ಶಿರಸಿ: ಸಂಗೀತ ಕ್ಷೇತ್ರದಲ್ಲಿ ಪ್ರತಿಯೊಂದು ಸಾಹಿತ್ಯಗಳು ಬಳಕೆಯಾಗಲ್ಪಡುತ್ತಿದ್ದು, ಮುಖ್ಯವಾಗಿ ದಾಸ ಸಾಹಿತ್ಯಗಳು ಹೆಚ್ಚು ಬಳಕೆಯಾಗಿದೆ. ಅಷ್ಟೇ ಮಹತ್ವವನ್ನು ದಾಸ ಸಾಹಿತ್ಯ ಹೊಂದಿದೆ. ಈ ಸಾಹಿತ್ಯವು ಭಕ್ತಿ ಪ್ರಧಾನವಾಗಿ ಸಂಗೀತದ ಮೂಲಕ ತನ್ನತ್ತ ಸೆಳೆಯುವ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಹಿರಿಯ ಪತ್ರಿಕಾ ವಿತರಕ, ಅಂಕಣಕಾರ ರಾಘವೇಂದ್ರ ಆನವಟ್ಟಿ ಹೇಳಿದರು.
ನಗರದ ಟಿಎಂಎಸ್ ಸಭಾಭವನದಲ್ಲಿ ಎರಡು ದಿನಗಳು ನಡೆದ ಸ್ಥಳೀಯ ಜನನಿ ಮ್ಯೂಸಿಕ್ ಸಂಸ್ಥೆಯ ಪ್ರಥಮ ಸ್ವರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ವೈದ್ಯ ಡಾ. ಮುಕುಂದ ಪಟವರ್ಧನ ಮಾತನಾಡಿ, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಂಗೀತಕ್ಕೆ ಹೆಚ್ಚಿನ ಗೌರವ, ಸ್ಥಾನಮಾನವಿದೆ. ವೈಜ್ಞಾನಿಕವಾಗಿ ಅದು ದೃಢೀಕರಿಸಲ್ಪಟ್ಟಿದೆ. ಕೆಲವೊಂದು ವ್ಯಕ್ತಿಗತವಾದ ಮಾನಸಿಕ ರೋಗಳನ್ನು ಸಂಗೀತಾಭ್ಯಾಸ ಹಾಗೂ ಆಲಿಕೆಗಳಿಂದ ಗುಣಪಡಿಸಬಹುದಾದ ಶಕ್ತಿ ಹೊಂದಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಸಾಧನೆಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದರು.ಶಿರಸಿ ಎಂಇಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಟಿ.ಎಸ್. ಹಳೇಮನೆ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ರಾಜ್ಯ ಘಟಕದ ಉಪಾಧ್ಯಕ್ಷೆ ಜ್ಯೋತಿ ಪಾಟೀಲ್ ಮಾತನಾಡಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸಂಸ್ಥೆಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ನಿರಂತರವಾಗಿ ಗಾಯನ ನಡೆಯಿತು. ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ, ನಾಗೇಂದ್ರ ವೈದ್ಯ ಹೆಗ್ಗಾರ ಮತ್ತು ಹಾರ್ಮೋನಿಯಂನಲ್ಲಿ ವಿದುಷಿ ರೇಖಾ ದಿನೇಶ, ಉನ್ನತಿ ಕಾಮತ್ ಸಹಕರಿಸಿದರು.ಮೊದಲ ದಿನದ ಮುಕ್ತಾಯದ ಹಂತದಲ್ಲಿ ವಿದುಷಿ ರೇಖಾ ದಿನೇಶ ಸಂಗೀತ ಕಛೇರಿ ನೀಡಿದರು. ತಬಲಾದಲ್ಲಿ ಧಾರವಾಡದ ಶ್ರೀಧರ ಮಾಂಡ್ರೆ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ಪಕ್ವಾಜ್‌ನಲ್ಲಿ ನಾಗೇಂದ್ರ ವೈದ್ಯ, ತಾಳದಲ್ಲಿ ಕಿರಣ ಕಾನಗೋಡ, ತಾನ್ಪುರದಲ್ಲಿ ಮಹಿಮಾ ಗಾಯತ್ರಿ, ಪೃಥ್ವಿ ಬೊಮ್ನಳ್ಳಿ ಸಾಥ್ ನೀಡಿದರು. ಜನನಿ ಸಂಸ್ಥೆಯ ದಿನೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಮನಾ ಹೆಗಡೆ ವಂದಿಸಿದರು.