ದಾಬಸ್‌ಪೇಟೆ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕಿದೆ. ಒಮ್ಮೆ ಸೈಟ್ ವಾಪಸ್ ಕೊಟ್ಟಿದ್ದಾರೆ ಅಂದರೆ ಅಲ್ಲಿಗೆ ತಪ್ಪು ಮಾಡಿದ್ದಾರೆ ಎಂದೇ ಅರ್ಥ. ಇಲ್ಲ ಅಂದರೆ ಏಕೆ ಸೈಟ್ ವಾಪಸ್ ಕೊಟ್ತಿದ್ದರು. ಸೈಟ್ ಕೊಡಲ್ಲ, ನಾನು ಯಾವ ತನಿಖೆ ಬೇಕಾದರೂ ಎದುರಿಸುತ್ತೇನೆ ಅಂತ ಈ ಹಿಂದೆ ಹೇಳಿದ್ದರು. ಈಗ ಯಾಕೆ ಸೈಟ್ ವಾಪಸ್ ಕೊಟ್ಟರು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಪ್ರಶ್ನಿಸಿದರು.
ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಹೊನ್ನಾದೇವಿ ಗಂಗಾಧರೇಶ್ವರ, ತೋಪಿನ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನೆಲಮಂಗಲ ತಾಲೂಕು ಸುರೇಶ್ ಗೌಡ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಾಗಿನಿಂದ ಸೈಟ್ ವಾಪಸ್ ಕೊಟ್ಟ ಬೆಳವಣಿಗೆ ನೋಡಿದರೆ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿರೋದು ದೃಢಪಟ್ಟಿದೆ. ಕಾಂಗ್ರೆಸ್‌ನಲ್ಲೂ ರಾಜಕೀಯ ಬೆಳವಣಿಗೆ ಗರಿಗೆದರಿದೆ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್‌ನಿಂದ ಎಲ್ಲೋ ಒಂದು ಕಡೆ ಸಂದೇಶ ಬಂದಿದೆ ಅಂತಾ ಕಾಣುತ್ತೆ. ಅದೇ ಕಾರಣಕ್ಕೆ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಎಲ್ಲರೂ ಭೇಟಿ ಮಾತಾಡ್ತಿದ್ದಾರೆ. ಜೊತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭೇಟಿ ಮಾಡಿದ್ದಾರೆ ಎಂದು ಹೇಳಿದರು.ಯುವ ಮುಖಂಡ ಕರವೇ ವೀರಸಾಗರ ಮಂಜುನಾಥ್ ಮಾತನಾಡಿ, ಸುರೇಶ್‌ಗೌಡರು ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಉತ್ತಮ ಕಟ್ಟಡಗಳನ್ನೊಳಗೊಂಡ ಶಾಲಾ ಕಾಲೇಜುಗಳನ್ನು ನಿರ್ಮಿಸಿರುವ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ನೆಲಮಂಗಲ ಯುವಮೊರ್ಚಾ ತಾಲೂಕು ಅಧ್ಯಕ್ಷ ರಾಯರಪಾಳ್ಯ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮುರಳೀಧರ್, ಜಯ ಕರ್ನಾಟಕ ಹೋಬಳಿ ಅಧ್ಯಕ್ಷ ಕೆಂಪರಾಜು, ಸಿದ್ದರಾಜು ಇತರರಿದ್ದರು.ಪೋಟೋ 7 :
ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡರಿಗೆ ಜನ್ಮದಿನ ಪ್ರಯುಕ್ತ ಸುರೇಶ್ಗೌಡ ಅಭಿಮಾನಿಗಳು ಅಭಿನಂದಿಸಿದರು.