ದತ್ತಮಾಲಾ ಅಭಿಯಾನ - ಶೋಭಾಯಾತ್ರೆಗೆ ಶಾಂತಿಯುತ ತೆರೆ

KannadaprabhaNewsNetwork |  
Published : Nov 11, 2024, 01:03 AM IST
ಶೋಭಾಯಾತ್ರೆಯ ಅಂಗವಾಗಿ ಚಿಕ್ಕಮಗಳೂರಿನ ಶಂಕರಮಠ ಎದುರು ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಮೋದ್‌ ಮುತಾಲಿಕ್ ಮಾತನಾಡಿದರು. ಸಿ.ಟಿ.ರವಿ, ಗಂಗಾಧರ್ ಕುಲಕರ್ಣಿ ಹಾಗೂ ಮುಖಂಡರು ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನ ಹಾಗೂ ಶೋಭಾಯಾತ್ರೆಗೆ ಭಾನುವಾರ ಶಾಂತಿಯುತವಾಗಿ ತೆರೆ ಬಿದ್ದಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನ ಹಾಗೂ ಶೋಭಾಯಾತ್ರೆಗೆ ಭಾನುವಾರ ಶಾಂತಿಯುತವಾಗಿ ತೆರೆ ಬಿದ್ದಿತು.

ನ.4 ರಂದು ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಒಂದು ವಾರಗಳ ಕಾಲ ಧಾರ್ಮಿಕ ಆಚರಣೆ ನಡೆಸಲಾಯಿತು. ಕೊನೆ ದಿನವಾದ ಭಾನುವಾರ ರಾಜ್ಯದ ವಿವಿಧೆಡೆಯಿಂದ ದತ್ತಮಾಲಾಧಾರಿಗಳು ಚಿಕ್ಕಮಗಳೂರಿಗೆ ಮುಂಜಾನೆಯೇ ಆಗಮಿಸಿದ್ದರು.

ಇಲ್ಲಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಶಂಕರಮಠ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯತ್ತ ಮಾಲಾಧಾರಿಗಳು ಆಗಮಿಸಿ, ರಸ್ತೆಯಲ್ಲಿಯೇ ಆಸಿನರಾದರು.

ಬೆಳಿಗ್ಗೆ 9.15ಕ್ಕೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ ಅವರು, ಈವರೆಗೆ ನಡೆದುಕೊಂಡು ಬಂದ ಹೋರಾಟವನ್ನು ಮೆಲುಕು ಹಾಕಿ ಕೆಲವು ಅಂಶದಲ್ಲಿ ಯಶಸ್ಸು ಕಂಡಿದ್ದೇವೆ ಎಂದರು.

ದತ್ತಪೀಠಕ್ಕೆ ಸಂಬಂಧಿಸಿದಂತೆ ಈವರೆಗೆ ನ್ಯಾಯಾಲಯದಲ್ಲಿ ಹಿಂದೂಗಳ ಪರವಾಗಿ ವಾಸ್ತವಿಕ ಆದೇಶಗಳು ಬಂದಿವೆ. ಹಿಂದೂ ಅರ್ಚಕರು ನೇಮಕಗೊಂಡಿದ್ದಾರೆ. ಆದರೆ, ನಮ್ಮ ಮೂಲ ಉದ್ದೇಶ ದತ್ತಪೀಠದಲ್ಲಿರುವ ಗೋರಿಗಳನ್ನು ತೆರವು ಗೊಳಿಸಬೇಕು. ಇದು ಪೂರ್ಣ ಪ್ರಮಾಣದಲ್ಲಿ ಹಿಂದುಗಳ ಪೀಠ ಆಗಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.

