ರೇಣುಕಾಸ್ವಾಮಿ ಕೊಲೆ ಪ್ರಕರಣ : ಬಳ್ಳಾರಿ ಜೈಲಿನ 10*10 ಸೆಲ್‌ನಲ್ಲಿ ದರ್ಶನ್‌ ಏಕಾಂಗಿ ಕೈದಿ

KannadaprabhaNewsNetwork |  
Published : Aug 30, 2024, 01:11 AM ISTUpdated : Aug 30, 2024, 08:06 AM IST
ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಬೆಳಗ್ಗೆ ಕರೆತರಲಾಯಿತು.

 ಬಳ್ಳಾರಿ :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಬೆಳಗ್ಗೆ ಕರೆತರಲಾಯಿತು.

ಬೆಳಗಿನ ಜಾವ 4.30ಕ್ಕೆ ಬೆಂಗಳೂರಿನಿಂದ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಂಧ್ರಪ್ರದೇಶದ ಗಡಿ ಮೂಲಕ ದರ್ಶನ್‌ ನನ್ನು ಬೆಳಗ್ಗೆ 9.30ರ ಸುಮಾರಿಗೆ ಬಳ್ಳಾರಿಗೆ ಕರೆ ತರಲಾಯಿತು.

ದರ್ಶನ್ ಜೈಲಿನ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಆರೋಪಿತರ ಡೈರಿಯಲ್ಲಿ ಹೆಸರು, ವಿಳಾಸ, ಯಾವ ಜೈಲಿನಿಂದ ಬಂದಿದ್ದಾರೆ, ಎಷ್ಟು ಗಂಟೆಗೆ ಒಳ ಪ್ರವೇಶ ಮಾಡಿದ್ದಾರೆ, ಯಾವ ಆರೋಪದ ಮೇಲೆ ಬಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಅಧಿಕಾರಿಗಳು ದಾಖಲಿಸಿಕೊಂಡು, ದರ್ಶನ್‌ರಿಂದ ಸಹಿ ಪಡೆದುಕೊಂಡರು. ದಾಖಲಾತಿ ಪರಿಶೀಲನೆ ಕಾರ್ಯ ಮುಗಿದ ಬಳಿಕ ದರ್ಶನ್‌ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ನಂತರ, ಬೆಳಗ್ಗೆ 10.20ರ ಸುಮಾರಿಗೆ ಕೇಂದ್ರ ಕಾರಾಗೃಹದಲ್ಲಿರುವ ವಿಶೇಷ ಬ್ಯಾರಕ್‌ಗೆ (ಸಂಖ್ಯೆ15) ದರ್ಶನ್‌ನನ್ನು ಕಳಿಸಲಾಯಿತು. ಈ ಸೆಲ್‌ 10*10 ಅಡಿ ವಿಸ್ತ್ರೀರ್ಣದ್ದಾಗಿದೆ. ಇಲ್ಲಿ ದರ್ಶನ್‌ ಒಬ್ಬರನ್ನೇ ಇರಿಸಲಾಗಿದೆ.

ಕಡಗ ತೆಗೆಯಲು ನಿರಾಕರಿಸಿದ ದರ್ಶನ್‌ಗೆ ಪೊಲೀಸರ ಕ್ಲಾಸ್‌!

ಕರಿಬಣ್ಣದ ಬ್ರಾಂಡೆಡ್ ಟೀ ಶರ್ಟ್ ಧರಿಸಿದ್ದ ದರ್ಶನ್, ಕೈಯಲ್ಲಿ ಜಾಕೆಟ್, ಮತ್ತೊಂದು ಕೈಯಲ್ಲಿ ವಾಟರ್ ಬಾಟಲ್, ಎದೆ ಮೇಲೆ ಕನ್ನಡಕ ಸಿಕ್ಕಿಸಿಕೊಂಡು ಭದ್ರತಾ ವಾಹನದಿಂದ ಕೆಳಗಿಳಿದರು. ಸಿನಿಮಾ ಶೈಲಿಯಲ್ಲಿಯೇ ಎಂಟ್ರಿ ನೀಡಿದರು. ಆದರೆ, ಜೈಲಿನ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಪೊಲೀಸ್‌ ಭದ್ರತೆ ಕಂಡು ಮಂಕಾದರು. ತಪಾಸಣೆ ವೇಳೆ ಕೊರಳಲ್ಲಿದ್ದ ಕರಿದಾರ ಹಾಗೂ ಡಾಲರ್‌ನ್ನು ತೆಗೆಸಲಾಯಿತು. ಕೈಯಲ್ಲಿರುವ ಕಡಗ ತೆಗೆಯಲು ಬರುವುದಿಲ್ಲ. ಕಡಗ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ದರ್ಶನ್ ಮನವಿ ಮಾಡಿದರು. ಆದರೆ, ನಿಯಮದ ಪ್ರಕಾರ ಕಡಗ ಧರಿಸಲು ಅವಕಾಶವಿಲ್ಲ. ಹೀಗಾಗಿ ಕಡಗವನ್ನು ಕತ್ತರಿಸಿಯಾದರೂ ತೆರವುಗೊಳಿಸಲಾಗುವುದು ಎಂದು ಹೇಳಿದರು.

