ದಲಿತರಿಗೆ ರಕ್ಷಣೆ ನೀಡುವಂತೆ ದಸಂಸ ಸದಸ್ಯರ ಪ್ರತಿಭಟನೆ

KannadaprabhaNewsNetwork |  
Published : Jun 06, 2025, 12:07 AM IST
5ಕೆಎಂಎನ್ ಡಿ27 | Kannada Prabha

ಸಾರಾಂಶ

ದಲಿತರು, ರೈತರ ಭೂಸಾಗುವಳಿ ಸೇರಿದಂತೆ ತಮ್ಮ ಜಮೀನುಗಳಲ್ಲಿ ಬೆಳೆದ ಕೃಷಿ ಉತ್ಪನ್ನ ಸಾಗಿಸಲು ಸಮರ್ಪಕ ಬಂಡಿದಾರಿ ಬಿಡದೆ ಸರ್ಕಾರದ ಸಿಡಿಎಸ್ ನಾಲೆ ಖರಾಬ್ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ಆಡಳಿತದಿಂದ ದಲಿತರಿಗೆ ನ್ಯಾಯ ಮತ್ತು ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ಸೇರಿದ ಪ್ರತಿಭಟನಾಕಾರರು, ಮುಖ್ಯ ರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತರು, ರೈತರ ಭೂಸಾಗುವಳಿ ಸೇರಿದಂತೆ ತಮ್ಮ ಜಮೀನುಗಳಲ್ಲಿ ಬೆಳೆದ ಕೃಷಿ ಉತ್ಪನ್ನ ಸಾಗಿಸಲು ಸಮರ್ಪಕ ಬಂಡಿದಾರಿ ಬಿಡದೆ ಸರ್ಕಾರದ ಸಿಡಿಎಸ್ ನಾಲೆ ಖರಾಬ್ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸದೆ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರತ್ಯೇಕ ಎರಡು ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡಿ ಸಂತ್ರಸರಿಗೆ ನ್ಯಾಯ, ರಕ್ಷಣೆ ನೀಡಲು ತಾಲೂಕು ಆಡಳಿತ ಕರ್ತವ್ಯ ಲೋಪ ಎಸಗಿದೆ ಎಂದು ಆರೋಪಿಸಿದರು.

ಜನ ಸಾಮಾನ್ಯರು ಹಾಗೂ ದಲಿತರು ಪ್ರತಿ ಇಲಾಖೆಯಲ್ಲೂ ಸಣ್ಣ ಪರಿಹಾರಕ್ಕೂ ಲಂಚ ನೀಡುವ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

ತಾಲೂಕಿನ ಚಿನ್ನೇನಹಳ್ಳಿಯಲ್ಲಿ 30 ಎಕರೆ ಸಿಡಿಎಸ್ ನಾಲಾ ಖರಾಬ್ ಭೂಮಿಯನ್ನು ಚನ್ನವೀರಣ್ಣಾರಾಧ್ಯ, ವೇದಮೂರ್ತಿ, ರೇವಣ್ಣಾರಾಧ್ಯ ಇತರರು ಅಕ್ರಮ ಒತ್ತುವರಿ ಮಾಡಿದ್ದು, ಕೂಡಲೇ ತೆರವುಗೊಳಿಸಿ ಭೂಮಿ ರಕ್ಷಿಸಬೇಕು. ಸಮರ್ಪಕ ಬಂಡಿ ದಾರಿ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ದಲಿತ ಮಹಿಳೆ ಮಹದೇವಮ್ಮರ ಮನೆ ಮಳೆಯಿಂದ ಹಾನಿಗೊಂಡಿದೆ. ಪುನರ್ ನಿರ್ಮಿಸಲು ವಿನಃ ಕಾರಣ ಅಡ್ಡಿ ಪಡಿಸುತ್ತಿರುವವರ ಮೇಲೆ ಕಾನೂನು ಕ್ರಮ ವಹಿಸಿ ಸೂಕ್ತ ರಕ್ಷಣೆ ನೀಡಬೇಕು. ಲಂಚಾವತಾರಕ್ಕೆ ಕಡಿವಾಣ ಹಾಕುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಸಂಸ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷರಾದ ಬಿ. ಆನಂದ್, ಸುಶ್ಮಿತಾ ಆನಂದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೈ. ಸುರೇಶ್‌ಕುಮಾರ್, ತಾಲೂಕು ಅಧ್ಯಕ್ಷ ಕರಿಯಪ್ಪ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