
ತೋಳೂರು 20ನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಹೋರಾಟ । ಸರ್ಕಾರದಿಂದ ನಿವೇಶನ ರಹಿತರಿಗೆ ಶಾಶ್ವತ ಪರಿಹಾರಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಆಲ್ದೂರು
ಬಡ ಕೂಲಿ ಕಾರ್ಮಿಕರು ನಿವೇಶನ ನೀಡುವಂತೆ ಒತ್ತಾಯಿಸಿ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ತೋಳೂರು ಗುಡ್ಡದ ನಿವೇಶನ ರಹಿತರು ಆರಂಭಿಸಿದ್ದ 20ನೇ ದಿನಗಳನ್ನು ಪೂರೈಸಿದ್ದರೂ ಸರ್ಕಾರ ಅಥವಾ ಅಧಿಕಾರಿಗಳು ಹೋರಾಟಗಾರರ ಸಮಸ್ಯೆ ನೀಗಿಸಲು ಮುಂದಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಂಕ್ ಶೀಟ್ ಗಳಿಂದ ಗುಡಿಸಲುಗಳನ್ನು ನಿರ್ಮಿಸಿ ಸಂಬಂಧಪಟ್ಟ ಜಮೀನಿನಲ್ಲಿ ವಾಸ ಪ್ರಾರಂಭಿಸಿದ್ದಾರೆ.ಸರ್ವೆ ನಂ.167ರ ಜಮೀನಿನಲ್ಲಿ ಅಕ್ರಮವಾಗಿ ಕೆಲವರು ಕಾಫಿ ತೋಟ ನಿರ್ಮಿಸಲು ಮುಂದಾಗಿದ್ದ ವಿಷಯ ತಿಳಿದ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಸ್ಥಳದಲ್ಲಿ ನಿವೇಶನಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿದ್ದರು. ಟಾರ್ಪಲ್ ಹಾಕಿ ಸ್ಥಳದಲ್ಲಿ ಹೋರಾಟ ಆರಂಭಿಸಿದ ಮೊದಲನೆ ದಿನದಿಂದ ನಿರಂತರ 5 ದಿನಗಳ ಕಾಲ ಅಬ್ಬರದ ಮಳೆ ಸುರಿದರೂ ಕದಲದೆ ಇದೇ ಜಾಗದಲ್ಲಿ ಹೊಟ್ಟೆ ಪಾಡಿಗೆ ಗಂಜಿ ಮಾಡಿ ಇಲ್ಲೆ ಉಳಿದಿದ್ದರು. ಈಗ ಇಲ್ಲಿಂದಲೇ ಕಾಫಿ ತೋಟಗಳಿಗೆ ಮತ್ತು ಕೂಲಿ ಕೆಲಸಗಳಿಗೆ, ಮಕ್ಕಳು ಶಾಲೆಗಳಿಗೂ ಮಕ್ಕಳು ಹೋಗುತ್ತಾ 20ದಿನಗಳಿಂದ ನಿರಂತರ ಹೋರಾಟ ನಡೆಸಿರುವ ಜನರ ಗೋಳು ಕೇಳೋರಿಲ್ಲ ಎನ್ನುವಂತಾಗಿದೆ.
ಹೋರಾಟ ಸಮಿತಿ ಕಾರ್ಯದರ್ಶಿ ರಮೇಶ್ ಬೂತನ ಕಾಡು, ವಿಶ್ವನಾಥ್ 20 ದಿನಗಳ ಹಿಂದೆ ಹೋರಾಟಕ್ಕೆ ಮುನ್ನುಡಿ ಬರೆದರು. ಅಂದಿನಿಂದ ನಿವೇಶನ ರಹಿತರು ಮೊಟ್ಟ ಮೊದಲು ಟಾರ್ಪಲ್ ಹಾಕಿ ಸ್ಥಳದಲ್ಲಿ ಹೋರಾಟ ಆರಂಭಿಸಿದ್ದರು.
