ದಸರಾ ಆಚರಣೆ ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಮಧು ಜಿ.ಮಾದೇಗೌಡ

KannadaprabhaNewsNetwork |  
Published : Oct 17, 2026, 01:45 AM IST
14ಕೆಎಂಎನ್ ಡಿ21  | Kannada Prabha

ಸಾರಾಂಶ

ಭಾರತೀಯ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅವು ನಮ್ಮ ಸಂಸ್ಕೃತಿ, ಸಂಪ್ರದಾಯ, ಕುಟುಂಬದ ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಪ್ರತಿಬಿಂಬಿಸುತ್ತವೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳು ನಮ್ಮ ಸಾಂಪ್ರದಾಯಿಕ ಆಚರಣೆಗಳಿಂದ ದೂರವಾಗದಂತೆ ನೋಡಿಕೊಳ್ಳುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀಯ ಇತಿಹಾಸದಲ್ಲೇ ದಸರಾ ಆಚರಣೆಗೆ ವಿಶೇಷ ಸ್ಥಾನವಿದೆ. ನವದುರ್ಗೆಯರ ಆರಾಧನೆಯೊಂದಿಗೆ ಗೊಂಬೆಗಳ ಪ್ರದರ್ಶನವೂ ನಮ್ಮ ಧಾರ್ಮಿಕ ಪರಂಪರೆ, ಆಚಾರ- ವಿಚಾರ ಹಾಗೂ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆ ಚೇರ್ಮನ್ ಮಧು ಜಿ.ಮಾದೇಗೌಡ ತಿಳಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದ ಆವರಣದಲ್ಲಿ ಆಯೋಜಿಸಿದ್ದ ದಸರಾ ಗೊಂಬೆಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ- ವಿಚಾರಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ಹಬ್ಬಗಳ ಆಚರಣೆ ಹಿಂದಿರುವ ಉದ್ದೇಶ ಮತ್ತು ಅವುಗಳ ಮಹತ್ವವನ್ನು ತಂದೆ- ತಾಯಂದಿರು ಹಾಗೂ ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿ, ಶ್ರೀಮಂತಿಕೆ ಮತ್ತು ಹಬ್ಬಗಳ ವೈಶಿಷ್ಟ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಹಬ್ಬಗಳ ಆಚರಣೆ ಹಾಗೂ ಅವುಗಳ ಮಹತ್ವದ ಕುರಿತು ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಹೊರತರಲು ಉದ್ದೇಶಿಸಲಾಗಿದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಒಟ್ಟಾಗಿ ಪೌರಾಣಿಕ ಕಥೆಗಳು, ಐತಿಹಾಸಿಕ ಘಟನೆಗಳು ಮತ್ತು ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಬಿಂಬಿಸುವ ದಸರಾ ಹಬ್ಬದಂದು ನೂರಾರು ಗೊಂಬೆಗಳನ್ನು ಸಂಪ್ರದಾಯ, ಮೆಟ್ಟಿಲುಗಳ ಹಂತದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.

ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಕ್ರಿಯವಾಗಿ ಪಾಲ್ಗೊಂಡು ಯುವಪೀಳಿಗೆಗೆ ನಮ್ಮ ಸಂಪ್ರದಾಯ, ಪೌರಾಣಿಕ ಹಿನ್ನೆಲೆ ಹಾಗೂ ಸಾಂಸ್ಕೃತಿಕ ಪರಂಪರೆ ಪರಿಚಯ ಮಾಡಿಕೊಡುವ ಜತೆಗೆ ಭಾರತೀಯ ಪರಂಪರೆ ಬಗ್ಗೆ ಗೌರವ ಬೆಳೆಸಲು ಇದು ಸಹಕಾರಿಯಾಗುತ್ತವೆ ಎಂದರು.

ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನಿತಾ ಬಸವರಾಜು ಮಾತನಾಡಿ, ಭಾರತೀಯ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅವು ನಮ್ಮ ಸಂಸ್ಕೃತಿ, ಸಂಪ್ರದಾಯ, ಕುಟುಂಬದ ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಪ್ರತಿಬಿಂಬಿಸುತ್ತವೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳು ನಮ್ಮ ಸಾಂಪ್ರದಾಯಿಕ ಆಚರಣೆಗಳಿಂದ ದೂರವಾಗದಂತೆ ನೋಡಿಕೊಳ್ಳುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾರತೀ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಗೀತಾಕುಮಾರಿ, ಪ್ರಾಂಶುಪಾಲ ಎಂ.ಎಸ್. ಮಹದೇವಸ್ವಾಮಿ, ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ. ಎಸ್.ಎನ್. ನಾಗರಾಜು, ಭಾರತೀ ಹೆಲ್ತ್ ಸೈನ್ಸಸ್ ನಿರ್ದೇಶಕ ತಮಿಜ್ ಮಣಿ,ಜಿ.ಕೃಷ್ಣ, ಬಾಲಸುಬ್ರಹ್ಮಣ್ಯಂ,ಜಿ.ಬಿ. ಪಲ್ಲವಿ, ಕಾರ್ಯಕ್ರಮದ ಸಂಚಾಲಕಿ ಮಮತಾ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು