ಗಾಳಿ-ಮಳೆ ಅಬ್ಬರಕ್ಕೆ ₹ 20 ಕೋಟಿಗೂ ಅಧಿಕ ಹಾನಿ

KannadaprabhaNewsNetwork |  
Published : May 19, 2026, 02:15 AM IST
ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಶಿವಯ್ಯ ಮಠಪತಿ ಎಂಬುವವರ ರೇಷ್ಮೆ ಮನೆಯ ತಗಡಿನ ಶೀಟ್‌ಗಳು ಹಾರಿ ಹೋಗಿರುವುದು. | Kannada Prabha

ಸಾರಾಂಶ

ಹಾವೇರಿ ಜಿಲ್ಲಾದ್ಯಂತ ಭಾನುವಾರ ಸುರಿದ ಮಳೆ, ಗಾಳಿ ಅಬ್ಬರಕ್ಕೆ ಹಲವು ಮನೆಗಳು ಧರೆಗುರುಳಿದ್ದರೆ, 20 ಕೋಟಿ ರು.ಗೂ ಹೆಚ್ಚಿನ ಬೆಳೆ ಹಾಳಾಗಿದೆ.

ಹಾವೇರಿ: ಜಿಲ್ಲಾದ್ಯಂತ ಭಾನುವಾರ ಸುರಿದ ಮಳೆ, ಗಾಳಿ ಅಬ್ಬರಕ್ಕೆ ಹಲವು ಮನೆಗಳು ಧರೆಗುರುಳಿದ್ದರೆ, 20 ಕೋಟಿ ರು.ಗೂ ಹೆಚ್ಚಿನ ಬೆಳೆ ಹಾಳಾಗಿದೆ.

ಗಾಳಿ, ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಜೋರು ಮಳೆ-ಗಾಳಿಗೆ ಕನವಳ್ಳಿ ಗ್ರಾಮದಲ್ಲಿ ರೈತರೊಬ್ಬರ ರೇಷ್ಮೆ ಮನೆಯ ತಗಡಿನ ಶೀಟ್‌ಗಳು ಹಾರಿ ಹೋಗಿವೆ. ಕೂನಬೇವು ಗ್ರಾಮದಲ್ಲಿ 1 ಲಕ್ಷ ರು. ಮೌಲ್ಯದ ಎತ್ತಿಗೆ ಸಿಡಿಲು ಬಡಿದು ಜೀವ ಹಾನಿಯಾಗಿದೆ.ಹಾವೇರಿ, ಬ್ಯಾಡಗಿ, ರಾಣಿಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಹಾನಗಲ್ಲ, ಶಿಗ್ಗಾಂವಿ, ಸವಣೂರ ಸೇರಿದಂತೆ ಜಿಲ್ಲೆಯ ಹಲವೆಡೆ ರಭಸದಿಂದ ಬೀಸಿದ ಗಾಳಿಗೆ ನೂರಾರು ಗಿಡ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿದ್ದು, ರಾತ್ರಿಯಿಡೀ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನರು ಕತ್ತಲಲ್ಲಿ ಬೆಳಗು ಹರಿಸಿದರು. ಹಾವೇರಿ ತಾಲೂಕು ಕನವಳ್ಳಿಯ ಶಿವಯ್ಯ ಬಸಯ್ಯ ಮಠಪತಿ ಎಂಬುವವರಿಗೆ ಸೇರಿದ ರೇಷ್ಮೆ ಮನೆಯ ಚಾವಣಿಗೆ ಹೊದಿಸಿದ್ದ ತಗಡಿನ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಎರಡ್ಮೂರು ದಿನಗಳಲ್ಲಿ ಗೂಡು ಕಟ್ಟುವ ಹಂತದಲ್ಲಿದ್ದ ರೇಷ್ಮೆ ಹುಳುಗಳು ನೀರು ಪಾಲಾಗಿವೆ. ಲಕ್ಷಾಂತರ ರು. ಮೌಲ್ಯದ ಹಾನಿ ಸಂಭವಿಸಿದೆ. ರಾಣಿಬೆನ್ನೂರು ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಗಾಳಿ ಮಳೆಯಿಂದಾಗಿ ಹಾನಿ ಸಂಭವಿಸಿದೆ. ಉಳಿದಂತೆ ಜೋರು ಗಾಳಿಗೆ ಗಿಡ ಮರಗಳು, ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ವರದಿಯಾಗಿವೆ.

