ವಸುಂಧರೆ ಕ್ರಿಯೇಷನ್ಸ್ ನಿರ್ಮಾಣ । ನಟ ಧರ್ಮ ನಾಯಕ
ಕನ್ನಡಪ್ರಭ ವಾರ್ತೆ ಶಿವಮೊಗ್ಗವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿರುವ ’ದಾಸರಹಳ್ಳಿ’ ಚಿತ್ರದ ಏ.25 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ ಎಂದು ಚಿತ್ರದ ನಿರ್ಮಾಪಕ ಪಿ.ಉಮೇಶ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದಾಸರಹಳ್ಳಿ ಎನ್ನುವ ಒಂದು ಬಡಾವಣೆಯಲ್ಲಿ ನಡೆಯುವ ಕಥೆಯೇ ’ದಾಸರಹಳ್ಳಿ’ಚಿತ್ರದ ಕಥೆ. ಇಲ್ಲಿ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಅಂಶಗಳಿವೆ. ಪ್ರೀತಿ, ಪ್ರೇಮ, ಕೌಟುಂಬಿಕ ಭಾವನೆಗಳ ಜತೆಗೆ ಯುವ ಜನರಿಗೆ ಇಷ್ಟವಾಗುವಂತಹ ಸಾಹಸ, ಹಾಡು ಇವೆ. ಬೆಂಗಳೂರು ಸೇರಿದಂತೆ ಶಿವಮೊಗ್ಗದ ಅರಕೆರೆ, ಗಾಜನೂರು, ಗಾಜನೂರು ಡ್ಯಾಂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ನಿರ್ಮಾಣದಲ್ಲಿ ನನಗೆ ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶ್ರೀನಾಥ್ ಅವರು ಕೂಡ ನಿರ್ಮಾಪಕರಾಗಿ ಬೆಂಬಲ ನೀಡಿದ್ದಾರೆ. ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದಿದ್ದೇವೆ ಎಂದು ಹೇಳಿದರು.ಮೊದಲಿನಿಂದಲೂ ಸಿನಿಮಾವು ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು.ಮೊದಲು ನಟನಾಗಿ ಒಂದು ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆನಂತರ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವ ಉದ್ದೇಶದೊಂದಿಗೆ ದಾಸರಹಳ್ಳಿ ಚಿತ್ರವನ್ನು ಎಂ.ಆರ್.ಸೀನು ನಿರ್ದೇಶನದಲ್ಲಿ ನಿರ್ಮಾಣ ಮಾಡಿದ್ದೇನೆ. ಹಿರಿಯ ನಟ ಕೀರ್ತಿರಾಜ್ ಪುತ್ರ ಧರ್ಮ ಕೀರ್ತಿರಾಜ್ ನಾಯಕನಾಗಿ, ನೇಹಾ ನಾಯಕಿಯಾಗಿ ನಟಿಸಿದ್ದಾರೆ. ನೂರಕ್ಕೂ ಹೆಚ್ಚು ಕಲವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಕೌರವ ವೆಂಕಟೇಶ್, ಥ್ರಿಲ್ಲರ್ ಮಂಜು ಹಾಗೂ ಜಾಗ್ವಾರ್ ಸಣ್ಣಪ್ಪ ಅವರು ಸಾಹಸ ನಿರ್ದೇಶನ ಜತೆಗೆ ಚಿತ್ರದಲ್ಲಿನ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆಂದು ತಿಳಿಸಿದರು.
ಏ.25ರಂದು ಚಿತ್ರವು ಶಿವಮೊಗ್ಗ ಮಲ್ಲಿಕಾರ್ಜುನ ಮತ್ತು ಮಂಜುನಾಥ್ ಹಾಗೂ ಭಾರತ್ ಸಿನಿಮಾಸ್ ಸೇರಿದಂತೆ ರಾಜ್ಯಾದ್ಯಂತ ೪೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಲಿಖಿತ್ ಫಿಲ್ಮಂಸ್ ಚಿತ್ರನ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರ ಗೆದ್ದರೆ ಶಿವಮೊಗ್ಗದ ಜನರು ಗೆದ್ದಂತೆ. ಈ ಚಿತ್ರದ ಗೆಲುವಿನ ಮೂಲಕ ಮುಂದೆ ಶಿವಮೊಗ್ಗದ ಕಲಾವಿದರನ್ನೇ ಹಾಕಿಕೊಂಡು ಒಂದು ಅದ್ದೂರಿ ಸಿನಿಮಾ ಮಾಡಲಿದ್ದೇನೆ ಎಂದರು.ಚಿತ್ರದ ಸಹ ನಿರ್ಮಾಪಕರೂ ಆದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶ್ರೀನಾಥ್, ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್, ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಹರ್ಷ ಭೋವಿ, ಕನ್ನಡ ಸಂಘಟನೆಗಳ ಮುಖಂಡರಾದ ಶಶಿ, ಸತೀಶ್ ಗೌಡ, ಪ್ರವೀಣ್, ಮಂಜುನಾಥ್ ಸೋಮಿನಕೊಪ್ಪ ಇದ್ದರು.