ಗಾಂಧಿ ವಿಚಾರಧಾರೆಗಳೇ ಸೇವಾ ಕಾರ್ಯ ಮಾಡಲು ಪ್ರೇರಣೆ: ನಾಡೋಜ ವುಡೇ ಪಿ.ಕೃಷ್ಣ

KannadaprabhaNewsNetwork |  
Published : Jan 16, 2026, 12:30 AM IST
15ಕೆಎಂಎನ್ ಡಿ13 | Kannada Prabha

ಸಾರಾಂಶ

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯಬೇಕಾದರೆ ಜನತೆಗೆ ನಿಕಟವಾಗಿರುವ ಸೇವೆ ಹಮ್ಮಿಕೊಳ್ಳಬೇಕು. ಸಾಮಾಜಿಕ ಕಳಕಳಿಯೊಂದಿಗೆ ಮಂಗಲ ಎಂ.ಯೋಗೀಶ್ ಮತ್ತು ಅರುಣಕುಮಾರಿ ದಂಪತಿ 6 ವರ್ಷ ಸತತವಾಗಿ ದಾಸೋಹ ಸೇವೆ ಸಲ್ಲಿಸಿರುವುದು ಇತರರಿಗೆ ಮಾದರಿ ಎನಿಸುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿಸ್ವಾರ್ಥತೆಯಿಂದ ಸಲ್ಲಿಸುವ ಸೇವೆಯು ಇತರರಿಗೆ ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ವಿಚಾರಧಾರೆಗಳು ಇಂತಹ ಸೇವಾ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವುಡೇ ಪಿ.ಕೃಷ್ಣ ಮಮತೆಯ ಮಡಿಲು ಅನ್ನದಾಸೋಹ ಕಾರ್ಯವನ್ನು ಶ್ಲಾಘಿಸಿದರು.

ನಗರದ ಮಿಮ್ಸ್‌ನ ಹೆರಿಗೆ ಆಸ್ಪತ್ರೆ ಬಳಿ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಅಂಗಳದಲ್ಲಿ 6 ವರ್ಷ ಪೂರೈಸಿ 7ನೇ ವರ್ಷಕ್ಕೆ ಕಾಲಿಟ್ಟ ದಾಸೋಹ ಕಾಯಕಕ್ಕೆ ಸಂಕ್ರಾಂತಿ ಹಬ್ಬದಂದು ಪರಿಸರ ಸ್ನೇಹಿ ಎಳ್ಳು ಬೆಲ್ಲ ನೀಡುವ ಚಾಲನೆ ನೀಡಿ ಮಾತನಾಡಿದರು.

ಗಾಂಧೀಜಿ ಆಶಯಗಳಿಗೆ ಪೂರಕವಾಗಿ ಜನರ ಶ್ರಮ ಜೀವನವನ್ನು ಅರ್ಥೈಸಿಕೊಂಡು ಮಿಮ್ಸ್‌ನ ಅಂಗಳಕ್ಕೆ ಬರುವ ಮಂದಿಗೆ ದಾಸೋಹ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯಬೇಕಾದರೆ ಜನತೆಗೆ ನಿಕಟವಾಗಿರುವ ಸೇವೆ ಹಮ್ಮಿಕೊಳ್ಳಬೇಕು. ಸಾಮಾಜಿಕ ಕಳಕಳಿಯೊಂದಿಗೆ ಮಂಗಲ ಎಂ.ಯೋಗೀಶ್ ಮತ್ತು ಅರುಣಕುಮಾರಿ ದಂಪತಿ 6 ವರ್ಷ ಸತತವಾಗಿ ದಾಸೋಹ ಸೇವೆ ಸಲ್ಲಿಸಿರುವುದು ಇತರರಿಗೆ ಮಾದರಿ ಎನಿಸುತ್ತದೆ ಎಂದರು.

ಮಿಮ್ಸ್‌ನ ಅಂಗಳಕ್ಕೆ ಬರುವ ಅಸಂಘಟಿತ ಮಂದಿಗೆ ಸಾಂತ್ವನ ಹೇಳುವ ರೀತಿಯಲ್ಲಿ ದಾಸೋಹ ಸಿಗುತ್ತಿರುವುದು ನಿಜಕ್ಕೂ ಮಮತೆ ತೋರುತ್ತಿರುವ ಮಡಿಲಾಗಿದೆ. ಸೇವೆ ಮತ್ತು ನಿಸ್ವಾರ್ಥ ಮನೋಭಾವ ಸಮಾಜದ ಇತರರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಕಾಯಕಕ್ಕೆ ನೆರವಾಗುತ್ತಿರುವ ಎಲ್ಲಾ ಜನರಿಗೂ ಅಭಿನಂದನೆ ಸಲ್ಲಿಸಿದರು.

