ಸಾರ್ಥಕ ಬದುಕಿನ ಸೂತ್ರ ತಿಳಿಸಿದ ದಾಸ ಶ್ರೇಷ್ಠರು: ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ

KannadaprabhaNewsNetwork |  
Published : Jan 16, 2026, 12:45 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಡಾ. ಪಾಟೀಲ ಪುಟ್ಟಪ್ಪನವರ 106ನೇ  ಜನ್ಮದಿನಾಚರಣೆ ಹಾಗೂ 2026 ಕನ್ನಡ ಅಂಕಿಗಳ ದಿನದರ್ಶಿಕೆ ಬಿಡುಗಡೆ. | Kannada Prabha

ಸಾರಾಂಶ

ಪಂಚಾಂಗ ನಮ್ಮ ನಿತ್ಯ ಅವಶ್ಯಕತೆಗಳಲ್ಲೊಂದು. ಅದು ಅಂದಿನ ದಿನದ ವಿಶೇಷತೆ ತಿಳಿಸುವುದಲ್ಲದೇ ಗ್ರಹ-ನಕ್ಷತ್ರಗಳ ಸ್ಥಾನ ಆಧಾರದ ಮೇಲೆ ಮುಹೂರ್ತಗಳನ್ನು ಕರಾರುವಕ್ಕಾಗಿ ತಿಳಿಸುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಧಾರವಾಡ:

ಸದ್ವಿಚಾರ, ಸದಾಚಾರಗಳಿಗೆ ಎಂದೂ ಸಾವಿಲ್ಲ. ಸತ್ಯ ನುಡಿಯುವುದು, ಹಸಿದವರಿಗೆ ಅನ್ನ ನೀಡುವಂತಹ ಪುಣ್ಯದ ಕಾರ್ಯ ಮತ್ತೊಂದಿಲ್ಲ. ಧರ್ಮ ಯಾವುದಾದರೇನು ಅದರಲ್ಲಿಯ ಉತ್ತಮ ಅಂಶ ಅನುಸರಿಸಿದರೆ ತಪ್ಪೇನಿಲ್ಲ. ಬಸವಾದಿ ಶರಣರು, ದಾಸ ಶ್ರೇಷ್ಠರೂ ಸಹ ಸಾರ್ಥಕ ಬದುಕಿನ ಸೂತ್ರ ತಿಳಿಸಿದ್ದಾರೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಡಾ. ಪಾಟೀಲ ಪುಟ್ಟಪ್ಪನವರ 106ನೇ ಜನ್ಮದಿನಾಚರಣೆ ಹಾಗೂ 2026 ಕನ್ನಡ ಅಂಕಿಗಳ ದಿನದರ್ಶಿಕೆ ಬಿಡುಗಡೆಯಲ್ಲಿ ಮಾತನಾಡಿದ ಅವರು, ಪಂಚಾಂಗ ನಮ್ಮ ನಿತ್ಯ ಅವಶ್ಯಕತೆಗಳಲ್ಲೊಂದು. ಅದು ಅಂದಿನ ದಿನದ ವಿಶೇಷತೆ ತಿಳಿಸುವುದಲ್ಲದೇ ಗ್ರಹ-ನಕ್ಷತ್ರಗಳ ಸ್ಥಾನ ಆಧಾರದ ಮೇಲೆ ಮುಹೂರ್ತಗಳನ್ನು ಕರಾರುವಕ್ಕಾಗಿ ತಿಳಿಸುತ್ತದೆ. ಒಳ್ಳೆಯ ಕೆಲಸ ಮಾಡಲು ಯಾವುದೇ ಮುಹೂರ್ತದ ಅವಶ್ಯಕತೆ ಇಲ್ಲ. ಪಂಚಾಂಗ ಓದುವುದು ಕೇವಲ ಜ್ಯೋತಿಷಿಗಳಿಗೆ, ಪುರೋಹಿತರಿಗೆ ಸೀಮಿತವಲ್ಲ, ಎಲ್ಲರೂ ಅಧ್ಯಯನ ಮಾಡಬಹುದು ಎಂದರು.

ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಆಧರಿಸಿ ಶುಭಮುಹೂರ್ತ, ಖಗೋಳದ ಘಟನೆ ತಿಳಿಯಲು ಬಳಸಲಾಗುತ್ತದೆ. ರೈತರಿಗೆ ಯಾವ ಸಮಯದಲ್ಲಿ ಬಿತ್ತಿದರೆ ಒಳ್ಳೆಯ ಫಲ ಎಂಬುದನ್ನು ತಿಳಿಸುತ್ತದೆ. ಕಂಪ್ಯೂಟರ್, ಮೊಬೈಲ್ ಇಲ್ಲದ ಕಾಲದಲ್ಲಿಯೇ ಹವಾಮಾನ ವೈಪರಿತ್ಯ, ಮಳೆ, ಬೆಳೆ ಕುರಿತಂತೆ ಅಂದೇ ಕರಾರುವಕ್ಕಾಗಿ ಹೇಳುತ್ತಿದ್ದರು ಎಂದು ಹೇಳಿದರು.

ದುರ್ದೈವ ಎಂದರೆ ಈಗಿನ ವಿದ್ಯಾರ್ಥಿಗಳಿಗೆ ಋತುಮಾನ, ನಕ್ಷತ್ರ, ಮಾಸದ ಪರಿಕಲ್ಪನೆ ಇಲ್ಲ. ಪಂಚಾಂಗದಲ್ಲಿ ಜ್ಞಾನ, ವಿಜ್ಞಾನ, ಗಣಿತ ಲೆಕ್ಕಾಚಾರವಿದೆ. ನಮಗೆ ಪ್ರತಿನಿಮಿಷವೂ ಅಮೂಲ್ಯ. ಅದು ಕಳೆದು ಹೋದರೆ ಮತ್ತೆ ಸಿಗುವುದಿಲ್ಲ. ಅದಕ್ಕಾಗಿ ನಾವು ಸಮಯಕ್ಕೆ ಬಹಳ ಪ್ರಾಧಾನ್ಯತೆ ಕೊಡಬೇಕು. ಜ್ಞಾನ ಸಂಪಾದನೆ ಯಾವ ಮೂಲದಿಂದ ಇದ್ದರೂ ಸ್ವೀಕರಿಸಬೇಕು. ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಕನ್ನಡ ದೀಕ್ಷೆಯೊಂದಿಗೆ ಉದಯವಾದ ಕರ್ನಾಟಕ ವಿದ್ಯಾವರ್ಧಕ ಸಂಘವು 136 ವರ್ಷಗಳಿಂದ ಕನ್ನಡದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಅಂಕಿಗಳ ಬಳಕೆ ಅಭಾವ ಇರುವ ಈ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಕನ್ನಡ ಅಂಕಿಗಳನ್ನು ಪರಿಚಯಿಸಲು ಸಂಘ ಇಂತಹ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ
ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