- ಸಾವಿರಾರು ಮಹಿಳೆಯರಿಂದ ಸಂಕೀರ್ತನಾ ಯಾತ್ರೆ , ದತ್ತ ಪಾದುಕೆ ದರ್ಶನ ಪಡೆದ ಮಾತೆಯರು
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮಸೇನೆಯಿಂದ ದತ್ತಜಯಂತಿ ಉತ್ಸವದ ಅಂಗವಾಗಿ ಮಂಗಳವಾರ ಕಾಫಿನಾಡಿನಲ್ಲಿ ಅನುಸೂಯ ಜಯಂತಿ ಅದ್ಧೂರಿಯಾಗಿ ನೆರವೇರಿತು. ಜಯಂತಿ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಶ್ರೀಕಾಮಧೇನು ಗಣಪತಿ ದೇವಾಲಯದವರೆಗೂ ಭವ್ಯ ಸಂಕೀರ್ತನಾ ಮೆರವಣಿಗೆ ನಡೆಸಲಾಯಿತು.
ಬೆಳ್ಳಂಬೆಳಗ್ಗೆಯೇ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಜಮಾಯಿಸಿದ ಸಾವಿರಾರು ಮಹಿಳೆಯರು ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದತ್ತಾತ್ರೇಯದ ಅಡ್ಡೆಗೆ ಪೂಜೆ ಸಲ್ಲಿಸುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಲಾಯಿತು. ಶ್ರೀ ಬೋಳರಾಮೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಮೆರವಣಿಗೆ ಐಜಿ ರಸ್ತೆ ಮೂಲಕ ಎನ್‌ಎಂಸಿ ವೃತ್ತವನ್ನು ಹಾದು ಪಾಲಿಟೆಕ್ನಿಕ್ ವೃತ್ತದವರೆಗೂ ಸಾಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಹಿಳೆಯರು ಕೊರಳಿಗೆ ಕೇಶರಿ ಶಲ್ಯ ಹಾಕಿಕೊಂಡು ಭಾಗವಾಧ್ವಜ ಹಿಡಿದು, ಅನುಸೂಯದೇವಿ ಚಿತ್ರಪಟದೊಂದಿಗೆ ದತ್ತಾತ್ರೇಯರ ನಾಮಸ್ಮರಣೆ ಮಾಡುತ್ತಾ ಮೆರವಣಿಯಲ್ಲಿ ತೆರಳಿದರು. ಕೆಲವರು ದತ್ತಾತ್ರೇಯ ಸ್ವಾಮಿಗೆ ಜೈಕಾರ ಹಾಕಿದರೆ, ಮತ್ತೆ ಕೆಲವರು ಭಜನೆ ಮಾಡುತ್ತಾ ಹೆಜ್ಜೆಹಾಕಿದರು.ಪಾಲಿಟೆಕ್ನಿಕ್ ವೃತ್ತಕ್ಕೆ ತೆರಳಿದ ಮಹಿಳೆಯರು ಅಲ್ಲಿಂದ ಕಾರ್ಯಕ್ರಮದ ಸಂಘಟಕರು ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು. ಅಲ್ಲಿ ಸರದಿ ಸಾಲಿನಲ್ಲಿ ನಿಂತು ಅನುಸೂಯ ದೇವಿ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು. ಗುಹೆ ಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದುಕೊಂಡರು.ಅನುಸೂಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮಾತೆಯರಿಗೆ ದತ್ತಪೀಠದಲ್ಲಿ ಹಸಿರು ಬಳೆ, ಅರಿಶಿಣ, ಕುಂಕುಮ ನೀಡ ಲಾಯಿತು. ಪ್ರಸಾದ ಸ್ವೀಕರಿಸುವ ಮೂಲಕ ದತ್ತಪೀಠದಿಂದ ನಗರಕ್ಕೆ ಆಗಮಿಸಿದರು. ದತ್ತಜಯಂತಿ ಅಂಗವಾಗಿ ನಡೆದ ಅನುಸೂಯ ಜಯಂತಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.ಅನುಸೂಯ ಜಯಂತಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಮುಖರಾದ ಶ್ರೀಕಾಂತ್ ಪೈ, ಸಂತೋಷ್ ಕೋಟ್ಯಾನ್, ಜಸಂತ ಅನಿಲ್ ಕುಮಾರ್, ಎಂ.ಆರ್.ದೇವರಾಜಶೆಟ್ಟಿ, ರಾಜಪ್ಪ, ಶ್ಯಾಮ್ ವಿ.ಗೌಡ, ಕೆ.ಎಸ್.