
ಶನಿವಾರ ಬೆಳಗ್ಗೆ 10. 5.30ರ, ಭಾನುವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಭಕ್ತರಿಗೆ ಅವಕಾಶಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪಶ್ಚಿಮ ಘಟ್ಟಗಳು, ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಾಫಿ ತೋಟಗಳು ಹಾಗೂ ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿರುವ ಬಿಂಡಿಗ ದೇವಿರಮ್ಮನ ಜಾತ್ರೆ ಮಹೋತ್ಸವಕ್ಕೆ ಸಕಲ ಸಿದ್ಧತೆಯೊಂದಿಗೆ ಶನಿವಾರ ಮತ್ತು ಭಾನುವಾರ ಭಕ್ತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಶನಿವಾರ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮತ್ತು ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಭಕ್ತರಿಗೆ ಭಕ್ತಿ, ನಂಬಿಕೆ, ಸಾಹಸ, ಸಂಪ್ರದಾಯ ಹಾಗೂ ಪ್ರಕೃತಿಯ ಅದ್ಭುತ ಸೌಂದರ್ಯ ಒಂದೆಡೆ ಮೇಳೈಸುವ ದೇವಿರಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ.ದೀಪಾವಳಿ ಸಂದರ್ಭದಲ್ಲಿ ನಡೆಯುವ ದೇವಿರಮ್ಮನ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದ ಜನಪದ ಪರಂಪರೆ, ಗ್ರಾಮೀಣ ಸಂಸ್ಕೃತಿ ಹಾಗೂ ಸಾಮೂಹಿಕ ಭಕ್ತಿ ಪ್ರತೀಕ. ವರ್ಷವಿಡೀ ದೇವಿಯ ದರ್ಶನಕ್ಕಾಗಿ ಕಾತರದಿಂದ ಕಾಯುವ ಸಾವಿರಾರು ಭಕ್ತರು ಜಾತ್ರೆ ಸಂದರ್ಭದಲ್ಲಿ ಬೆಟ್ಟವೇರಿ ದೇವಿಯ ದರ್ಶನ ಪಡೆಯು ವುದು ಇಲ್ಲಿನ ವಿಶೇಷತೆ. ದೇವಿರಮ್ಮನ ಜಾತ್ರೆ ಅತ್ಯಂತ ವಿಶಿಷ್ಟ ಆಕರ್ಷಣೆಯೆಂದರೆ ಬೆಟ್ಟದ ಮೇಲಿನ ಮೂಲ ದೇವಾಲಯದ ವಾರ್ಷಿಕ ದರ್ಶನ. ಸಮುದ್ರ ಮಟ್ಟದಿಂದ ಸುಮಾರು 3,000 ಅಡಿ ಎತ್ತರದ ದೇವಿರಮ್ಮನ ಬೆಟ್ಟದ ದೇವಾಲಯ ದೀಪಾವಳಿಯ ನರಕ ಚತುರ್ದಶಿಯಂದು ಮಾತ್ರ ಭಕ್ತರ ದರ್ಶನಕ್ಕೆ ತೆರೆಯುತ್ತದೆ. ಶ್ರೀ ದೇವೀರಮ್ಮ ದೇವಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಈ ಬಾರಿ 80ರಿಂದ 90 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ವರ್ಷದ ಉಳಿದ ದಿನಗಳಲ್ಲಿ ಬೆಟ್ಟದ ಮೇಲಿನ ದೇವಾಲಯದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನದ ಅವಕಾಶವಿರುವುದಿಲ್ಲ. ಹೀಗಾಗಿ ವರ್ಷಕ್ಕೊಮ್ಮೆ ನಡೆಯುವ ಈ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.8 ಕಿ.