ನಮ್ಮ ಹೋರಾಟ ಭೂಮಿಗಾಗಿ, ದೇವಸ್ಥಾನಕ್ಕಾಗಿ ಮಾತ್ರ ಅಲ್ಲ, ಹಿಂದೂಗಳ ಅಸ್ತಿತ್ವಕ್ಕಾಗಿ ನಮ್ಮ ದೇವಾಲಯ ಹಾಗೂ ಆಸ್ತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ನಾವು ಒಂದಾಗಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿ ಇದ್ದೇವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ಬಹಳ ವರ್ಷಗಳ ನಂತರ ನಾನು ಹಾಗೂ ಮುತಾಲಿಕ್ ಅವರು ವೇದಿಕೆ ಹಂಚಿಕೊಳ್ಳುತ್ತಿದ್ದೇವೆ. ಹಿಂದೂಗಳ ಸಂಘಟನೆಗಾಗಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ, ದತ್ತಪೀಠದ ಮುಕ್ತಿಗಾಗಿ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕೂಡ ಹೋರಾಡುತ್ತಿವೆ. ಸಂಘಟನೆ ಎರಡಾಗಿರ ಬಹುದು, ಆದರೆ, ಉದ್ದೇಶ ಎರಡಾಗಿಲ್ಲ. ಹಿಂದೂಗಳನ್ನು ಸಂಘಟಿಸಬೇಕೆಂಬ ಪ್ರಯತ್ನ ಯಾರೇ ಮಾಡಿದರೂ ನಮ್ಮದೆ, ಹಿಂದೂಗಳನ್ನು ಸಂಘಟಿಸುವ ಕಾಲ ಬಂದಿದೆ. ಇತಿಹಾಸ ಬಗ್ಗೆ ತಿಳಿಯದೆ ಹೋದರೆ ಭವಿಷ್ಯ ಹಾಳು ಮಾಡಿ ಕೊಳ್ಳಲಿದ್ದೇವೆ. ಹಿಂದೂ ಮತ್ತು ಹಿಂದೂತ್ವ ನಾಶವಾದರೆ ಜಾತಿಗಳು ನಾಶವಾಗಲಿವೆ ಎಂದರು ಹೇಳಿದರು.

ನಮ್ಮ ಸಂಕಲ್ಪ ಬರೀ ದತ್ತಪೀಠದ ಮುಕ್ತಿಗಾಗಿ ಅಲ್ಲ, ಇದರ ಜತೆಗೆ ಜಾತಿಯತೆ ದೂರ ಮಾಡುವ ಸಂಕಲ್ಪ ಮಾಡಬೇಕು.ಹಿಂದೂ ಸಮಾಜ ದುರ್ಬಲ ಆದ್ರೆ ಬರೀ ಭಾರತ ದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ನಷ್ಟವಾಗಲಿದೆ. ನಾವುಗಳು ಒಂದಾದರೆ ಮತದ ಆಸೆಗೆ ಮತಾಂಧತೆಗೆ ಕುಮ್ಮಕ್ಕು ನೀಡುವ ಜನರ ಮನಸ್ಥಿತಿ ಬದಲಾಗುತ್ತದೆ ಎಂದರು.

ಶೋಭಾಯಾತ್ರೆ:

ಧಾರ್ಮಿಕ ಸಭೆ ನಂತರ ಇಲ್ಲಿನ ಶಂಕರಮಠದಿಂದ ಬಸವನಹಳ್ಳಿ ಮುಖ್ಯ ರಸ್ತೆಯ ಮೂಲಕ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯಿಂದ ಆಜಾದ್‌ ಪಾರ್ಕ್‌ ವೃತ್ತದವರೆಗೆ ಶೋಭಾಯಾತ್ರೆ ನಡೆಯಿತು. ಶ್ರೀರಾಮ ಸೇನೆ ಮುಖಂಡರೊಂದಿಗೆ ಸಿ.ಟಿ. ರವಿ ಕೂಡ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಶ್ರೀರಾಮ ಸೇನೆ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಪಾಲ್ಗೊಂಡಿದ್ದರು.

ಬಳಿಕ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ವಾಹನಗಳಲ್ಲಿ ತೆರಳಿ, ಗುಹೆಯೊಳಗೆ ಸರದಿ ಸಾಲಿನಲ್ಲಿ ಹೋಗಿ ದತ್ತ ಪಾದುಕೆ ಗಳ ದರ್ಶನ ಪಡೆದರು. ದತ್ತಮಾಲಾ ಅಭಿಯಾನದ ಅಂಗವಾಗಿ ಪೀಠದ ಹೊರ ವಲಯದಲ್ಲಿ ಹೋಮ, ಹವನ, ಪೂರ್ಣಾಹುತಿ ನಡೆದ ಬಳಿಕ ಭಕ್ತರು ವಾಪಾಸ್‌ ತೆರಳಿದರು.

ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರ್‌ನಾಥ್‌, ರಾಜ್ಯ ಕಾರ್ಯದರ್ಶಿ ಪರಶುರಾಮ್‌ ನಡುಮನಿ, ರಾಜ್ಯ ವಕ್ತಾರ ಭಾಸ್ಕರ್‌, ರವಿ ಕೋಟಿತ್ಕರ್‌, ಮಣಿ ಸರ್ಕಾರ್‌, ಮಂಜುನಾಥ್‌, ಅರ್ಜುನ್ ಶೃಂಗೇರಿ, ಯೋಗಿ ಸಂಜಿತ್‌ ಸುವರ್ಣ, ರಾಜೇಂದ್ರಕುಮಾರ್‌, ರಂಜಿತ್‌ ಶೆಟ್ಟಿ, ನವೀನಾ ಹಾಗೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 1700 ಮಂದಿ ಪೊಲೀಸ್‌ ಸಿಬ್ಬಂದಿ ಹಾಗೂ ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಒಟ್ಟಾರೆ, ಶೋಭಾಯಾತ್ರೆ ಹಾಗೂ ದತ್ತಮಾಲಾ ಅಭಿಯಾನ ಶಾಂತಿಯುತವಾಗಿ ತೆರೆ ಕಂಡಿತು.-- ಕೋಟ್ಸ್--

ದತ್ತಪೀಠದಲ್ಲಿರುವ ನಕಲಿ ಗೋರಿ, ಸುಳ್ಳು ಗೋರಿಗಳು ಸ್ಥಳಾಂತರ ಗೊಂಡಾಗ, ದತ್ತಾತ್ರೇಯ ಹೆಸರಿನಲ್ಲಿರುವ ಎಲ್ಲಾ ಆಸ್ತಿ ದತ್ತಾತ್ರೇಯನಿಗೆ ಬಂದಾಗ ತೃಪ್ತಿ ಸಿಗಲಿದೆ. ಈಗ ಸಿಕ್ಕಿರುವುದು ಸಮಾಧಾನ ಮಾತ್ರ. ತೃಪ್ತಿ ಸಿಗಲು ಜನ ಜಾಗೃತಿಯನ್ನು ನಿರಂತರವಾಗಿ ಮುಂದುವರಿಸಬೇಕು. ನ್ಯಾಯಾಲಯದಲ್ಲೂ ಹೋರಾಟ ಮುಂದುವರಿಸೋಣ, ಹಿಂದೂತ್ವಕ್ಕಾಗಿ ರಾಜಕಾರಣ ಮಾಡುತ್ತೇವೆ. ಅದು ಯಾವುದೇ ರೀತಿ ಹೋರಾಟ ಇದ್ದರೂ ನಿಮ್ಮೊಂದಿಗೆ ನಿಲ್ಲುತ್ತೇನೆ.

- ಸಿ.ಟಿ. ರವಿ

ವಿಧಾನಪರಿಷತ್‌ ಸದಸ್ಯರು

-

1992ರ ಡಿಸೆಂಬರ್‌ 6 ರಂದು ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಾಣ ಮಾಡಿರುವ ರೀತಿಯಲ್ಲಿಯೇ ದತ್ತಪೀಠದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಇದಕ್ಕಾಗಿ ಮುಂದಿನ ವರ್ಷ ದತ್ತಮಾಲಾಧಾರಿಗಳು ಸಜ್ಜಾಗಿ ಬರಬೇಕು. ಆ ಮೂಲಕ ದತ್ತಪೀಠವನ್ನು ಸ್ವಾಧೀನ ಮಾಡಿಕೊಳ್ಳೋಣ.- ಗಂಗಾಧರ್‌ ಕುಲಕರ್ಣಿ