ಪುಷ್ಪರಾಜ್, ಕೋಟೆ ರಂಗನಾಥ್ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಾತೆಯರು ಪಾಲ್ಗೊಂಡಿದ್ದರು.-- ಬಾಕ್ಸ್ --ದತ್ತಪೀಠದ ವಿಚಾರದಲ್ಲಿ ಹಿಂದೂಗಳಿಗೆ ಪೂರ್ಣ ನ್ಯಾಯ ಲಭಿಸಬೇಕು: ಸಿ.ಟಿ ರವಿಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಮೊದಲ ದಿನವಾದ ಇಂದು ಮಾತಾ ಅನುಸೂಯ ದೇವಿಯವರ ಪೂಜೆ, ಸಂಕೀರ್ತನಾ ಯಾತ್ರೆ ಆರಂಭವಾಗುತ್ತಿದೆ. ಇದಕ್ಕೂ ಮುನ್ನ, ಧಾರ್ಮಿಕ ಜಾಗೃತಿಸಭೆ ನಡೆಯಲಿದೆ. ನಮ್ಮ ಬೇಡಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ದತ್ತಪೀಠ ಬೇರೆ, ಬಾಬಾ ಬುಡನ್‌ದರ್ಗಾ ಬೇರೆ ಎನ್ನುವುದನ್ನು ಕಂದಾಯ ಇಲಾಖೆ ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ, ಹಿಂದೂಗಳಿಗೆ ಅರ್ಧ ನ್ಯಾಯ ಲಭಿಸಿದ್ದು, ಪೂರ್ಣ ನ್ಯಾಯ ಸಿಗಬೇಕು. ಅಲ್ಲಿಯ ತನಕ ನಮಗೆ ಭಕ್ತಿ ಮತ್ತು ಶಕ್ತಿಯ ಆಂದೋಲನ ಮಾಡುವುದು ಅನಿವಾರ್ಯ. ದತ್ತಾತ್ರೇಯರು, ಸತಿ ಅನು ಸೂಯದೇವಿ ನ್ಯಾಯಕ್ಕಾಗಿ ಕಾಯುತ್ತಿದ್ದು, ನಾವು ಭಕ್ತಾದಿಗಳೂ ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಮಂಗಳವಾರ ಮಾತೆ ಅನುಸೂಯ ದೇವಿ ಜಯಂತಿ ಅಂಗವಾಗಿ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ದತ್ತಾತ್ರೇಯ ಕ್ಷೇತ್ರಗಳಲ್ಲಿ ಜಾತೀಯತೆ, ಅಸ್ಪೃಶ್ಯತೆಗೆ ಅವಕಾಶವಿಲ್ಲ. ಅಲ್ಲಿ ಪ್ರಕೃತಿಯೊಡನೆ ಬೆರೆಯುವ ರೀತಿಯಲ್ಲೇ ಆಚರಣೆಗಳಿವೆ. ನಾವು ದತ್ತಾತ್ರೇಯರಿಗೆ ಪ್ರಿಯವಾದ ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ನಡೆಸುತ್ತೇವೆ. ಪಂಚಭೂತಗಳನ್ನು ಪೂಜಿಸುತ್ತೇವೆ. ಅಣುರೇಣುತೃಣ ಕಾಷ್ಟಗಳಲ್ಲೂ ಹಿಂದೂಗಳು ಮಹಾದೇವನನ್ನು ಕಾಣುತ್ತೇವೆ. ಆದ್ದರಿಂದ ನಮಗಾಗಿರುವ ಅನ್ಯಾಯ ಸರಿಯಾಗಬೇಕು. ಬಾಬಾ ಬುಡನ್‌ದರ್ಗಾ ನಾಗೇನಹಳ್ಳಿಯ ಸರ್ವೇ ನಂಬರ್ 57 ರಲ್ಲಿದ್ದರೆ, ದತ್ತಾತ್ರೇಯ ಪೀಠ ಇನಾಮ್ ದತ್ತಾತ್ರೇಯ ಗ್ರಾಮದ ಸರ್ವೇ ನಂ. 195 ರಲ್ಲಿದೆ. ಹೀಗಿರುವಾಗ ಬಾಬಾ ಬುಡನ್‌ಗೂ ದತ್ತಪೀಠಕ್ಕೂ ಯಾವುದೇ ಸಂಬಂಧವಿಲ್ಲ. ದತ್ತಪೀಠಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಇವೆಲ್ಲವೂ ಶಾಕಾದ್ರಿಗೂ ತಿಳಿದಿದ್ದು, ಭೂಮಿ ವಶಪಡಿಸಿ ಕೊಳ್ಳುವುದಕ್ಕೆ ಈ ರೀತಿ ವಿತಂಡವಾದ ಮಾಡುತ್ತಿದ್ದಾರೆ. ದತ್ತಪೀಠದಲ್ಲಿ ಇರುವ ಗೋರಿಯನ್ನು ತೆರವು ಗೊಳಿಸಬೇಕು ಎನ್ನುವುದು ನಮ್ಮಆಗ್ರಹ. ಅವರ ದರ್ಗಾದಲ್ಲಿ ಅವರ ಪೂಜೆ ಮಾಡಲಿ, ನಮ್ಮ ದತ್ತಪೀಠದಲ್ಲಿ ನಮ್ಮ ಪೂಜೆ ನಡೆಯಬೇಕು ಎಂದು ಹೇಳಿದರು.-- 2 ಕೆಸಿಕೆಎಂ 1ದತ್ತಜಯಂತಿಯ ಹಿನ್ನಲೆಯಲ್ಲಿ ಮಂಗಳವಾರ ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಯಾತ್ರೆ ನಡೆಯಿತು.