ಶಾಶ್ವತ ಪರಿಹಾರ ಕಂಡುಕೊಳ್ಳದೆ ಅರಣ್ಯ ಇಲಾಖೆ ತೇಪೆ ಹಾಕುವ ಕೆಲಸ
ಜಿಲ್ಲೆಯಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಹಲವು ವರ್ಷಗಳ ಸಮಸ್ಯೆಗೆ ಅರಣ್ಯಇಲಾಖೆಯು ಶಾಶ್ವತ ಪರಿಹಾರ ಕಂಡುಕೊಳ್ಳದೆ ತೇಪೆ ಹಾಕುವ ಕೆಲಸ ಮಾಡಿಕೊಂಡೇ ಬಂದಿದೆ. ಅದರ ಪರಿಣಾಮವಾಗಿ, ಒಂದೆಡೆ ಕಾಡಾನೆಗಳ ಸಂತತಿ ಹೆಚ್ಚಾಗಿದ್ಡು, ನಾಡಿಗೆ ನುಗ್ಗಿ ಜೀವಹಾನಿ ಮತ್ತು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕಾಡಾನೆಗಳ ದಾಳಿಯು ಇಲ್ಲಿನ ರೈತರನ್ನು ನಿದ್ದೆಗೆಡಿಸಿದೆ. ತುಂಬಿದ ಕೆರೆ–ಕಟ್ಟೆಗಳು ಹಾಗೂ ನೀರಾವರಿ ಜಮೀನು ಕಾಡಾನೆಗಳಿಗೆ ಒಂದು ರೀತಿಯಲ್ಲಿ ಸ್ವರ್ಗವಾಗಿದೆ.ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಸಂತತಿ ಹೆಚ್ಚುತ್ತಲೇ ಇದೆ. ಇವುಗಳು ಶಿವಮೊಗ್ಗ ತಾಲೂಕು ಭಾಗದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಈ ಭಾಗದ ರೈತರ ಬೆಳೆಗಳ ಮೇಲೆ ಸತತ ದಾಳಿ ನಡೆಸುತ್ತಿವೆ. ಅದರಲ್ಲೂ ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ, ಆಲದೇವರ ಹೊಸೂರು, ಸಿರಿಗೆರೆ, ತಮ್ಮಡಿಹಳ್ಳಿ ಗ್ರಾಮಗಳ ಭಾಗದಲ್ಲಿ ರೈತರ ಬೆಳೆಯನ್ನು ಧ್ವಂಸ ಮಾಡುತ್ತಿರುವ ಆನೆಗಳ ಹಾವಳಿಗೆ ರೈತರು ತತ್ತರಿಸಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು ಪದೇ ಪದೇ ಕಾಡಾನೆಗಳ ದಾಳಿಯಿಂದ ಬೇಸತ್ತು ಬುಧವಾರ ಶಿವಮೊಗ್ಗದ ಡಿಎಫ್ಒ ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ರೈತರೊಬ್ಬರು ವಿಷಕುಡಿಯಲು ಮುಂದಾದ ಘಟನೆಯು ನಡೆದಿದೆ.
ಡಿಎಫ್ಒ ಪ್ರಸನ್ನ ಪಟಗಾರ್ ಮುಂಭಾಗವೇ ವಿಷದ ಬಾಟಲಿ ಹಿಡಿದು ಕುಡಿಯಲು ರೈತ ಮುಂದಾದಾಗ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ರೈತನನ್ನು ತಡೆದರು.
ಕಾಡಾನೆಗಳ ಹಾವಳಿಯಿಂದ ಆಯನೂರು ಹೋಬಳಿ ಸಿರಿಗೆರೆ ರೈತರು ನೊಂದಿದ್ದಾರೆ. ಈಗ ಮೂರ್ನಾಲ್ಕು ದಿನಗಳ ಹಿಂದಷ್ಟೇ ನಾಲ್ಕೈದು ಆನೆಗಳು ಮುಸುಕಿನ ಜೋಳ, ಭತ್ತದ ಗದ್ದೆಗಳಿಗೆ ನುಗ್ಗಿ ಫಸಲು ತುಳಿದು ತಿಂದು ಅಪಾರ ನಷ್ಟ ಉಂಟುಮಾಡಿವೆ. ರೈತರು ಜೀವ ಬಿಗಿಹಿಡಿದು ಕೊಂಡು ನಡುರಾತ್ರಿಯಲ್ಲಿ ತಮ್ಮ ಹೊಲಗಳಲ್ಲಿ ಕಾವಲು ಕಾಯಬೇಕಿದೆ.