ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ದಿನಾಂಕ ನಿಗದಿ

KannadaprabhaNewsNetwork |  
Published : Jun 23, 2024, 02:13 AM IST
22ಕೆಎಂಎನ್‌ಡಿ-1 | Kannada Prabha

ಸಾರಾಂಶ

ರಾಜ್ಯದ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳು ಜು.೩೧ಕ್ಕೆ ಕಬ್ಬು ನುರಿಸುವ ಸಂಬಂಧ ಸಕ್ಕರೆ ಆಯುಕ್ತರು ಬರೆದಿರುವ ಪತ್ರ.

ಕನ್ನಡಪ್ರಭ ವಾರ್ತೆ ಮಂಡ್ಯ

2024-25ನೇ ಸಾಲಿನ ರಾಜ್ಯದ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳು 2024-25ನೇ ಹಂಗಾಮಿನಲ್ಲಿ ಕಬ್ಬು ಅರೆಯುವಿಕೆ ಕಾರ್ಯವನ್ನು ಜು.31ಕ್ಕೆ ನಿಗದಿಪಡಿಸಿ ಕಬ್ಬು ಅಭಿವೃದ್ಧಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆಗಳ ಆರಂಭ ಕುರಿತಂತೆ ಹೊರಡಿಸಿರುವ ಆದೇಶ ಅಚ್ಚರಿಗೆ ಕಾರಣವಾಗಿದೆ.ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಸೇರಿದಂತೆ ದಕ್ಷಿಣ ಭಾಗದ 11 ಸಕ್ಕರೆ ಕಾರ್ಖಾನೆಗಳು ಸರ್ಕಾರದ ನಿರ್ದೇಶನದಂತೆ ಅಗತ್ಯ ಪರವಾನಗಿ ಮತ್ತು ಮಂಜೂರಾತಿ ಪಡೆದು 2024-25ನೇ ಸಾಲಿನಿಂದ ಕಬ್ಬು ಅರೆಯುವಿಕೆ ಕಾರ್ಯವನ್ನು 2024ನೇ ಜುಲೈ 31ರಿಂದ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಿದ್ದಲ್ಲಿ ಮುಂದೆ ಉದ್ಭವಿಸಬಹುದಾದ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ತೊಂದರೆಗಳಿಗೆ ಕಂಪನಿಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯವನ್ನು ಪ್ರತಿ ವರ್ಷ ತಮ್ಮ ಇಚ್ಛೆಗೆ ಅನುಗುಣವಾಗಿ ಬೇರೆ ಬೇರೆ ದಿನಾಂಕಗಳಂದು ಪ್ರಾರಂಭಿಸುತ್ತವೆ. ರಾಜ್ಯದ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳು ಜುಲೈ-ಆಗಸ್ಟ್ ಮಾಹೆಯಲ್ಲಿ ಹಾಗೂ ಉತ್ತರ ಭಾಗದ ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್-ನವೆಂಬರ್ ಮಾಹೆಯಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸುವುದು ವಾಡಿಕೆಯಾಗಿದೆ.ಕೆಲವೊಂದು ಸಕ್ಕರೆ ಕಾರ್ಖಾನೆಗಳು ಇತರೆ ಕಾರ್ಖಾನೆನಗಳೊಂದಿಗೆ ಸ್ಪರ್ಧೆಗಿಳಿದು ಕಬ್ಬು ಅರೆಯುವ ಕಾರ್ಯವನ್ನು ಬೇಗನೆ ಪ್ರಾರಂಭ ಮಾಡುವುದರಿಂದ ಕಬ್ಬು ಸಂಪೂರ್ಣ ಮಾಗದೇ ಇಳುವರಿ ಕಡಿಮೆಯಾಗುತ್ತದೆ. ಇದು ಸಕ್ಕರೆ ಮತ್ತು ಇತರೆ ಉತ್ಪನ್ನಗಳ ಉತ್ಪಾದನೆಗಳ ಮೇಲೆ ಪರಿಣಾಮ ಬೀರುತ್ತದೆ. ಕಬ್ಬು ಅರೆಯುವ ಕಾರ್ಯವನ್ನು ಬೇಗನೆ ಪ್ರಾರಂಭಿಸುವ ಸಕ್ಕರೆ ಕಾರ್ಖಾನೆಗಳು ನೆರೆಯ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿ ಬೆಳೆದಂತಹ ಕಬ್ಬನ್ನು ಅನಧಿಕೃತವಾಗಿ ಮತ್ತು ಕಾನೂನು ಬಾಹಿರವಾಗಿ ನುರಿಸುತ್ತಿವೆ. ಇದರಿಂದಾಗಿ ನೆರೆಯ ಸಕ್ಕರೆ ಕಾರ್ಖಾನೆಗಳ ಮಧ್ಯೆ ಅನಾರೋಗ್ಯಕರ ಮತ್ತು ಕಾನೂನಾತ್ಮಕ ತೊಡಕುಗಳು ಉಂಟಾಗುತ್ತಿವೆ.

ಈ ನಡುವೆ ಮಂಡ್ಯ ಜಿಲ್ಲಾಧಿಕಾರಿಗಳು ಬರೆದಿರುವ ಪತ್ರದಲ್ಲಿ 2024-25ನೇ ಸಾಲಿನ ಕಬ್ಬು ಅರೆಯುವಿಕೆ ಕಾರ್ಯವನ್ನು ಪ್ರಾರಂಭಿಸುವ ಸಂಬಂಧ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಸ್ಪರ್ಧೆಯನ್ನು ತಪ್ಪಿಸಲು ಹಾಗೂ ಇಬ್ಬರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಒಮ್ಮತವಾಗಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಜು.15 ರಿಂದ ಜು.31ರೊಳಗೆ ಯಾವುದಾದರೊಂದು ಏಕರೂಪ ದಿನಾಂಕ ನಿಗದಿಪಡಿಸುವಂತೆ ಕೋರಿದ್ದರು. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಅದರಂತೆ ಸರ್ಕಾರ ಜು.31ರಿಂದ ರಾಜ್ಯದ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸುವಂತೆ ಸಕ್ಕರೆ ಸಚಿವರು ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