ಆನಂದಪುರ: ಮನಸ್ಸಿನ ಒಳಗಿನ ಕತ್ತಲು ದೂರವಾಗಿಸಲು ನಮ್ಮೊಳಗಿನ ಮಾನವೀಯತೆ ಜಾಗೃತಗೊಳ್ಳಬೇಕಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು.
ಮನದೊಳಗಿನ ಕತ್ತಲೆ ಕರಗಲು ಸೂರ್ಯನಾರಾಯಣನ ಕೃಪೆ ಅಗತ್ಯ. ಹೊರಗಿನ ಕತ್ತಲು ಕಳೆಯಲು ಸೂರ್ಯನ ಆಸರೆಯ ಅತ್ಯಗತ್ಯವಾಗಿದೆ. ಮನುಷ್ಯನ ಆತ್ಮ, ಮನಸ್ಸು ಶುದ್ಧಿ ಇದ್ದರೆ ನಮ್ಮ ಹೃದಯದೊಳಗೆ ಭಗವಂತನನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರೂ ಭಗವಂತನ ಆರಾಧನೆಯ ಮಾಡುವ ಜಾಗೃತಿ, ಮನದೊಳಗಿನ ಪರಮಾತ್ಮನ ಬಗ್ಗೆಯೂ ವಿಶ್ವಾಸವಿರಬೇಕು. ನಾವು ಮಾಡುವಂತಹ ಒಳ್ಳೆಯ ಕೆಲಸಗಳೇ ನಿಮ್ಮೊಳಗಿನ ಭಗವಂತನಾಗಿದ್ದಾನೆ ಎಂದು ತಿಳಿಸಿದರು.
ಗುರುಗಳ ಮಾರ್ಗದರ್ಶನ ಸಿಕ್ಕಾಗ ಮಾತ್ರ ನಾವು ಕೈಗೊಳ್ಳುವ ಪೂಜೆ ಸಾರ್ಥಕವಾಗುತ್ತದೆ. ಶರಣ ಸಾಹಿತ್ಯ ಸಮ್ಮೇಳನ ಬದುಕಿನ ಮಾರ್ಗವನ್ನು ತೋರಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಶುದ್ಧವಾದ ಮನಸ್ಸು ಸಚ್ಚಾರಿತ್ರ್ಯದ ಬದುಕು ಲೌಕಿಕ ಬದುಕಿನಲ್ಲಿ ಅತ್ಯಗತ್ಯವಾಗಿದೆ ಎಂದರು.ಮುರುಘ ಮಠದಲ್ಲಿ ನಡೆಯುವ ಕಂಚಿನ ದೀಪೋತ್ಸವ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಕಾರಣ ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ ನಡೆಯುವ ಶರಣು ಸಾಹಿತ್ಯ ಹಾಗೂ ಭಾವೈಕ್ಯ ಸಮ್ಮೇಳನಂತಹ ಕಾರ್ಯಕ್ರಮಗಳು ಎಂದು ತಿಳಿಸಿದರು.
ಹಾಸ್ಯ ಭಾಷಣಕಾರ ಉಡುಪಿ ಸಂಧ್ಯಾ ಶೆಣೈ ವಿಶೇಷ ಉಪನ್ಯಾಸ ನೀಡಿದರು. ಕುಂದಗೋಳಿ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ, ಡಾ.ಆರ್.ಸಿ.ಜಗದೀಶ್, ದೀಪಾ ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್, ಹೊಸನಗರ ಮಾಜಿ ಶಾಸಕ ಸ್ವಾಮಿ ರಾವ್ ಸೇರಿದಂತೆ ವಿವಿಧ ಮಠಗಳಿಂದ ಮಠಾಧೀಶರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕಂಚಿನ ರಥ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.