ಮೀ ಕಾಲ್ನಡಿಗೆ:ಬೆಟ್ಟದ ಮೇಲಿನ ದೇವಾಲಯ ತಲುಪಲು ಸುಮಾರು 8 ಕಿಲೋಮೀಟರ್ ಗಳಷ್ಟು ಕಾಲ್ನಡಿಗೆಯಲ್ಲಿ ಸಾಗಬೇಕು. ಕಡಿದಾದ ಹಾದಿ, ಕಲ್ಲುಬಂಡೆಗಳು ಹಾಗೂ ಕಾಡಿನ ನಡುವೆ ಸಾಗುವ ಈ ಚಾರಣ ಭಕ್ತರಿಗೆ ದೈಹಿಕ ಶ್ರಮದ ಜತೆಗೆ ಆಧ್ಯಾತ್ಮಿಕ ಅನುಭವವನ್ನೂ ನೀಡುತ್ತದೆ.ದೇವಿರಮ್ಮನ ಜಾತ್ರೆಯಲ್ಲಿ ಭಕ್ತರು ಅನುಸರಿಸುವ ಆಚರಣೆಗಳೂ ವಿಶಿಷ್ಟ. ಅನೇಕ ಭಕ್ತರು ಹರಕೆ ಮಾಡಿಕೊಂಡು ಬರಿಗಾಲಿ ನಲ್ಲಿ ಬೆಟ್ಟವನ್ನೇರುತ್ತಾರೆ. ಕೆಲವರು ತಮ್ಮ ಶಕ್ತಿಗನುಸಾರವಾಗಿ ಸೌದೆ ಹೊತ್ತು ದೇವಿ ಸನ್ನಿಧಿಗೆ ತೆರಳುತ್ತಾರೆ. ಇನ್ನು ಕೆಲವರು ಸೀರೆ, ರವಿಕೆ, ತೆಂಗಿನಕಾಯಿ, ಬಾಳೆಹಣ್ಣು, ತುಪ್ಪ, ಬೆಣ್ಣೆ ಹಾಗೂ ಎಣ್ಣೆ ದೇವಿಗೆ ಸಮರ್ಪಿಸುತ್ತಾರೆ.ಹರಕೆ ಮಾಡಿದ ಭಕ್ತರು ಉಪವಾಸ ವ್ರತ ಆಚರಿಸಿ, ಬೆಟ್ಟದ ಮೇಲಿನ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕವೇ ಆಹಾರ ಸೇವಿಸುವ ಸಂಪ್ರದಾಯ ಪಾಲಿಸುತ್ತಾರೆ. ಭಕ್ತಿಯೊಂದಿಗೆ ಬೆಟ್ಟ ಏರುವ ಸಾವಿರಾರು ಭಕ್ತರ ದೃಶ್ಯ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ.ಬೆಟ್ಟದ ಮೇಲೆ ಜ್ಯೋತಿ ಬೆಳಕು:ದೇವಿರಮ್ಮನ ಜಾತ್ರೆ ಮತ್ತೊಂದು ಪ್ರಮುಖ ಆಕರ್ಷಣೆ ದೀಪೋತ್ಸವ. ಬೆಟ್ಟದ ಮೇಲಿನ ದೇವಾಲಯದಲ್ಲಿ ಭಕ್ತರು ಸಮರ್ಪಿ ಸಿದ ಸೌದೆ, ತುಪ್ಪ, ಎಣ್ಣೆ ಸೇರಿದಂತೆ ಪೂಜಾ ಸಾಮಗ್ರಿಗಳೊಂದಿಗೆ ದೀಪ ಹಾಗೂ ಅಗ್ನಿ ಆರಾಧನೆ ನಡೆಯುತ್ತದೆ. ಬೆಟ್ಟದ ಮೇಲೆ ಬೆಳಗುವ ಜ್ಯೋತಿ ಸುತ್ತಮುತ್ತಲಿನ ಪ್ರದೇಶಗಳಿಗೂ ಗೋಚರಿಸುತ್ತದೆ.ಈ ಜ್ಯೋತಿಯನ್ನು ಕಂಡ ಬಳಿಕವೇ ಸುತ್ತಮುತ್ತಲಿನ ಗ್ರಾಮಗಳ ಅನೇಕ ಕುಟುಂಬಗಳು ದೀಪಾವಳಿ ಆಚರಣೆಗೆ ವಿಶೇಷ ಮಹತ್ವ ನೀಡುತ್ತವೆ ಎಂಬ ಸ್ಥಳೀಯ ನಂಬಿಕೆಯಿದೆ. ದೀಪಾವಳಿ ಬೆಳಕಿನ ಹಬ್ಬಕ್ಕೆ ದೇವಿರಮ್ಮನ ದೀಪೋತ್ಸವ ಮತ್ತಷ್ಟು ಧಾರ್ಮಿಕ ಮೆರುಗು ನೀಡುತ್ತದೆ. ಬೆಟ್ಟದ ಮೇಲೆ ಬೆಳಗುವ ಜ್ಯೋತಿ ಭಕ್ತರ ಪಾಲಿಗೆ ಶ್ರದ್ಧೆ, ನಂಬಿಕೆ ಹಾಗೂ ದೈವಿಕ ಅನುಭೂತಿಯ ಪ್ರತೀಕವಾಗಿದೆ.