ಸಾಮರಸ್ಯ ಸಾಧ್ಯವಾಗದಿದ್ದರೇ ಪ್ರಜಾಪ್ರಭುತ್ವಕ್ಕೆ ಅಪಾಯ: ಶ್ರೀ

KannadaprabhaNewsNetwork | Published : May 25, 2025 1:40 AM
ಉಡುಪಿ: ಇಲ್ಲಿನ ಅಮೋಘ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಿಂದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರಿಗೆ ಶುಕ್ರವಾರ ಸಾಮರಸ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
Follow Us

ಉಡುಪಿ: ಇಲ್ಲಿನ ಅಮೋಘ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಿಂದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರಿಗೆ ಶುಕ್ರವಾರ ಸಾಮರಸ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ, ನಮಗೆ ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಸದ್ಬಬಳಕೆಯಾಗದೇ ದುರ್ಬಳಕೆಯಾಗುತ್ತಿವೆ. ಯಾವುದನ್ನು ಪ್ರಶ್ನೆ ಮಾಡಬಾರದೋ ಅದನ್ನು ಪ್ರಶ್ನೆ ಮಾಡುವುದು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ನಾವು ಪ್ರಸ್ತುತ ನಡೆಯುತ್ತಿರುವ ರಾಜಕೀಯ ಮೇಲಾಟಗಳು ಕೊನೆಗೊಂಡು ಸಾಮರಸ್ಯದಿಂದ ಬದುಕುವಂತಾಗಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಲಿದೆ ಎಂದರು.

ನಮ್ಮ ದೇಶದಲ್ಲಿ ಸಾಮರಸ್ಯದಿಂದ ಬದುಕದಿದ್ದರೆ ಹಿಂದು ಸಮಾಜ ಉಳಿಯಲು ಸಾಧ್ಯವಿಲ್ಲ ಎಂದು ಜಾಗೃತಿ ಮೂಡಿಸಿದ್ದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ. ಹಾಗಾಗಿ ಈ ಪ್ರಶಸ್ತಿ ಅವರಿಗೆ ಸಲ್ಲಬೇಕು. ಸ್ವಾವಲಂಬಿ ಜನರಿರುವ ಉಡುಪಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಡಾ.ವಾದಿರಾಜ ಅವರು ಪ್ರಶಸ್ತಿ ಪುರಸ್ಕೃತ ಶ್ರೀಗಳ ಪರಿಚಯ ಮಾಡಿಕೊಟ್ಟು, ಶ್ರೀ ಬಸವಮೂರ್ತಿ ಸ್ವಾಮೀಜಿ ದಲಿತರು ಎದುರಿಸುವ ಸಮಸ್ಯೆಗಳಿಗೆ ದನಿಯಾಗಲು ಸಮಾಜದಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಸಮಾಜದ ರಕ್ಷಣೆಗೆ ಇನ್ಯಾರೋ ಬರುತ್ತಾರೆ ಎಂದು ಕಾಯದೇ ಅವರೇ ಮುಂದಾಳತ್ವ ವಹಿಸಿ ಧರ್ಮ ಜಾಗೃತಿ ಮಾಡುತ್ತಿದ್ದಾರೆ. ಪೇಜಾವರದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ ದಲಿತ ಕೇರಿಗಳಿಗೆ ಹೋಗಿ ಮಾದರಿಯಾದಂತೆ, ಬಸವಮೂರ್ತಿ ಶ್ರೀಗಳು ೨೦೦೯ರಲ್ಲಿ ಮೊದಲ ಬಾರಿಗೆ ಬ್ರಾಹ್ಮಣ ಕೇರಿಗೆ ಹೋಗಿ ಹೊಸ ಕ್ರಾಂತಿ ಸೃಷ್ಟಿಸಿದರು ಎಂದು ತಿಳಿಸಿದರು.ಇದೇ ವೇಳೆ ಲೇಖಕಿ ಪೂರ್ಣಿಮಾ ಸುರೇಶ್ ಅವರು ಬರೆದ ‘ಸಂತೆಯೊಳಗಿನ ಏಕಾಂತ’ ಹಾಗೂ ಅನುವಾದಿತ ‘ದಿ ಅಕ್ವೇರಿಯಂ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ, ನಿವೃತ್ತ ಉಪನ್ಯಾಸಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.