ರಾಮನಗರ: ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರ ನೌಕರರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮೇ 27ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಪೌರನೌಕರರ ಸಂಘದ ಉಪಾಧ್ಯಕ್ಷ ಆರ್.ನಾಗರಾಜು ತಿಳಿಸಿದರು.
ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಇದುವರೆಗೆ ಪೌರಾಡಳಿತ ಸಚಿವರು, ಇಲಾಖೆ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶಕರು ಸೇರಿದಂತೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.
ಕಳೆದ ಏಪ್ರಿಲ್ 6ರಂದು ರಾಜ್ಯ ಪರಿಷತ್ತಿನ ಕಾರ್ಯಕಾರಣಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು 45 ದಿನಗಳ ಗಡುವು ನೀಡಲಾಗಿತ್ತು. ಅಲ್ಲಿವರೆಗೆ ಸಾಂಕೇತಿಕವಾಗಿ ಪ್ರತಿಭಟನೆ ಆರಂಭಿಸಿ ಗಡುವು ಮುಗಿದ ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ಅದರಂತೆ ರಾಜ್ಯಾದ್ಯಂತ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಜೊತೆಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ಹೇಳಿದರು.ಪೌರಾಡಳಿತ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲ ಪಕ್ಷಗಳ ಶಾಸಕರಿಗೂ ಬೇಡಿಕೆಗಳ ಕುರಿತು ಮನವಿ ನೀಡಲಾಗಿತ್ತು. ಆದರೂ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈಗಾಗಲೇ ಸರ್ಕಾರದೊಂದಿಗೆ 7ರಿಂದ 8 ಸುತ್ತಿನ ಮಾತುಕತೆ ನಡೆದರೂ ಬೇಡಿಕೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಾಕ್ಸ್...............
ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ಟೈಮ್ ಸ್ಕೆಲ್ ನೌಕರರ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ವಾಹನ ಚಾಲಕರು, ನೀರು ಪೂರೈಕೆ ನೌಕರರು, ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ನೌಕರರಿಗೆ ಎಸ್ ಎಫ್ ಸಿ ಮುಕ್ತ ನಿಧಿಯಿಂದ ವೇತನ ನೀಡುವುದು.
ರಾಮನಗರದಲ್ಲಿ ರಾಜ್ಯ ಪೌರನೌಕರರ ಸಂಘದ ಉಪಾಧ್ಯಕ್ಷ ಆರ್.ನಾಗರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.