ಬದುಕು ಕಟ್ಟಿಕೊಳ್ಳಲು ಜೀವನಪೂರ್ತಿ ಹೋರಾಟ ನಡೆಸುವ ಕೂಲಿ ಕಾರ್ಮಿಕರು ತಮಗೆಂದು ಒಂದು ಸೂರು ನಿರ್ಮಿಸಿ ಕೊಳ್ಳಲು ಹೋರಾಟವನ್ನೇ ನಡೆಸಬೇಕಾದ ದುಸ್ಥಿತಿ ಬಹಳ ಬೇಸರ ತರಿಸುತ್ತಿದೆ ಎಂದು ಹೋರಾಟ ಸಮಿತಿ ಸಲಹೆಗಾರ ಕೃಪಾಕ್ಷ ಕೋಟ್ಯಾನ್ ತಿಳಿಸಿದರು. ಜನಪ್ರತಿನಿಧಿಗಳು ಚುನಾವಣೆಗೆ ಮುನ್ನ ನೀಡುವ ಭರವಸೆ ಈಡೇರಿಸಲ್ಲ. ಕನಿಷ್ಠ ಜನರ ಕುಂದು ಕೊರತೆ ಆಲಿಸಲು ಸಮಯ ವಿರುವುದಿಲ್ಲ. ಸಾರ್ವಜನಿಕರ ತೆರಿಗೆಯಿಂದ ಸಂಬಳ ಪಡೆವ ಅಧಿಕಾರಿ ಗಳ ವರ್ಗಕ್ಕೂ ಕೂಲಿ ಕಾರ್ಮಿಕರ ಕೂಗು ಅರ್ಥವಾಗಲ್ಲ. ಉಳ್ಳವರಿಗೆ ಕೃಷಿ ನೆಪದಲ್ಲಿ 25-ರಿಂದ 30 ವರ್ಷಗಳ ಕಾಲ ಗುತ್ತಿಗೆ ನೀಡುವ ಸರ್ಕಾರಗಳು ಬಿಪಿಎಲ್ ಪಡಿತರ ಪಡೆಯುವ ಆರ್ಥಿಕವಾಗಿ ಹಿಂದುಳಿದವರಿಗೆ ತಲಾ 2 ಎಕರೆ ಭೂಮಿಯನ್ನೂ ಮಂಜೂರು ಮಾಡಲ್ಲ. ಒಂದು ಸೂರು ಇಲ್ಲದ ಜನ ನಿವೇಶನಕ್ಕಾಗಿ ಅನಿವಾರ್ಯವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಇನ್ನಾದರೂ ಸರ್ಕಾರ ಜನಪ್ರತಿನಿಧಿಗಳು ನಿವೇಶನ ರಹಿತರ ಮನವಿ ಆಲಿಸಲಿ ಎಂದು ಸಮಿತಿ ಸದಸ್ಯ ವಿನೋದ್ ರಾಜ್ ಒತ್ತಾಯಿಸಿದ್ದಾರೆ.
ಗುಡಿಸಲು ಹಾಕಿರುವ ಸರ್ವೆ ನಂ.167ರ ಜಮೀನಿನಲ್ಲಿ ಅಕ್ರಮವಾಗಿ ಯಾವುದೇ ಅನುಮತಿ ಪಡೆಯದೆ ಕೆಲವರು ತೋಟ ನಿರ್ಮಿಸಲು ಮುಂದಾಗಿದ್ದರು. ಕಾಫಿ ತೋಟ ನಿರ್ಮಿಸಲು ಪ್ರಭಾವಿ ಗಳಿಗೆ ಮಾತ್ರ ಕೆಲವು ಅಧಿಕಾರಿಗಳು ಕುಮ್ಮಕ್ಕು ನೀಡಿ ಆಂತರಿಕವಾಗಿ ಸಹಕರಿಸುತ್ತಾರೆ. ವಿಷಯ ತಿಳಿದ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಸ್ಥಳದಲ್ಲಿ ನಿವೇಶನಕ್ಕೆ ಆಗ್ರಹಿಸಿ ಗುಡಿಸಲು ಹಾಕಿದರೆ ಅವರನ್ನು ಮನವೊಲಿಸಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಗುರುವಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಒತ್ತುವರಿ ಮಾಡಿ ತೋಟ ನಿರ್ಮಿಸಲಾಗಿದೆ ಎಂದು ಪ್ರಸ್ತುತ ಗುಡಿಸಲು ಹಾಕಿದ ನಿವೇಶನ ರಹಿತರು ಮಾಹಿತಿ ನೀಡಿದ ಹಿನ್ನೆಲೆ ಒತ್ತುವರಿ ತೆರವುಗೊಳಿಸಿ ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈಗಾಗಲೇ ತಹಸೀಲ್ದಾರ್ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಮುಕ್ತಾಯಗೊಳಿಸಿದೆ. ಸಂಬಂಧಪಟ್ಟ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು ನಿವೇಶನ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಮತ್ತು ಸರ್ಕಾರದ್ದು, ಆದರೆ ಪ್ರಸ್ತುತ ನಿವೇಶನದಲ್ಲಿ ಗುಡಿಸಲು ಹಾಕಿರುವುದು ನಿಯಮಬಾಹಿರ.