ಸಮಾಜಕ್ಕೆ ಸಮಾನತೆಯ ತತ್ವ ಸಾರಿದ ವಚನಕಾರರು ದೇವರು ಮತ್ತು ಬೆವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಂಬಿದ್ದರು
ಕುರುಗೋಡು: ಶೋಷಿತ ವರ್ಗಕ್ಕೆ ಜೀವನ ಕಟ್ಟಿಕೊಳ್ಳಲು ನೆಲೆಗಟ್ಟು ಕಲ್ಪಿಸಿದ್ದು 12ನೇ ಶತಮಾನದ ಶರಣರ ಕಾಯಕತತ್ವ ಎಂದು ಸಹಾಯಕ ಪ್ರಧ್ಯಾಪಕ ತಿಪ್ಪೇರುದ್ರ ಸಂಡೂರು ಅಭಿಪ್ರಾಯಪಟ್ಟರು.
ಇಲ್ಲಿನ ಕೊಟ್ಟೂರಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಶನಿವಾರ ಆಯೋಜಿಸಿದ್ದ ಏಳನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜಕ್ಕೆ ಸಮಾನತೆಯ ತತ್ವ ಸಾರಿದ ವಚನಕಾರರು ದೇವರು ಮತ್ತು ಬೆವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಂಬಿದ್ದರು ಎಂದರು.
ಬಡಿದು ಬಾಳುವವರ ಮಧ್ಯದಲ್ಲಿ ದುಡಿದು ಬಾಳುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜಕ್ಕೆ ಭಾರವಾಗದೆ ವೃತ್ತಿ ಕೌಶಲ್ಯ ಮೈಗೂಡಿಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವುದು ಕಾಯಕ ತತ್ವದ ವಚನಕಾರರ ದ್ರವ್ಯವಾಗಿತ್ತು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿರಂಜನ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಕಾಯಕ ಮತ್ತು ಕೆಲಸಕ್ಕೆ ವ್ಯತ್ಯಾಸವಿದೆ. ಹಣ ಪಡೆದು ನಿಗದಿನ ಅವಧಿವರೆಗೆ ಮಾಡುವುದು ಕೆಲಸ. ಫಲಾಪೇಕ್ಷೆ ಇಲ್ಲದೆ ದೇವರ ಚಿಂತನೆಗಳೊಂದಿಗೆ ಸೇವೆ ಮಾಡುವುದು ಕಾಯಕವಾಗಿದೆ. ಕಾಯಕ ದಾಸೋಹ ತತ್ವ ರೂಢಿಸುತ್ತದೆ ಎಂದರು.
ಉಪ ಖಜಾನಾಧಿಕಾರಿ ಪಿ. ಅಲ್ಲಾಬಕ್ಷ ಮಾತನಾಡಿದರು. ಅಕ್ಕನ ಬಳಗದ ಸದಸ್ಯರು ಸುಶ್ರಾವ್ಯವಾಗಿ ಪ್ರಾರ್ಥನ ಗೀತೆ ಹಾಡಿದರು.ಯಲ್ಲಾಪುರ ಗುರುಲಿಂಗೇಶ್ವರ ಭಜನಾ ಮಂಡಳಿಯವರು ಭಜನಾಪದ ಹಾಡಿ ಭಕ್ತಿರಸದಲ್ಲಿ ಮಿಂದೇಳುವಂತೆ ಮಾಡಿದರು.