ಕಾಲುವೆಯಲ್ಲಿ ಭದ್ರೆ ತೋರಿಸಿ ಹಸಿರು ಕನಸುಗಳಿಗೆ ಕೊಳ್ಳಿ

KannadaprabhaNewsNetwork |  
Published : Sep 11, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  ಸಂಭ್ರಮ-ಸಂಕಟ-ಭಾಗ-3 | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆ ಹನಿ ನೀರಾವರಿ ಅಳವಡಿಕೆ ರೂಟ್ ಮ್ಯಾಪ್.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಗೋನೂರು ಕೆರೆಗೆ ಭದ್ರೆ ಹರಿದು ಬಂದಿದ್ದಾಳೆ. ಕಾಲುವೆಯುದ್ದಕ್ಕೂ ಜನ ಭದ್ರೆ ಕಂಡು ಪುಳಕಿತರಾಗಿದ್ದಾರೆ. ಕಾಲುವೆಗೆ ಬಾಗೀನ ಬಿಟ್ಟು ಧನ್ಯತೆ ಪ್ರದರ್ಶಿಸಿದ್ದಾರೆ. ಊರುಗಳಲ್ಲಿ ಸ್ವಾಗತ ಮಾಡಿ ಮೈಮೇಲೆ ನೀರೆರೆಚಿಕೊಂಡು ಭಾವನಾತ್ಮಕತೆ ಮೆರೆದಿದ್ದಾರೆ. ಸಾಲದೆಂಬಂತೆ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಸುಮಾರು ನೂರು ಕೆರೆಗಳಿಗೆ ಗುರುವಾರದಿಂದಲೇ ನೀರು ಹರಿದು ಹೋಗುತ್ತಿದೆ. ನೀರು ಬಂದಿದ್ದಕ್ಕೆ ಕೆಲವರು ಸಂಭ್ರಮಿಸಿದ್ದಾರೆ. ಆದರೆ ಯೋಜನೆ ಹಿಂದಿನ ಸಂಕಟಗಳ ಆಳಕ್ಕೆ ಇಳಿಯುತ್ತಿಲ್ಲ. ಕಾಲುವೆಯಲ್ಲಿ ಭದ್ರೆ ತೋರಿಸಿ ಹಸಿರು ಕನಸುಗಳಿಗೆ ಕೊಳ್ಳಿ ಇಟ್ಟಿತಾ ಸರ್ಕಾರ ಎಂಬ ಅನುಮಾನಗಳು ಕಾಡಿವೆ.

ಭದ್ರಾ ಮೇಲ್ದಂಡೆ ಎಂದಾಕ್ಷಣ 2,25,515 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ, 367 ಕೆರೆಗೆ ನೀರು, ಇದಕ್ಕಾಗಿ 29.90 ಟಿಎಂಸಿ ನೀರು ಬಳಕೆ ಎಂದು ಸರಳೀಕರಣ ಗೊಳಿಸಿ ಅಂಕಿ ಅಂಶಗಳ ಹರವಿ ಸುಮ್ಮನಾಗಲಾಗುತ್ತಿದೆ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕಂಠ ಪಾಠದ ರೀತಿ ಜನತೆಗೆ ಒಪ್ಪಿಸುತ್ತಿದ್ದಾರೆ. ಗೋನೂರು ಕೆರೆಗೆ ನೀರು ತಂದಿದ್ದನ್ನೇ ಚಾರಿತ್ರಿಕ ಸನ್ನಿವೇಶ ಎಂಬಂತೆ ಬಿಂಬಿಸಲಾಗುತ್ತಿದೆ. ಯೋಜನೆ ಮೂಲ ಉದ್ದೇಶದಲ್ಲಿ ಆಗಿರುವ ಹಿನ್ನಡೆ ಬಗೆಗಿನ ಸತ್ಯಾಂಶಗಳ ಬಿಚ್ಚಿಡುತ್ತಿಲ್ಲ.

ಭದ್ರಾ ಮೇಲ್ದಂಡೆಯಡಿ ಹನಿ ನೀರಾವರಿಯೇ ಪ್ರಮುಖವಾದದ್ದು. ಯೋಜನೆಗೆ ಒಟ್ಟಾರೆ ಹಂಚಿಕೆಯಾದ 29.90 ಟಿಎಂಸಿ ನೀರಿನಲ್ಲಿ ಸಿಂಹಪಾಲು ಅಂದರೆ 21.9 ಟಿಎಂಸಿ ನೀರನ್ನು ಹನಿ ನೀರಾವರಿಗೆ ಮೀಸಲಿಡಲಾಗಿದ. ಉಳಿದಂತೆ ಕೆರೆ ತುಂಬಿಸಲು 6 ಟಿಎಂಸಿ ಹಾಗೂ ವಿವಿ ಸಾಗರ ಜಲಾಶಯಕ್ಕೆ ಎರಡು ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಇದುವರೆಗೆ ನೂರು ಕೆರೆಗಳಿಗೆ ಮಾತ್ರ ನೀರುಹರಿಯಲಿದ್ದುಇನ್ನೂ 267 ಕೆರೆಗಳು ಬಾಕಿ ಇವೆ. ಹನಿ ನೀರಾವರಿ ಕಾಮಗಾರಿ ಅನುಷ್ಠಾನದಲ್ಲಿ ತೀರಾ ಹಿಂದುಳಿಯಲಾಗಿದೆ. ಅನುದಾನದ ಕೊರತೆ ಭಾದಿಸುತ್ತಿದೆ.