-- ಬಾಕ್ಸ್--ವಾಹನ ಸಂಚಾರ ಮಾರ್ಗ ಬದಲಾವಣೆಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ ಜಿಲ್ಲಾಧಿಕಾರಿ ವಾಹನ ಸಂಚಾರ ಮಾರ್ಗ ಬದಲಾವಣೆ ಆದೇಶ ಹೊರಡಿಸಿದ್ದಾರೆ. ನವೆಂಬರ್ 7ರ ಬೆಳಗ್ಗೆ 6ರಿಂದ ನವೆಂಬರ್ 8ರ ರಾತ್ರಿ 8ರವರೆಗೆ ಜಾತ್ರೆಗೆ ಆಗಮಿಸುವ ಸ್ಥಳೀಯರು ಹಾಗೂ ಭಕ್ತರ ವಾಹನ ಗಳನ್ನು ಹೊರತುಪಡಿಸಿ, ತರೀಕೆರೆಯಿಂದ ಚಿಕ್ಕಮಗಳೂರು ಕಡೆಗೆ ಸಂಚರಿಸುವ ಇತರ ಎಲ್ಲ ವಾಹನಗಳು ಕಡೂರು ಮಾರ್ಗವಾಗಿ ಸಂಚರಿಸಬೇಕು.ತರೀಕೆರೆ-ಲಿಂಗದಹಳ್ಳಿ-ಸಂತವೇರಿ ಮಾರ್ಗವಾಗಿ ಬರುವ ಭಕ್ತರ ವಾಹನಗಳಿಗೆ ಕುಮಾರಗಿರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬಿಂಡಿಗ-ಮಲ್ಲೇನಹಳ್ಳಿಗೆ ಬರುವವರು ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಾತ್ರ ವಾಹನ ನಿಲುಗಡೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.
...ಬಾಕ್ಸ್....ಭಕ್ತರ ಸುರಕ್ಷತೆಗೆ ಜಿಲ್ಲಾಡಳಿತದ ಸಕಲ ಸಿದ್ಧತೆಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ. ಬೆಟ್ಟ ಹತ್ತುವ ಮಾರ್ಗದಲ್ಲಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ವತಿಯಿಂದ ಅಣಕು ಕಾರ್ಯಾಚರಣೆ (ಮಾಕ್ ಡ್ರಿಲ್) ನಡೆಸಲಾಗಿದೆ.ಅಪಾಯಕಾರಿ ಹಾಗೂ ಜಾರುವ ಸ್ಥಳಗಳಲ್ಲಿ ಹೊಸ ಹಗ್ಗಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಭಕ್ತರನ್ನು ಸುರ ಕ್ಷಿತವಾಗಿ ಕೆಳಗೆ ಕರೆತರಲು ಅಗ್ನಿಶಾಮಕ ಸಿಬ್ಬಂದಿಗೆ ಹೆಡ್ಟಾರ್ಚ್, ಸ್ಟ್ರೆಚರ್ ಹಾಗೂ ಹಾರ್ನೆಸ್ ಉಪಕರಣಗಳನ್ನು ಒದಗಿಸಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಡುವೆ ಸಮನ್ವಯ ಸಾಧಿಸಲು ವಿಶೇಷ ವೈರ್ಲೆಸ್ ಸಂವಹನ ಸಾಧನಗಳನ್ನೂ ಒದಗಿಸಲಾಗಿದೆ.---ಬಾಕ್ಸ್--ಮುಖ್ಯಾಂಶಗಳು:* ಬೆಳಗ್ಗೆ 6 ಗಂಟೆ: ಪೂಜಾ ಕಾರ್ಯಗಳ ಆರಂಭ.* ಬೆಳಗ್ಗೆ 10 ಗಂಟೆ: ಪೂಜಾ ಕಾರ್ಯಗಳ ಮುಕ್ತಾಯ.* ಬೆಳಗ್ಗೆ 10 ಗಂಟೆಯ ನಂತರ: ಭಕ್ತರಿಗೆ ಬೆಟ್ಟ ಹತ್ತಲು ಅವಕಾಶ.* ಸಂಜೆ 4 ಗಂಟೆ: ಬೆಟ್ಟ ಹತ್ತಲು ಕೊನೆಯ ಪ್ರವೇಶ ಸಮಯ.* ರಾತ್ರಿ: ಬೆಟ್ಟ ಹತ್ತಲು ಅವಕಾಶವಿಲ್ಲ.