ಬಳಿಕ, ಸೋಪಿನ ನೀರಿನಲ್ಲಿ ಕೆಲ ಹೊತ್ತು ಕೈಯನ್ನು ಅದ್ದಿ ಕಡಗವನ್ನು ಕಳಚಲಾಯಿತು. ದರ್ಶನ್ ಬಳಿ ಎರಡು ಕನ್ನಡಕಗಳಿದ್ದವು. ಈ ಪೈಕಿ ಟೆಸ್ಟೆಡ್ ಕನ್ನಡಕವನ್ನು ನೀಡಿ, ಸ್ಟೈಲಿಶ್ ಕನ್ನಡಕವನ್ನು ಜೈಲು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ನಟ ದರ್ಶನ್ ತಂದಿದ್ದ ಎರಡು ಬ್ಯಾಗುಗಳ ತಪಾಸಣೆ ನಡೆಸಲಾಯಿತು.

ದರ್ಶನ್‌ ವಿಚಾರಣಾಧೀನ ಕೈದಿ ನಂಬರ್‌ 511

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಯೇ ರೂಢಾಪರಾಧಿಗಳು ಅಥವಾ ನಟೋರಿಯಸ್‌ ರೌಡಿಗಳನ್ನು ಇರಿಸುವ 15 ಸೆಲ್‌ಗಳ ವಿಶೇಷ ಬ್ಯಾರಕ್‌ ಇದ್ದು, ಇಲ್ಲಿಯೇ ದರ್ಶನ್‌ನನ್ನು ಇರಿಸಲಾಗಿದೆ. ಈತನಿಗೆ 511 ನಂಬರ್‌ ನೀಡಲಾಗಿದೆ.

ಈ ಸೆಲ್‌ಗೆ ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ದರ್ಶನ್ ಇರುವ ಸೆಲ್ 10*10 ವಿಸ್ತ್ರೀರ್ಣದ್ದಾಗಿದೆ. ಶೌಚಾಲಯ, ಫ್ಯಾನ್, ಕುಡಿವ ನೀರಿನ ವ್ಯವಸ್ಥೆ ಬಿಟ್ಟರೆ ಬೇರೆ ಯಾವ ಸೌಕರ್ಯಗಳಿಲ್ಲ. ಈ ಸೆಲ್‌ನಲ್ಲಿ ದರ್ಶನ್ ಒಬ್ಬರನ್ನೇ ಇರಿಸಲಾಗಿದೆ. ಹೈ ಸೆಕ್ಯೂರಿಟಿ ಬ್ಯಾರಕ್‌ನ್ನು ಮೂರೂವರೆ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಈ ಬ್ಯಾರಕ್‌ನ ಎರಡು ಬದಿಯಲ್ಲಿ ಒಟ್ಟು 30 ಸೆಲ್‌ಗಳಿವೆ. ಒಂದು ಬದಿಯಲ್ಲಿರುವ 15 ಸೆಲ್‌ಗಳ ಪೈಕಿ ಒಂದರಲ್ಲಿ ದರ್ಶನನ್ನು ಬಂಧಿಸಿಡಲಾಗಿದೆ.

ಮನೆಯಲ್ಲೇ ಮೊಬೈಲ್‌ ಇಟ್ಟು ಬಂದಿದ್ದ ಜೈಲು ಸಿಬ್ಬಂದಿ!

ಕಾರಾಗೃಹದ ಸಿಬ್ಬಂದಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದ್ದು, ಸಂವಹನಕ್ಕೆ ವೈರ್‌ಲೆಸ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಕೈದಿಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಕು. ಒಂಚೂರು ಸಮಸ್ಯೆಯಾದರೂ ತಲೆದಂಡವಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರಿಂದ ಜೈಲ್‌ನ ಸಿಬ್ಬಂದಿ ಮೊಬೈಲ್ ಗಳನ್ನು ಮನೆಯಲ್ಲಿಯೇ ಇಟ್ಟು ಬಂದಿರುವುದು ತಿಳಿದು ಬಂತು.