ಹನಿ ನೀರಾವರಿಗಾಗಿ ಒಟ್ಟು 11,315 ಕೋಟಿ ರು. ಅಂದಾಜು ಮೊತ್ತ ನಿಗಧಿ ಪಡಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಲಿಪ್ಟ್ ಮಾಡಲು 475 ಪಂಪ್ ಹೌಸ್‌ಗಳ ಅಗತ್ಯವಿದೆ. ತರಿಕೆರೆ ಭಾಗದಲ್ಲಿ 812 ಕೋಟಿ ರು. ವೆಚ್ಚದಲ್ಲಿ 20,150 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಅಳವಡಿಸಿರುವುದ ಬಿಟ್ಟರೆ ಉಳಿದಂತೆ 10,539 ಕೋಟಿ ರು. ಮೊತ್ತದ ಡ್ರಿಪ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಬಹುಪಾಲು ಪಂಪ್ ಹೌಸ್‌ಗಳ ನಿರ್ಮಾಣ ಸಾಧ್ಯವಾಗಿಲ್ಲ.

ಚಿತ್ರದುರ್ಗ ಶಾಖಾ ಕಾಲುವೆ ಪ್ರದೇಶದಲ್ಲಿ 5164 ಕೋಟಿ ರು. ವೆಚ್ಚ ಮಾಡಿ 1,07,265 ಹೆಕ್ಟೇರ್‌, ತುಮಕೂರು ಶಾಖಾ ಕಾಲುವೆಯಲ್ಲಿ 3806 ಕೋಟಿ ರು. ವೆಚ್ಚದಲ್ಲಿ 84,900 ಹೆಕ್ಟೇರ್‌ ಹಾಗೂ 1,568 ಕೋಟಿ ರು. ವೆಚ್ಚದಲ್ಲಿ ಜಗಳೂರು ಶಾಖಾ ಕಾಲುವೆಯ 13,200 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿ ಬಾಕಿ ಉಳಿದಿದೆ. ಇವುಗಳಿಗೆ ಟೆಂಡರ್ ಕರೆಯಲಾಗಿದ್ದು ಅನುದಾನ ಬಿಡುಗಡೆ ಕಷ್ಟ ಸಾಧ್ಯದ ಹಿನ್ನಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಅನುಷ್ಠಾನಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆ.

ಹಾಲಿ ಗೋನೂರು ಕೆರೆಗೆ ನೀರು ಬಂದಿರುವುದು ಕೇವಲ ಸಣ್ಣದೊಂದು ಸಂತಸ ನಗೆ ಚೆಲ್ಲಿರುವುದು ಬಿಟ್ಟರೆ ಸಂಭ್ರಮದ ವಾತಾವರಣ ಸೃಷ್ಟಿಸಿಲ್ಲ. ಹಾಲಿ ಗುತ್ತಿಗೆದಾರರಿಗೆ ಎರಡು ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ವಾಸ್ತವಾ್ಂಶ ಹೀಗಿರುವಾಗ ಭದ್ರಾ ಮೇಲ್ದಂಡೆ ಕಾಮಗಾರಿ ವಾಸ್ತವ ಪರಿಸ್ಥಿತಿ ಸಂಭ್ರಮ ತಾರದೆ ಸಂಕಟಗಳನ್ನೇ ಪ್ರತಿನಿಧಿಸುತ್ತಿದೆ. ಅಧಿಕಾರಿಗಳ, ಜನ ಪ್ರತಿನಿಧಿಗಳು ವಾಸ್ತವಾಂಶ ಮರೆ ಮಾಚಿ ಭದ್ರೆ ತೋರಿಸಿ ಕನಸುಗಳ ಕಸಿಯುವ ಕೆಲಸ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಚ್ಚಪ್ಪ ಜಮಾದಾರ ನಿಂದನೆ ಖಂಡಿಸಿ ಪ್ರತಿಭಟನೆ
ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ: ಸಂಸದ ರಾಧಾಕೃಷ್ಣ ದೊಡ್ಡಮನಿ