿಯಲ್ಲಿವೆ. ಅರಹಟ್ಟಿ ಗ್ರಾಮದ ಹತ್ತಿರ ಹಾಯ್ದು ಹೋಗುವ ಹಂದಿಗೇನಹಳ್ಳ ಸಂಪೂರ್ಣವಾಗಿ ತುಂಬಿ ಹರಿದು ಹೊಲಗಳಿಗೆ ನುಗ್ಗಿದರೆ, ಇನ್ನೊಂದಡೆ ಬೆಣ್ಣೆಹಳ್ಳವೂ ತುಂಬಿ ಹರಿದು ಹೊಲಗಳಲ್ಲಿ ನೀರು ನಿಂತಿದೆ. ಈಗಾಗಲೇ 32 ಎಕರೆ ಜಮೀನಿಗೆ ಗೊಬ್ಬರ, ಬೀಜ, ಔಷಧಿ ಸಿಂಪಡಣೆ, ಎಡೆಕುಂಟೆ ಹಾಗೂ ಕಸ ತೆಗೆಯಲು ಸೇರಿದಂತೆ ಸುಮಾರು 10 ಲಕ್ಷದ ಖರ್ಚು ಮಾಡಿದ್ದೇನೆ. ನಂತರ 4 ಎಕರೆ ಜಮೀನಿನ ಈರುಳ್ಳಿಯನ್ನು ಕಟಾವು ಮಾಡಿದ ಹೊಲದಲ್ಲಿಯೆ ಶೇಖರಣೆ ಮಾಡಲಾಗಿತ್ತು. ಆದರೆ, ಸತತ ಮಳೆಯಿಂದ ಪ್ರವಾಹ ಉಂಟಾಗಿ ಬೆಳೆ ಕೈಗೆ ಬರುವ ಮುಂಚಿತವಾಗಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಹತ್ತಿ ಮತ್ತು ಗೋವಿನಜೋಳ, ಶೇಂಗಾ ನೀರಿನಲ್ಲಿಯೇ ಕೊಳೆತು ಸುಮಾರು ₹40 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಆದಷ್ಟು ಬೇಗನೆ ಸರಕಾರ ಸಮೀಕ್ಷೆ ನಡೆಸಿ ಈ ಭಾಗದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅರಹಟ್ಟಿ ಗ್ರಾಮದ ರೈತ ಬಸವರಾಜ ಹುಬ್ಬಳ್ಳಿ ಆಗ್ರಹಿಸಿದ್ದಾರೆ.ಸಮೀಕ್ಷೆ

ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳಗಳ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾಗೂ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಕೂಡಲೆ ಅಧಿಕಾರಿಗಳು ಸಮೀಕ್ಷೆ ನಡೆಸಿ ನೆರೆಪೀಡಿತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕೆಂದು ಸೂಚಿಸಿದ್ದೇನೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಹಳ್ಳಗಳ ಅಂಚಿನ ಪ್ರದೇಶದ ಎಲ್ಲ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು.

ಎನ್.ಎಚ್. ಕೋನರಡ್ಡಿ ಶಾಸಕ

Share this article