ಶಾಸಕರಾಗಿ ದರ್ಶನ್ ಪುಟ್ಟಣ್ಣಯ್ಯ 12ನೇ ಬಾರಿಗೆ ಅಮೆರಿಕಕ್ಕೆ

KannadaprabhaNewsNetwork |  
Published : Jun 25, 2025, 11:47 PM IST
25ಕೆಎಂಎನ್ ಡಿ12 | Kannada Prabha

ಸಾರಾಂಶ

ಶಾಸಕರು ಪತ್ನಿ ಆರೋಗ್ಯ ಸಮಸ್ಯೆ ನಿವಾರಣೆಗೆ ಪದೇ ಪದೇ ಅಮೆರಿಕಕ್ಕೆ ತೆರಳುವ ಬದಲು ಕುಟುಂಬವನ್ನೇ ಭಾರತಕ್ಕೆ ಕರೆತಂದು ಚಿಕಿತ್ಸೆ ಕೊಡಿಸಬಹುದಲ್ಲವೇ. ಶಾಸಕರು ವಿದೇಶಕ್ಕೆ ತೆರಳಿದಾಗ ಅಧಿಕಾರಿಗಳದ್ದೇ ಕಾರುಬಾರಾಗುತ್ತಿದೆ. ಯಾರು ಹೇಳೋರು ಕೇಳೋರು ಇಲ್ಲದಂತಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ 12ನೇ ಬಾರಿ ಅಮೆರಿಕಕ್ಕೆ ತೆರಳಿದ್ದಾರೆ.

ಶಾಸಕರಾದ ನಂತರ ದರ್ಶನ್ ಪುಟ್ಟಣ್ಣಯ್ಯ ಇದುವರೆಗೂ 2 ವರ್ಷಗಳಲ್ಲಿ 12 ಬಾರಿ ಅಮೆರಿಕಕ್ಕೆ ತೆರಳಿದ್ದು, ಪದೇಪದೇ ಅಮೆರಿಕಕ್ಕೆ ತೆರಳುತ್ತಿರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಜತೆಗೆ ಜನಸಾಮಾನ್ಯರ ಕೆಲಸ ಕಾರ್ಯಗಳೂ ಕುಂಠಿತವಾಗುತ್ತಿವೆ.

ಚುನಾವಣೆಗೂ ಮುನ್ನ ಅಮೆರಿಕದಲ್ಲಿ ವಾಸವಾಗಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು ತಂದೆ ಕಾಲವಾದ ಬಳಿಕ ಚುನಾವಣಾ ರಾಜಕೀಯ ಪ್ರವೇಶಿಸಿದರು. 2018ರ ಚುನಾವಣೆಯಲ್ಲಿ ಸೋಲುಂಡ ಬಳಿಕ ವಾಪಸ್ ಅಮೆರಿಕಕ್ಕೆ ತೆರಳಿದರು.

ಬಳಿಕ 2023ರ ವಿಧಾನಸಭೆ ಚುನಾವಣೆ ಸನಿಹವಾಗುತ್ತಿದ್ದಂತೆ ಕ್ಷೇತ್ರಕ್ಕೆ ಮರಳಿ ಪ್ರಚಾರದಲ್ಲಿ ತೊಡಗಿಕೊಂಡರು. ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ. ನಾನು ಇಲ್ಲಿಯೇ ಉಳಿದು ಕ್ಷೇತ್ರದ ಜನತೆ ಸೇವೆ ಮಾಡುತ್ತೇನೆ ಎನ್ನುವುದಾಗಿ ವಾಗ್ದಾನ ಮಾಡಿದ್ದರು.

ಆದರೆ, ಚುನಾವಣೆಯಲ್ಲಿ ಗೆದ್ದು ಶಾಸಕರಾದ 15 ದಿನದಲ್ಲಿ ಅಮೆರಿಕಕ್ಕೆ ತೆರಳಿದರು. ಇದೀಗ ಅವರ ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪದೇ ಪದೇ ತೆರಳುತ್ತಿದ್ದಾರೆ. ಕ್ಷೇತ್ರದಲ್ಲಿ ಒಂದು ಅಥವಾ ಎರಡು ತಿಂಗಳು ಇದ್ದು ಕೆಲಸ ಮಾಡಿದ ನಂತರ ಮತ್ತೆ 15 ರಿಂದ 20 ದಿನ ಅಮೆರಿಕಕ್ಕೆ ತೆರಳುತ್ತಿದ್ದಾರೆ.

