ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ ಬಳಿ ಇರುವ ಅನ್ನದಾನ ಭವನದಲ್ಲಿ ಭಕ್ತರು, ಸಾರ್ವಜನಿಕರಿಗೆ ಅನ್ನದಾಸೋಹಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ.2 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಅನ್ನದಾನ ಭವನವು 2022ರಲ್ಲೇ ಉದ್ಘಾಟನೆಯಾಗಿ ಮೂರು ವರ್ಷವಾಗಿದ್ದರೂ ನಿತ್ಯ ಅನ್ನದಾನ ಆರಂಭಿಸದ ಕಾರಣ ಭವನ ಅನಾಥವಾಗೇ ಉಳಿದಿತ್ತು. ಇದೀಗ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯರವರ ಪ್ರಯತ್ನದ ಫಲವಾಗಿ ಅನ್ನದಾನಭವನ ಭಕ್ತರ ಉಪಯೋಗಕ್ಕೆ ತೆರೆದುಕೊಳ್ಳುತ್ತಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಬಿ.ಎಸ್.ಯಡಿಯೂರಪ್ಪ ಅಂದಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಮೇಲುಕೋಟೆ ಅಭಿವೃದ್ಧಿಗೆ ಪ್ಲಾನ್ ತಯಾರಿಸಿದ್ದರೆ ನೀಡಿ ಎಂದಿದ್ದರು. ಆದರೆ, ಜಿಲ್ಲಾಡಳಿತ ಯೋಜನೆ ನೀಡದ ಕಾರಣ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ನೀಡಿದ ಸಲಹೆಯಂತೆ ಯಡಿಯೂರಪ್ಪನವರು ಅನ್ನದಾನಭವನಕ್ಕೆ ತಕ್ಷಣವೇ 2 ಕೋಟಿ ರು. ಅನುದಾನ ಘೋಷಿಸಿ ಒಂದೇ ವಾರದಲ್ಲಿ ಅನುದಾನ ಬಿಡುಗಡೆ ಮಾಡಿ ಒಂದೇ ವರ್ಷದಲ್ಲಿ ಆರಂಭಿಸಬೇಕು ಎಂದು ಆದೇಶ ನೀಡಿದ್ದರು.ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು ಕಾಳಜಿವಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡರ ಸಹಕಾರದಲ್ಲಿ ಅಚ್ಚುಕಟ್ಟಾಗಿ ಅನ್ನದಾನ ಭವನ ನಿರ್ಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 2022ರ ವೈರಮುಡಿ ಉತ್ಸವದಂದು ಉದ್ಘಾಟನೆಯಾಗಿತ್ತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನ್ನದಾನ ಭವನ ಮೂಲೆಗುಂಪಾಗಿ ಅನಾಥವಾಗಿತ್ತು. ಕಟ್ಟಡಕ್ಕೆ ಕಾಂಪೌಂಡ್ ಇಲ್ಲದೆ ಗಿಡಗಂಟೆ ಬೆಳೆದು ಪಾಳು ಕಟ್ಟಡವಾಗಿ ಕುಡುಕರ ತಾಣವಾಗಿ ಪರಿವರ್ತಿತವಾಗಿತ್ತು.ಅನ್ನದಾನಭವನಕ್ಕೆ ಕಾಂಪೌಂಡ್ ಹಾಕುವ ವಿಚಾರ ಬಂದಾಗಲೂ ರಾಜಕೀಯ ಬೆರೆಸಲಾಗುತಿತ್ತು.
ಈ ವೇಳೆ ಅಪರ ಜಿಲ್ಲಾಧಿಕಾರಿಯಾಗಿ ಬಂದ ಡಾ.ಎಚ್.ಎಲ್ ನಾಗರಾಜು ಸ್ಥಳ ಪರಿಶೀಲನೆ ನಡೆಸಿ, ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗೆ ಮಣಿಯದೇ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಿಸುವ ಕೆಲಸ ಮಾಡಿದ್ದರು.ಅನ್ನದಾನ ಆರಂಭಕ್ಕೆ ಭಕ್ತರದೇ ಕೊಡುಗೆ:
ಸೌಲಭ್ಯಗಳ ಕೊರತೆಯಿಂದ ಅನ್ನದಾನ ಭವನದ ಆರಂಭ ಮುಂದೂಡುತ್ತಲೇ ಬಂದು ಕೊನೆಗೆ ದಾನಿಗಳ ಸಹಕಾರದಲ್ಲಿ ಆರಂಭವಾಗುವಂತಾಗಿದೆ. ದೇವಾಲಯದ ಇಒ ಶೀಲಾ ಅವರ ಪ್ರಯತ್ನದ ಫಲವಾಗಿ ರಾಮಾನುಜಾಚಾರ್ಯರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ಸೇರಿದಂತೆ ಹಲವು ಭಕ್ತರು ಬಾಯ್ಲರ್, ಲೋಟತಟ್ಟೆ, ಪಿಲ್ಟರ್, ಬಕೇಟ್‌ಗಳು, ಪಾತ್ರೆಗಳು, ಡ್ರಮ್ ಸೇರಿದಂತೆ ಅನ್ನದಾನಕ್ಕೆ ಬೇಕಾದ ಪಾತ್ರೆ, ಪರಿಕರಗಳನ್ನು ಕೊಡುಗೆ ನೀಡಿದ್ದಾರೆ. ಕೆಲವು ಭಕ್ತರು ಮೂಟೆಗಟ್ಟಲೆ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ನೀಡಿದ ಕಾರಣ ಅನ್ನದಾನ ಭವನ ಆರಂಭವಾಗುತ್ತಿದೆ.ಆರಂಭದ ದಿನ ಪುಳಿಯೋಗರೆ, ಸಕ್ಕರೆ ಪೊಂಗಲ್:
ಅನ್ನದಾನ ಆರಂಭದ ದಿನ 500 ಮಂದಿಗೆ ಪುಳಿಯೊಗರೆ, ಸಕ್ಕರೆ ಪೊಂಗಲ್, ಮೊಸರನ್ನ ವಿತರಿಸಲಾಗುತ್ತದೆ. ಪ್ರತಿದಿನ 500 ಮಂದಿಗೆ ಅನ್ನಸಾಂಬಾರ್, ತಿಳಿಸಾರು, ಪಾಯಸ, ಮೊಸರು ಮೆನು ಇರುವ ಊಟ ಶನಿವಾರ ಮತ್ತು ಭಾನುವಾರ 1000 ಮಂದಿಗೆ ದೈನಂದಿನ ಮೆನು ಜೊತೆಗೆ ಸಕ್ಕರೆ ಪೊಂಗಲ್ ಪುಳಿಯೊಗರೆ ನೀಡಲು ಉದ್ದೇಶಿಸಲಾಗಿದೆ.ನಂತರ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅನ್ನದಾನದ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ. ಭಕ್ತರು, ದಾನಿಗಳು ಸಹಕಾರ ನೀಡಿದ ಪರಿಣಾಮ ಅನ್ನದಾನ ಆರಂಭಿಸಲಾಗುತ್ತದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾಹಿತಿ ನೀಡಿದ್ದಾರೆ .