ಕನ್ನಡಪ್ರಭ ವಾರ್ತೆ ಭಾಲ್ಕಿ
ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ನೀಲಮ್ಮ ವೀರಬಸಪ್ಪ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಶಾಲಾ ವಾರ್ಷಿಕೋತ್ಸವ ಮತ್ತು ದಿವಂಗತ ವಿ.ಕೆ.ಪಾಟೀಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ದಾಸೋಹ ಎಂದರೆ ಕೇವಲ ಅನ್ನದಾನ ಅಥವಾ ವಸ್ತುವನ್ನು ಉಚಿತವಾಗಿ ನೀಡುವುದಲ್ಲ. ಅದು ತನ್ನಲ್ಲಿರುವ ಭಕ್ತಿ, ಸೇವೆ ಮತ್ತು ಅಹಂಕಾರವಿಲ್ಲದ ಸಮ ರ್ಪಣಾ ಭಾವದ ಪ್ರತೀಕವಾಗಿದೆ. ಅಂತಹ ಸಮಪರ್ಣಾ ಭಾವದಿಂದ ಲಿಂಗೈಕ್ಯ ವಿ.ಕೆ.ಪಾಟೀಲರು ಗ್ರಾಮೀಣ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಲ್ಲಿಸಿರುವ ದಾಸೋಹ ಸೇವೆ ಎಂದು ಮರೆಯಲಿಕ್ಕೆ ಸಾಧ್ಯವಿಲ್ಲ.
ಅವರ ಹೆಸರಿನಲ್ಲಿ ಇಂದು ನಮ್ಮ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಈ ಶಾಲೆ 18 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿ.ಕೆ.ಪಾಟೀಲರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಸಲ್ಲಿಸಿರುವ ಸೇವೆ ಅನುಮಪವಾಗಿದೆ ಎಂದು ತಿಳಿಸಿದರು.ಸಂಸದ ಸಾಗರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ಮಾನವನ ಜೀವನದ ಅತ್ಯಂತ ಪ್ರಮುಖವಾದ ಆಸ್ತಿಯಾಗಿದೆ. ಇದು ಕೇವಲ ಪುಸ್ತಕದ ಜ್ಞಾನವನ್ನು ಪಡೆಯುವುದಿಲ್ಲ. ಬದಲಿಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಬದುಕು ದಾರಿಯನ್ನು ತೋರಿಸುವ ಶಕ್ತಿಯಾಗಿದೆ. ಅಂತಹ ಒಳ್ಳೆಯ ಶಿಕ್ಷಣವನ್ನು ಗ್ರಾಮೀಣ ಭಾಗದ ಬಡಮಕ್ಕಳಿಗೆ ಪೂಜ್ಯರು ಈ ಶಾಲೆಯ ಮುಖಾಂತರ ನೀಡುತ್ತಿರುವುದು ಬಹು ದೊಡ್ಡ ಸೇವೆಯಾಗಿದೆ ಎಂದು ನುಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರೆ ಗುರುರಾಜ ವಿ.ಹೌಂಸಿ ವಂದಿಸಿದರು.