ಬ್ಯಾಡಗಿ: ಯುವಕನೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಇವರು ವೃತ್ತಿಯಲ್ಲಿ ನೃತ್ಯ ತರಬೇತುದಾರನಾಗಿದ್ದರು. ಅಲ್ಲದೇ ಬೋಡಾ ಎಂಬ ವ್ಯಕ್ತಿಯ ಜತೆ ಚಿತ್ರದುರ್ಗದಲ್ಲಿ ಕಲರ್ಸ್ ಕೆಫೆ ನಡೆಸುತ್ತಿದ್ದ. ಆ. 24ರಂದು ಸಂಜೆ 4 ಗಂಟೆಗೆ ಸ್ನೇಹಿತ ಬೋಡಾ ಅವರ ಜನ್ಮದಿನಾಚರಣೆ ಮಾಡಲು ಹೋಗುತ್ತೇನೆ ಎಂದು ಮನೆಯವರಿಗೆ ತಿಳಿಸಿ ತಂದೆಯ ಬಳಿಯಿದ್ದ ಬಂಗಾರದ ಚೈನ್ ಪಡೆದು ಚಿತ್ರದುರ್ಗದಿಂದ ಹೋಗಿದ್ದ. ಬ್ಯಾಡಗಿ ತಾಲೂಕಿನ ಮಾಕನೂರ ಬಳಿ ಭಾನುವಾರ ರಾತ್ರಿ ಮತ್ತೆ ಮನೆಯವರಿಗೆ ಕರೆ ಮಾಡಿ ಒಂದು ಗಂಟೆಯೊಳಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದಾನೆ. ಮಾಕನೂರಿಗೆ ಬಂದಿದ್ದ ಸ್ಥಳದ ಮಾಹಿತಿ ಆತನ ಮೊಬೈಲ್ ಲೋಕೇಶನ್‌ನಿಂದ ಗೊತ್ತಾಗಿದೆ. ಆದರೆ ಆತ ಮಾಕನೂರಿಗೆ ಯಾಕೆ ಬಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಶವವಾಗಿ ಪತ್ತೆ: ಮೇಲ್ನೋಟಕ್ಕೆ ಅಪಘಾತ ಎಂಬಂತೆ ಕಂಡುಬಂದಿತಾದರೂ ಬಳಿಕ ಹತ್ಯೆಗೆ ಬಳಸಲಾದ ಚಾಕು ಸ್ಥಳದಲ್ಲಿ ಪತ್ತೆಯಾಗಿದ್ದು, ಲಿಂಗೇಶನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪಿಎಸ್ಐ ಭಾರತಿ ಕುರಿ ಅವರು ಸ್ಥಳ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಮೃತದೇಹ ಸಾಗಿಸಿದ್ದಾರೆ.ಹಿರಿಯ ಅಧಿಕಾರಿಗಳ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ, ಅಡಿಷನಲ್ ಎಸ್ಪಿ ಲಕ್ಷಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಇನ್ನಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹತ್ಯೆ ಕುರಿತು ಯಾವುದೇ ಸುಳಿವು ಸಿಗದ ಹಿನ್ನೆಲೆ ಕೊಲೆ ಪ್ರಕರಣವೆಂದು ದೂರು ದಾಖಲಿಸಿಕೊಂಡಿರುವ ಬ್ಯಾಡಗಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.