
ಗೋಣಿಕೊಪ್ಪ: ಸಹವಾಸ ದೋಷ ಮತ್ತು ಆಕಸ್ಮಿಕ ಆಕರ್ಷಣೆಯಿಂದ ಆರಂಭವಾಗುವ ದುಶ್ಚಟ ಒಮ್ಮೆ ಅಂಟಿದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ. ಇದರಿಂದ ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಹೇಳಿದರು.
ಉತ್ತಮ ಹವ್ಯಾಸ ರೂಢಿಸಿಕೊಳ್ಳಿ: ವಿದ್ಯಾರ್ಥಿ ಜೀವನದಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಸಂಕಲ್ಪ ಮಾಡಬೇಕು. ಅಮಲು ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಮಾತ್ರವಲ್ಲ, ಪರಿವಾರಕ್ಕೂ ಹಾನಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದರು.
ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮುಕ್ತ ಜೀವನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಗೋಣಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯಿಂದ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾದ ಪ್ರಮುಖ ಅಭಿಯಾನವಾಗಿದೆ ಎಂದರು.ಕಾವೇರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪಿ.ಸಿ. ಬ್ರೈಟಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗೋಣಿಕೊಪ್ಪ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಮಂಜುಳ, ವಲಯ ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿಗಳಾದ ವಿಮಲ, ಜಯಪ್ರಕಾಶ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ವಿಪ್ರ ನೀಲಮ್ಮ, ಎನ್.ಎಸ್.ಎಸ್ ಅಧಿಕಾರಿ ಚೇತನ್ ಚಿಣ್ಣಪ್ಪ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.