ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆರೆಗಳಿಗೆ ನೀರು ತುಂಬಿಸಲು ಅಂತರ್ಜಲ ವೃದ್ಧಿಸಿ ಜನ ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ಅಗಟಹಳ್ಳಿಯಲ್ಲಿ ಸಣ್ಣನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆಯಿಂದ 1.80 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆಯಿಂದ ಅಗಟಹಳ್ಳಿ, ಮಾದೇಗೌಡನಕೊಪ್ಪಲು ಹಾಗೂ ಚಿಕ್ಕಕೊಪ್ಪಲು ಗ್ರಾಮದ ಕೆರೆ ತುಂಬಿಸುವ ಏತನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ದುದ್ದ ಏತನೀರಾವರಿ ಯೋಜನೆಯಿಂದ ಬಾಬುರಾಯನಕಟ್ಟೆಯಿಂದ ತಾಲೂಕಿನ ಗಡಿ ಗ್ರಾಮಗಳಾದ ಅಗಟಹಳ್ಳಿ, ಮಾದೇಗೌಡನ ಕೊಪ್ಪಲು ಹಾಗೂ ಚಿಕ್ಕಕೊಪ್ಪಲು ಕೆರೆಗಳಲ್ಲಿ ನೀರಿಲ್ಲದೆ ಜನ, ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗಿತ್ತು ಎಂದರು.ಅಲ್ಲದೇ, ಅಗಟಹಳ್ಳಿ ಭಾಗದಲ್ಲಿ ನೀರಿಗಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಜತೆಗೆ ದೊಡ್ಡಕೆರೆಯಾಗಿದೆ. ಈ ಯೋಜನೆಯಿಂದ ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಗ್ರಾಮದ ಸಂಪರ್ಕ ರಸ್ತೆಗೂ ಈಗಾಗಲೆ ಕ್ರಮವಹಿಸಲಾಗಿದೆ. ಶೀಘ್ರವೇ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರಸ್ತೆಗಳು ಅಧ್ವಾನಗೊಂಡಿರುವುದರಿಂದ ಭಾಗದ ಸುತ್ತಮುತ್ತಲಿನ ಗ್ರಾಮಗಳಿಗೆ ಸಾರಿಗೆ ಬಸ್ ಸಂಪರ್ಕವು ಸಹ ಕಡಿತಗೊಂಡಿತ್ತು. ಇದರಿಂದ ಶಾಲಾ ಮಕ್ಕಳಿಗೆ ಸಾಕಷ್ಟು ಅನಾನುಕೂಲವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಸಂಪರ್ಕಕ್ಕೂ ಕ್ರಮ ವಹಿಸಲಾಗುವುದು ಎಂದರು.ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳಲ್ಲಿ ರೈತಸಂಘ - ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಮತದಾರರ ತೀರ್ಪುನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ಟಿಎಪಿಸಿಎಂಎಸ್ ಹಾಗೂ ಕಸಬಾ ಸೊಸೈಟಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಘಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ರವಿರಾಜ್, ಸಣ್ಣನೀರಾವರಿ ಇಲಾಖೆ ಎಇಇ ಈಶ್ವರ್, ಎಇ ಕಿರಣ್, ಗುತ್ತಿಗೆದಾರ ಸಚ್ಚಿನ್, ರೈತ ಮುಖಂಡರಾದ ನಿಂಗೇಗೌಡ, ಮೋಹನ್‌ಕುಮಾರ್, ಸತೀಶ್, ಶಂಕರೇಗೌಡ, ನಟರಾಜು, ಪಟೇಲ್ ಪುಟ್ಟಸ್ವಾಮಿ, ಹನುಮೇಶ, ಸಚ್ಚಿನ್, ಪ್ರವೀಣ್, ಚಿಕ್ಕಕೊಪ್ಪಲು ಚಂದ್ರಶೇಖರ್, ಜೈಶಂಕರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.