ಬೆಳೆ ಹಾನಿ ವಿವರ: 2026-27ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ಮೇ ತಿಂಗಳು ಆರಂಭದಿಂದ ಇಲ್ಲಿಯವರೆಗೆ 1,696 ರೈತರ 1,181.0 ಹೆಕ್ಟೇರ್ ಕೃಷಿ ಬೆಳೆ, 125 ರೈತರ 54.79 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 1,721 ರೈತರ 1,235.8 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ್ದರ ಬಗ್ಗೆ ವರದಿಯಾಗಿದೆ. ಅಂದಾಜು 20 ಕೋಟಿ ರು. ಮೌಲ್ಯದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಕೇವಲ ಮೂರು ದಿನಗಳ ಮಳೆಗೆ ಹತ್ತಾರು ರೈತರ ಬದುಕು ಮೂರಾಬಟ್ಟೆಯಾಗಿದೆ.

ಮಳೆ ವಿವರ: ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಜಿಲ್ಲೆಯಲ್ಲಿ 13.20 ಮಿಮೀ ಮಳೆಯಾಗಿದೆ. ಈ ಪೈಕಿ ರಾಣೇಬೆನ್ನೂರು ತಾಲೂಕಿನಲ್ಲಿ ಅತೀಹೆಚ್ಚು 18.8 ಮಿಮೀ.ನಷ್ಟು ಮಳೆಯಾದರೆ, ರಟ್ಟೀಹಳ್ಳಿ ತಾಲೂಕಿನಲ್ಲಿ ಅತೀಕಡಿಮೆ 9.3 ಮಿಮೀ ಮಳೆಯಾಗಿದೆ. ಇನ್ನುಳಿದಂತೆ ಬ್ಯಾಡಗಿ 12.1 ಮಿಮೀ, ಹಾನಗಲ್ಲ 13.9 ಮಿಮೀ., ಹಾವೇರಿ 11.3 ಮಿಮೀ., ಸವಣೂರ 13.9 ಮಿಮೀ., ಶಿಗ್ಗಾಂವಿ 11.7 ಮಿಮೀ ಹಾಗೂ ಹಿರೇಕೆರೂರು ತಾಲೂಕಿನಲ್ಲಿ 9.6 ಮಿಮೀ ಮಳೆಯಾಗಿದೆ.

127 ಮನೆಗಳಿಗೆ ಹಾನಿ: 2026-27ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ಈವರೆಗೆ ಜಿಲ್ಲೆಯಲ್ಲಿ 127 ಮನೆಗಳಿಗೆ ಹಾನಿಯುಂಟಾಗಿದೆ. ಬ್ಯಾಡಗಿಯಲ್ಲಿ 28, ಹಾನಗಲ್ಲ 14, ಸವಣೂರ 10, ರಾಣಿಬೆನ್ನೂರ 54, ಶಿಗ್ಗಾಂವಿ 1, ಹಿರೇಕೆರೂರು 6, ರಟ್ಟೀಹಳ್ಳಿಯಲ್ಲಿ 13 ಹಾಗೂ ಹಾವೇರಿಯಲ್ಲಿ 1 ಮನೆ ಹಾನಿಗೀಡಾಗಿವೆ. ಈ ಪೈಕಿ 13 ಮನೆಗಳು ತಿರಸ್ಕೃತಗೊಂಡಿದ್ದು, 114 ಮನೆಗಳು ಪರಿಶೀಲನೆಗೆ ಬಾಕಿ ಇವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಯವೈಶ್ಯ ಯುವಕರು ಮೂಲ ಉದ್ಯೋಗಕ್ಕೆ ಬರಲಿ: ಆರ್‌.ಪಿ. ರವಿಶಂಕರ
ನರೇಗಾ ಬದಲಾವಣೆಗೆ ಕೊಪ್ಪಳದಲ್ಲಿ ವಿರೋಧ, ಪ್ರತಿಭಟನೆ