ಶಾಸಕರು ಯಾವಾಗ ಅಮೆರಿಕಕ್ಕೆ ಹೋಗುತ್ತಾರೆ, ಬರುತ್ತಾರೆ ಎನ್ನುವುದು ಪಕ್ಷದ ಕೆಲವು ಕಾರ್ಯಕರ್ತರು, ಬೆಂಬಲಿಗರಿಗೆ ಹೊರತು ಪಡಿಸಿದರೆ ಸಾಮಾನ್ಯ ಜನರಿಗೆ ತಿಳಿಯುತ್ತಿಲ್ಲ. ಇದರಿಂದ ಶಾಸಕರ ಬಳಿ ತಮ್ಮ ಸಮಸ್ಯೆ, ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕಾಗಿ ಬರುವ ಜನ ಸಾಮಾನ್ಯರಿಗೆ ನಿರಾಸೆ ಉಂಟಾಗುತ್ತಿದೆ.

ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಬೆಳೆಗಳಿಗೆ ಸೂಕ್ತ ನೀರು ಪೂರೈಕೆ ಮಾಡದೆ ಕಬ್ಬು ಬೆಳೆ ಒಣಗುತ್ತಿವೆ. ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಜತೆಗೆ ಸರಕಾರದಿಂದ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನವೂ ಸಹ ಲಭ್ಯವಾಗದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಶಾಸಕರು ಪತ್ನಿ ಆರೋಗ್ಯ ಸಮಸ್ಯೆ ನಿವಾರಣೆಗೆ ಪದೇ ಪದೇ ಅಮೆರಿಕಕ್ಕೆ ತೆರಳುವ ಬದಲು ಕುಟುಂಬವನ್ನೇ ಭಾರತಕ್ಕೆ ಕರೆತಂದು ಚಿಕಿತ್ಸೆ ಕೊಡಿಸಬಹುದಲ್ಲವೇ. ಶಾಸಕರು ವಿದೇಶಕ್ಕೆ ತೆರಳಿದಾಗ ಅಧಿಕಾರಿಗಳದ್ದೇ ಕಾರುಬಾರಾಗುತ್ತಿದೆ. ಯಾರು ಹೇಳೋರು ಕೇಳೋರು ಇಲ್ಲದಂತಾಗುತ್ತಿದೆ. ಇನ್ನಾದರೂ ಶಾಸಕರು ಕ್ಷೇತ್ರದಲ್ಲಿಯೇ ಇದ್ದು ತಮ್ಮ ಜವಾಬ್ದಾರಿ ಅರಿತು ಅಭಿವೃದ್ಧಿ ಕೆಲಸ ಮಾಡಬೇಕು ಎನ್ನುವುದು ಕ್ಷೇತ್ರದ ಜನರ ಒತ್ತಾಯವಾಗಿದೆ.

--------------

‘ಶಾಸಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪದೇಪದೇ ಅಮೆರಿಕಕ್ಕೆ ತೆರಳಿದರೆ ಕ್ಷೇತ್ರದ ಜನಸಾಮಾನ್ಯರ ಕುಂದು ಕೊರತೆ ಆಲಿಸುವವರು ಯಾರು. ರೈತರು ನೀರಿಲ್ಲದೆ ತೊಂದರೆ ಎದುರಿಸುತ್ತಿದ್ದಾರೆ. ಅಣೆಕಟ್ಟೆಯಲ್ಲಿ ನೀರಿದ್ದರೂ ನಾಲೆಗೆ ನೀರು ಹರಿಸುವುದಕ್ಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಕಬ್ಬು ಒಣಗುತ್ತಿದೆ. ಬೆಳೆದ ಭತ್ತಕ್ಕೆ ಬೆಲೆ ದೊರೆಯುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಕ್ಷೇತ್ರ ಬಿಟ್ಟು ಹೋದರೆ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ.’

ಸುನೀಲ್, ಹಿರೇಮರಳಿ ಗ್ರಾಮ, ಪಾಂಡವಪುರ ತಾಲೂಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