ಶಿಗ್ಗಾಂವಿ: ನಮ್ಮ ಮತಕ್ಷೇತ್ರದಲ್ಲಿ ಬಿತ್ತನೆಗೆ ಅಗತ್ಯ ಬೀಜ, ಗೊಬ್ಬರ ದಾಸ್ತಾನು ಸಾಕಷ್ಟಿದೆ. ಪ್ರಸಕ್ತ ಸಾಲಿನ ಮುಂಗಾರು ಡಿಎಪಿ ಗೊಬ್ಬರದ ಕೊರತೆ ಕಾಣುತ್ತಿದೆ. ಈ ಕುರಿತು ಸಚಿವರ ಗಮನ ಸೆಳೆದು ಹೆಚ್ಚಿನ ಡಿಎಪಿ ಗೊಬ್ಬರದ ವ್ಯವಸ್ಥೆಯನ್ನು ಮಾಡಲು ವಿನಂತಿಸಲಾಗುವುದು ಎಂದು ಶಾಸಕ ಯಾಸೀರಖಾನ್ ಪಠಾಣ ಭರವಸೆ ನೀಡಿದರು.ಪಟ್ಟಣದ ಡಾ. ಅಂಬೇಡ್ಕರ್ ಆಡಳಿತ ಭವನದಲ್ಲಿ ಶನಿವಾರ ನಡೆದ ಮುಂಗಾರು ಕೃಷಿ ಚಟುವಟಿಕೆಗಳ ಕುರಿತು ಪೂರ್ವಭಾವಿಯಾಗಿ ರೈತರು ರೈತ ಮುಖಂಡರು ಸೇರಿದಂತೆ ತಾಲೂಕಿನ, ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಬೀಜ, ಗೊಬ್ಬರವನ್ನು ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡಬೇಕು. ವ್ಯಾಪಾರಸ್ಥರು ತಮ್ಮ ಸಮಸ್ಯೆಗಳನ್ನು ನಮ್ಮ ಜತೆಗೆ ಹಂಚಿಕೊಳ್ಳಿ. ಸ್ಪಂದಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದರು.ರೈತರಿಗೆ ಕಡ್ಡಾಯವಾಗಿ ಲಿಂಕ್ ಗೊಬ್ಬರ ವಿತರಿಸದಂತೆ ಹಾಗೂ ಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರುತ್ತಿರುವ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ವಿಮೆ ಪಾವತಿಸುವ ವೇಳೆ ಏಜೆಂಟರರಿಗೆ ಅವಕಾಶ ಕೊಡದೇ ರೈತರಿಗೆ ನ್ಯಾಯ ಸಿಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ₹೨೫ ಕೋಟಿ ವೆಚ್ಚದಲ್ಲಿ ಹೋತನಹಳ್ಳಿ ಭಾಗದ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನೀರಾವರಿ ಸೌಲಭ್ಯಕ್ಕಾಗಿ ₹೧೦೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು.ಶಿಗ್ಗಾಂವಿ ಕ್ಷೇತ್ರದಲ್ಲಿ ಬೀಜ, ಗೊಬ್ಬರದ ಕೊರತೆಯಾದರೆ ಕೃಷಿ, ತೋಟಗಾರಿಕೆ, ತಹಸೀಲ್ದಾರರೇ ಹೊಣೆಗಾರರು. ವಿಶೇಷವಾಗಿ ಮಧ್ಯಪ್ರದೇಶದ ಮಾದರಿಯಲ್ಲಿ ₹೩೫೦ ಕೋಟಿ ವೆಚ್ಚದಲ್ಲಿ ಸವಣೂರು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಗೆಜ್ಲಿ, ತಹಸೀಲ್ದಾರ್ ರವಿಕುಮಾರ ಕೊರವರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮರೆಡ್ಡಿ, ರೈತ ಮುಖಂಡರಾದ ಯಲ್ಲಪ್ಪ ತಳವಾರ, ಈಶ್ವರಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಶಂಕರಗೌಡ್ರ ಪಾಟೀಲ, ಭರತ್ ಎಸ್.ಜಿ., ಗುಡ್ಡಪ್ಪ ಜಲದಿ, ಈಶ್ವರಗೌಡ(ಮುತ್ತಣ್ಣ) ಪಾಟೀಲ, ಎಸ್.ವಿ. ಪಾಟೀಲ, ಶಂಭುಲಿಂಗಪ್ಪ ಆಜೂರು, ತಾಪಂ ಇಒ ಮಂಜುನಾಥ ಸಾಳೋಂಕಿ, ಮಾಲತೇಶ ಸಾಲಿ ಇತರರು ಇದ್ದರು.ಎಸ್ಸೆಸ್ಸೆಲ್ಸಿ ಪ್ರಥಮ ರ‍್ಯಾಂಕ್ ಸಾಧಕ ಪೃಥ್ವಿಶ್‌ಗೆ ಸನ್ಮಾನ
ರಾಣಿಬೆನ್ನೂರು: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮರುಎಣಿಕೆಯ ನಂತರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ಪೃಥ್ವಿಶ್ ಗೋವಿಂದಪ್ಪ ಗೊಲ್ಲರಹಳ್ಳಿಯನ್ನು ಕುರುಹಿನಶೆಟ್ಟಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.ಈ ಸಮಯದಲ್ಲಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ ಮಾತನಾಡಿ, ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿಯಾಗಿರುವ ಪೃಥ್ವಿಶ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸಮಾಜಕ್ಕೆ ಗೌರವ ಹಾಗೂ ಮೆರುಗು ತಂದಿದ್ದಾನೆ. ಈತ ತನ್ನ ಸಾಧನೆಯಿಂದ ಸಮಾಜದ ಘನತೆಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ. ಇವನ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ದೊಡ್ಡಹನುಮಂತಪ್ಪ ಕಾಕಿ, ಶ್ರೀನಿವಾಸ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ಶ್ರೀಧರ ಅಮಾಸಿ, ಗುಡದಯ್ಯ ಹಲಗೇರಿ, ರಮೇಶ ಸುಂಕಪುರ, ಚನ್ನಪ್ಪ ಮಾನಕನಹಳ್ಳಿ, ಸಿದ್ದಪ್ಪ ಬೂದನೂರ, ಭೋಜಪ್ಪ ಕನಕೇರಿ, ವೆಂಕಟೇಶ ಸಾಲಗೇರಿ, ಗಣೇಶ ಅಮಾಸಿ, ಶ್ರೀಕಾಂತ ಕಾಕಿ, ಶಿವಾನಂದ ಬಗಾದಿ ರತ್ನಮ್ಮ, ಮಮತಾ, ಗೋವಿಂದ, ಪಲ್ಲವಿ ಮತ್ತಿತರರಿದ್ದರು.