ಗಾಂಜಿಯವರ ಪ್ರಕಾರ ಉಪಯೋಗಕ್ಕೆ ಬೇಕಾಗಿರುವ ಹಣ, ಆಸ್ತಿ ಹೆಚ್ಚಾದರೆ ಅದಕ್ಕೆ ಧರ್ಮದರ್ಶಿಗಳೇ ಹೊರತು ಮಾಲೀಕರಾಗಬಾರದು. ಆ ನಿಟ್ಟಿನಲ್ಲಿ ಧರ್ಮದರ್ಶಿಗಳು ಸ್ನೇಹಮಯ ವಾತಾವರಣ ನಿರ್ಮಾಣ ಮಾಡಲು ಆಸ್ಪತ್ರೆ ಅಂಗಳದಲ್ಲಿ ದಾಸೋಹ ಕಾರ್ಯಕ್ಕೆ ನೆರವಾಗುತ್ತಿರುವುದು ಸಂತಸ ತಂದಿದೆ ಎಂದರು.

ಗಾಂ ವಿಚಾರಧಾರೆಗಳು ಇಂತಹ ಸೇವಾ ಕಾರ್‍ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ವಿದ್ಯಾರ್ಥಿ ಯುವಜನರ ದೆಸೆಯಲ್ಲಿಯೇ ಸೇವಾ ಕಾರ್‍ಯಗಳಿಗೆ ಪ್ರಭಾವಿತರಾಗಿ ದಾಸೋಹ, ಪರಿಸರ, ಆರೋಗ್ಯ ಜನತೆಯ ಅಭ್ಯುದಯಕ್ಕಾಗಿ ಕರ್ತವ್ಯ ನಿರ್ವಹಿಸುವುದು ಉತ್ತಮ ಬೆಳವಣಿಗೆಯ ಧ್ಯೋತಕವಾಗಿದೆ ಎಂದರು.

ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆಗೆ ಮಮತೆಯ ಮಡಿಲು ತುಂಬಾ ಪೂರಕ ವಾತಾವರಣವನ್ನು ನಿರ್ಮಿಸಿದೆ. ಉತ್ತಮ ಆಹಾರ ನೀಡುವ ಮೂಲಕ ಜನರ ಮೆಚ್ಚುಗೆ ಗಳಿಸಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಮಿಮ್ಸ್ ನಿರ್ದೇಶಕ ಮತ್ತು ಡೀನ್ ಡಾ.ನರಸಿಂಹಸ್ವಾಮಿ ಮಾತನಾಡಿ, ಮಮತೆಯ ಮಡಿಲು ಅತ್ಯಂತ ಪಾರದರ್ಶಕವಾಗಿ ಬದ್ಧತೆಯಿಂದ ದಾಸೋಹ ಕಾಯಕ ನಿರ್ವಹಿಸುತ್ತಿರುವುದರಿಂದ ಜನರ ನೆರವು ಮತ್ತು ಪ್ರೀತಿ ಹೆಚ್ಚಳವಾಗಿದೆ ಎಂದರು.

ಯಾರು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಾರೋ ಅವರಿಗೆ ಜನರೇ ಎಲ್ಲವನ್ನೂ ನೀಡುತ್ತಾರೆ ಎಂದರು.

ಮಮತೆಯ ಮಡಿಲು ಮುಖ್ಯಸ್ಥ ಮಂಗಲ ಎಂ.ಯೋಗೀಶ್ ಮಾತನಾಡಿ, ಹಿರಿಯರ ಆದರ್ಶಗಳನ್ನು ನೆನೆದು ಮಿಮ್ಸ್ ಸ್ತ್ರೀ ರೋಗ ಮತ್ತು ಹೆರಿಗೆ ವಿಭಾಗದ ಅಂಗಳದಲ್ಲಿ ಜನರ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ದಾಸೋಹ ನೆರವೇರಿಸಿಕೊಂಡು ಬರಲಾಗುತ್ತಿದೆ. ಇದರ ಯಶಸ್ಸಿನಲ್ಲಿ ಮಿಮ್ಸ್ ಅಧಿಕಾರಿ ವೃಂದ, ಸ್ಥಳೀಯ ಜನಪ್ರತಿನಿಗಳು ಮತ್ತು ಭಾಗಿದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಪರಿಸರ ಸಂಸ್ಥೆ ಕಾರ್‍ಯದರ್ಶಿ ಅರುಣಕುಮಾರಿ, ಸಂಚಾಲಕರಾದ ಬಸವರಾಜ್ ಸಂತೆಕಸಲಗೆರೆ, ಶ್ರೀನಾಥ್, ವಿದ್ಯಾಶ್ರೀ, ನಂದಿನಿ, ಚಿತ್ರಕೂಟ ಸಂಸ್ಥೆ ಅರವಿಂದ್ ಪ್ರಭು ಇತರರು ಉಪಸ್ಥಿತರಿದ್ದರು.

ಸಂಕ್ರಾತಿ ಹಬ್ಬದ ನಿಮಿತ್ತ ಪ್ಲಾಸ್ಟಿಕ್‌ ಮುಕ್ತ ಸಮಾಜವನ್ನಾಗಿಸಲು ಮಣ್ಣಿನ ಚಿತ್ತಾರದ ಮೆರಗಿನಿಂದ ಕೂಡಿರುವ ಮಣ್ಣಿನ ಕುಡಿಕೆಯಲ್ಲಿ ಎಳ್ಳು ಬೆಲ್ಲ ಸಿಹಿ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ
ಪೋಕ್ಸೋ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