- 4 ಸಾವಿರ ಪೊಲೀಸರು, 61 ಮಂದಿ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಗಳ ನಿಯೋಜನೆ । 36 ಚೆಕ್ ಪೋಸ್ಟ್‌ಗಳು, ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಸಿ- ಎಸ್‌ಪಿ ಮಾಹಿತಿ
ಇದೇ ಡಿಸೆಂಬರ್ 12 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ದತ್ತ ಜಯಂತಿ ಉತ್ಸವ ಶಾಂತ ರೀತಿಯಲ್ಲಿ ನಡೆಸುವ ಸಂಬಂಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಡಿ.12 ರಂದು ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಯಾತ್ರೆ, 13 ರಂದು ಶೋಭಾಯಾತ್ರೆ ನಡೆಯಲಿದೆ. 14 ರಂದು ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತ ಭಕ್ತರು ದತ್ತಜಯಂತಿಗೆ ಆಗಮಿಸಲಿದ್ದಾರೆ. ಅವರು ತೆರಳುವ ಮಾರ್ಗವನ್ನು ಪರಿಶೀಲಿಸಲಾಗಿದೆ. ಸತತ ಮಳೆಯಿಂದಾಗಿ ಕವಿಕಲ್ ಗಂಡಿ ಹಾಗೂ ಹೊನ್ನಮ್ಮನಹಳ್ಳ ಬಳಿ ರಸ್ತೆ ಹಾಳಾಗಿದೆ. ದತ್ತಪೀಠಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸವಲತ್ತು ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ದತ್ತಪೀಠದ ಗುಹೆಯಲ್ಲಿರುವ ದತ್ತಪಾದುಕೆಗಳ ದರ್ಶನಕ್ಕೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಅವಕಾಶ ನೀಡಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಹೆಯೊಳಗೆ ತೆರಳಬೇಕು. ಗುಹೆ ಒಳ ಭಾಗದಲ್ಲಿ ಮೊಬೈಲ್ ಪೋನ್ ಬಳಕೆ ನಿಷೇಧಿಸ ಲಾಗಿದೆ. ಹಾಗಾಗಿ ಭಕ್ತರು ತಮ್ಮ ಮೊಬೈಲ್ ಪೋನ್‌ಗಳನ್ನು ವಾಹನಗಳಲ್ಲಿ ಬಿಟ್ಟು ಹೋಗಬೇಕು ಎಂದು ಹೇಳಿದರು.
ರಾಜ್ಯದ ವಿವಿಧೆಡೆಯಿಂದ ಡಿ. 14 ರಂದು ಭಕ್ತರು ಗಿರಿಗೆ ಬರಲಿದ್ದಾರೆ. ಹಾಗಾಗಿ ಆ ದಿನದಂದು ಭಕ್ತರು ಬಂದು ಹೋಗುವ ರಸ್ತೆಯಲ್ಲಿರುವ ಸಸ್ಯಹಾರಿ ಹೊರತುಪಡಿಸಿ ಇತರೆ ಹೋಟೆಲ್‌ಗಳನ್ನು ಬಂದ್ ಮಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದ ಅವರು,
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್
ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿ ಸಭೆಗಳನ್ನು ನಡೆಸಲಾಗಿದೆ. ನೆರೆ ಜಿಲ್ಲೆ ಗಳಲ್ಲೂ ಸಭೆಗಳನ್ನು ನಡೆಸುವಂತೆ ಕೋರಿಕೊಳ್ಳಲಾಗಿದೆ. ಈವರೆಗೆ ಒಂದು ಸಾವಿರ ಮಂದಿ ಜಿಲ್ಲೆಯಲ್ಲಿ ದತ್ತಮಾಲೆ ಧರಿಸಿದ್ದಾರೆ. ವಿ ಎಚ್ ಪಿ ಸಂಘಟನೆಯವರು ಸುಮಾರು 40 ಸ್ಥಳಗಳಲ್ಲಿ ಸಂಕೀರ್ತನಾ ಹಾಗೂ ಶೋಭಾಯಾತ್ರೆ ನಡೆಸಲಿದ್ದಾರೆ ಎಂದರು.
8-10 ದ್ರೋಣ್ ಕ್ಯಾಮೆರಾಗಳು ಬಳಸಿಕೊಳ್ಳಲಾಗುತ್ತಿದೆ. 400 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 100 ಮಂದಿ ಪೊಲೀಸ್ ಸಿಬ್ಬಂದಿಗೆ ಹ್ಯಾಂಡ್ ಹಾಗೂ ಬಾಡಿ ಕ್ಯಾಮೆರಾಗಳನ್ನೂ ನೀಡಲಾಗುವುದು. ಜಿಲ್ಲೆಯಲ್ಲಿ 36 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ನೆರೆ ಜಿಲ್ಲೆಗಳ ಗಡಿ ಭಾಗದಲ್ಲೂ ಚೆಕ್ ಪೋಸ್ಟ್ ತೆರೆಯಲು ಅಲ್ಲಿನ ಜಿಲ್ಲಾಡಳಿತಗಳಿಗೆ ಮನವಿ ಮಾಡಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 61 ಮಂದಿ ವಿಶೇಷ ದಂಡಾಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಬೇರೆ ಯಾವುದೇ ವ್ಯಕ್ತಿ ಹಾಗೂ ಕೋಮಿನ ಜನರ ಭಾವನೆಗಳಿಗೆ ದಕ್ಕೆಯಾಗದ ರೀತಿ ಕಾರ್ಯಕ್ರಮ ನಡೆಸ ಬೇಕೆಂದು ಸಂಘಟಕರಿಗೆ ಸೂಚನೆ ನೀಡಲಾಗಿದೆ. ಈ ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ನಡೆದ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ಸಮರಸ್ಯ ಕದಡುವ ರೀತಿಯಲ್ಲಿ ಮಾತನಾಡಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು. 9 ಕೆಸಿಕೆಎಂ 1 ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಅವರು ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಇದ್ದರು.