ಮಧ್ಯಾಹ್ನದ ಊಟ ನಿರಾಕರಿಸಿದ ದರ್ಶನ್‌

ಜೈಲು ಸೇರಿದ ಬಳಿಕ ದರ್ಶನ್‌ಗೆ ಮಧ್ಯಾಹ್ನದ ಊಟಕ್ಕೆ ಚಪಾತಿ, ಪಲ್ಯ, ಅನ್ನ ಹಾಗೂ ಸಾಂಬಾರ್ ನೀಡಲಾಗಿತ್ತು. ಆದರೆ, ದರ್ಶನ್ ಊಟವನ್ನು ನಿರಾಕರಿಸಿದ್ದಾರೆ. ಸೆಲ್‌ಗೆ ಬಂದ ಬಳಿಕ ಮೌನವಾಗಿ ನೆಲದ ಮೇಲೆಯೇ ಕುಳಿತಿದ್ದರು ಎಂದು ತಿಳಿದು ಬಂದಿದೆ.

ಎಸ್ಪಿ, ಜಿಲ್ಲಾಧಿಕಾರಿಯಿಂದ ಜೈಲಿನ ವ್ಯವಸ್ಥೆ ಪರಿಶೀಲನೆ

ದರ್ಶನ್ ಆಗಮನ ಹಿನ್ನೆಲೆಯಲ್ಲಿ ಎಸ್ಪಿ ಡಾ.ಶೋಭಾರಾಣಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಕಾರಾಗೃಹಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರಾಗಳ ಪರಿಶೀಲನೆ, ಜಾಮರ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ. ಸಹಜವಾಗಿ ವಿಚಾರಣಾಧೀನ ಕೈದಿಗೆ ನೀಡುವ ಸೌಕರ್ಯಗಳೇನು? ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿದರು.

ಹೂವು, ಸಿಹಿ, ಹಣ್ಣು ಹಿಡಿದು ದರ್ಶನ್‌ಗಾಗಿ ಕಾದಿದ್ದ ಫ್ಯಾನ್ಸ್‌!ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಜೈಲಿನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಲಾಗಿತ್ತು. ದರ್ಶನ್‌ರನ್ನು ನೋಡಲು ಶ್ರೀಕನಕ ದುರ್ಗಮ್ಮ ದೇವಸ್ಥಾನದ ಸಮೀಪ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕೆಲವರು ಹೂವಿನ ಹಾರಗಳನ್ನು ತಂದಿದ್ದರೆ, ಮತ್ತೆ ಕೆಲವರು ಬೇಕರಿಯಲ್ಲಿ ಸಿಹಿ ಪದಾರ್ಥಗಳನ್ನು ಖರೀದಿಸಿ ತಂದಿದ್ದರು. ಪೊಲೀಸರು ಅವರೆಲ್ಲರನ್ನೂ ದೂರ ಕಳಿಸಿದರು.

ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ರನ್ನು ಒಂದು ವಾರದವರೆಗೆ ಕುಟುಂಬ ಸದಸ್ಯರು ಭೇಟಿ ಮಾಡಲು ಅವಕಾಶವಿದೆ. ನಂತರ, ವಾರದಲ್ಲಿ ಒಂದು ದಿನ ಮಾತ್ರ ಭೇಟಿಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಇತರ ಕೈದಿಗಳ ಸಂಬಂಧಿಕರಿಗೆ ಸಮಸ್ಯೆ

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಇತರ ಕೈದಿಗಳ ಸಂಬಂಧಿಕರಿಗೆ ಸಮಸ್ಯೆಯಾಯಿತು. ಸಂಬಂಧಿಕರು ಮನೆಯಿಂದ ತಂದಿದ್ದ ಊಟವನ್ನು ನೀಡಲು ನಿರಾಕರಿಸಲಾಯಿತು. ಹಣ್ಣು-ಹಂಪಲುಗಳನ್ನು ಮಾತ್ರ ನೀಡಬೇಕು. ಊಟವನ್ನು ನೀಡುವಂತಿಲ್ಲ ಎಂದು ಜೈಲು ಸಿಬ್ಬಂದಿ ಹೇಳಿದ್ದರಿಂದ ದೂರದ ಊರುಗಳಿಂದ ಆಗಮಿಸಿದ್ದ ಅನೇಕರು ತೀವ್ರ ಬೇಸರಗೊಂಡರು. 

ಹಸ್ತಲಾಘವ ನಿರಾಕರಿಸಿದ ಪೊಲೀಸ್‌ ಅಧಿಕಾರಿ

ಬೆಂಗಳೂರು ಜೈಲಿನಿಂದ ಬಳ್ಳಾರಿಗೆ ತಮ್ಮನ್ನು ಕರೆ ತಂದ ಪೊಲೀಸ್ ಅಧಿಕಾರಿಯೊಬ್ಬರಿಗೆ ದರ್ಶನ್ ಹಸ್ತಲಾಘವ ಮಾಡಲು ಮುಂದಾದರು. ಆದರೆ, ಅಧಿಕಾರಿ ಹಸ್ತಲಾಘವ ಮಾಡದೇ ನಯವಾಗಿ ತಿರಸ್ಕರಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