ರಾಜ್ಯಾಧ್ಯಕ್ಷರು, ಶ್ರೀರಾಮ ಸೇನೆ

-

ಔರಂಗಜೇಬ್ ಅಪ್ಪನ ರೀತಿ ಜಮೀರ್ ವರ್ತನೆ: ಮುತಾಲಿಕ್ ಆರೋಪ

- ಆತ ನಾಲಾಯಕ್, ಆಲದ ಮರಕ್ಕೆ ಆತನಿಗೆ ನೇಣಿಗೆ ಹಾಕಬೇಕುಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಯೋತ್ಪಾದನೆ, ಅತಿಕ್ರಮಣ ಕಾಂಗ್ರೆಸ್‌ನ ಆಶ್ರಯ ಪಡೆದಿರುವ ಜಿಹಾದಿ ಮಾನಸಿಕತೆ ಇರುವ ಮುಸ್ಲಿಮರ ಬಗ್ಗೆ ಎಚ್ಚರವಾಗಿರಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಶೋಭಾಯಾತ್ರೆಗೂ ಮುನ್ನ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕ ಆಸ್ತಿಯನ್ನು ವಕ್ಫ್‌ ಬೋರ್ಡ್‌ ಸೇರಿಸಿರುವುದನ್ನು ಕೈಬಿಡಬೇಕೆಂದು ರಾಜ್ಯ ಸರ್ಕಾರ ಹೇಳಿದೆ. ಈ ರೀತಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಸಚಿವ ಜಮೀರ್ ಅಹ್ಮದ್ ಅವರು ಔರಂಗಜೇಬ್‌ನ ಅಪ್ಪನ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಔರಂಗಜೇಬ್ ಛತ್ರಪತಿ ಶಿವಾಜಿ ಮಹಾರಾಜ್‌ರ ಕಾಲದಲ್ಲಿ ನಾಶ ಆದ, ಜಮೀರ್ ಅವರ ವರ್ತನೆ ಕೂಡ ನಾಶವಾಗಲಿದೆ. ಈ ದೇಶದಲ್ಲಿ, ಕರ್ನಾಟಕದಲ್ಲಿ ಹಿಂದೂ ಸಮಾಜ ಧೀಮಂತವಾಗಿದೆ. ನೀವುಗಳು ಏನೂ ಬೇಕಾದರೂ ಮಾಡಬಹುದೆಂಬುದು ನಡೆಯೋದಿಲ್ಲಾ ಎಂದು ಹೇಳಿದರು.

ಜಮೀರ್ ಅಹ್ಮದ್ ಅವರು ಬಿಜಾಪುರದಲ್ಲಿ ಹೋಗಿ ಈ ದರ್ಗಾಗಳಿಗೆ ಹಸಿರು ಬಣ್ಣ ಹೊಡೆಯಿರಿ ಎಂದು ಹೇಳಿದ್ದಾರೆ. ಈ ಬಣ್ಣ ನೋಡಿ ಸೈಥಾನ್‌ಗಳು ಹೆದರಬೇಕು ಎಂದಿದ್ದಾರೆ. ಸೈಥಾನ್ ಅಂದರೆ ಹಿಂದೂಗಳು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಹಿಂದೂ ಎಂದ ಅವರು, ಕೇಸರಿ ಬಣ್ಣ ಎಂದರೆ ಬೆಂಕಿ ಎಂದರು.

ನಾನು ಜಮೀರ್ ಅಹ್ಮದ್‌ಗೆ ಸವಾಲ್ ಹಾಕುತ್ತೇನೆ. ಅವರು ಗೆದ್ದಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಬಾಂಗ್ಲಾ ದೇಶಿಯ ಮುಸ್ಲಿಮರನ್ನು ಅವರು ಸಾಕುತ್ತಿದ್ದಾರೆ. ಅವರನ್ನು ಮತದಾರರ ಪಟ್ಟಿಗೆ ಸೇರಿಸಿ ಕೊಂಡಿದ್ದಾರೆ. ಈ ರೀತಿಯಲ್ಲಿ ಅನೇಕ ಪ್ರಮಾದಗಳನ್ನು ಮಾಡಿದ್ದಾರೆ. ಅವರನ್ನು ಕಿತ್ತು ಹಾಕಿ, ಗಡಿಪಾರು ಮಾಡಿ ಎಂದು ಹೇಳೋದಿಲ್ಲ, ಯಾವುದಾದರೂ ಆಲದ ಮರಕ್ಕೆ ನೇಣು ಹಾಕಬೇಕು. ಈ ದೇಶದಲ್ಲಿ ಇರಲೂ ಆತ ನಾಲಾಯಕ್, ನುಂಗಿ ನೀರು ಕುಡಿಯಲು ಇದು ನಿಮ್ಮಪ್ಪನ ಆಸ್ತಿನಾ ಎಂದು ಪ್ರಶ್ನಿಸಿದರು.

ನಿಮಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ರೆ, ತಾಕತ್ತು ಇದ್ರೆ ನೂರಾರು ಎಕರೆ ವಕ್ಫ್‌ ಬೋರ್ಡ್‌ ಆಸ್ತಿ ಕಬಳಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ನೋಟೀಸ್ ಕೊಡಿ. ಸಿಎಂ ಇಬ್ರಾಹಿಂ, ರೋಷನ್ ಬೇಗ್, ಹ್ಯಾರಿಸ್ ಅವರಿಗೆ ನೋಟೀಸ್ ಕೊಡಿ ಎಂದು ಸವಾಲ್ ಹಾಕಿದರು.

--

ಭಸ್ಮಾಸುರ ಕೊನೆಯಾಗಲೇ ಬೇಕು: ಸಿ.ಟಿ. ರವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿವನ ರೂಪಿ ಜನರಿದ್ದೇವೆ. ಆಧುನಿಕ ಭಸ್ಮಾಸುರನಂತೆ ಕಾಂಗ್ರೆಸ್ ಇದೆ. ಭಸ್ಮಾಸುರನ ನಾಶಕ್ಕೆ ಮೋಹಿನಿ ಅವತಾರ ತಾಳುವ ಅವಶ್ಯಕತೆ ಇದೆ. ನಮ್ಮಿಂದ ಅಧಿಕಾರ ಪಡೆದು ನಮ್ಮ ಆಸ್ತಿ ಕಬಳಿಸಲು ಬಿಡಬೇಕಾ, ಭಸ್ಮಾಸುರ ಕೊನೆಯಾಗಲೇಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ಲೂಟಿ, ಕರ್ನಾಟಕ ಹಣವನ್ನು ಎಟಿಎಂ ರೀತಿಯಂತೆ ಮಾಡಿಕೊಂಡಿದ್ದಾರೆ. ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡ್ತು, ಆದರೆ, ಕಾಂಗ್ರೆಸ್ ಜನರ ತಲೆ ಮೇಲೆ ಕೈ ಇಡುತ್ತಿದೆ. ರೈತರ ಆಸ್ತಿ, ದೇವಾಲಯ, ಸ್ಮಶಾನ ಆಸ್ತಿ ನಮ್ಮದು ಎಂದು ವಕ್ಫ್‌ ಬೋರ್ಡ್‌ ಹೇಳ್ತಾ ಇದೆ. ಈ ಅಧಿಕಾರ ಕೊಟ್ಟಿದ್ದು ಜನ ಎಂದರು.

ರಾಜಕೀಯ ದುರುದ್ದೇಶದಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಒಂದುವರೆ ವರ್ಷದಿಂದ ಸುಮ್ಮನಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಮುಂದಾಗಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು‌.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಬಕಾರಿ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಬಾರ್ ಮಾಲೀಕರೇ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸರ್ಕಾರ ಮೊದಲು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೊದಲ ಆರೋಪಿಯಾಗಿದ್ದಾರೆ. ಹೀಗಿರುವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ತನಿಖೆಗೆ ಸಹಕಾರ ನೀಡಬೇಕಿತ್ತು. ಆದರೆ ಅದು ಆಗಲಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.ಪೋಟೋ ಫೈಲ್‌ ನೇಮ್‌ 10 ಕೆಸಿಕೆಎಂ 1 10 ಕೆಸಿಕೆಎಂ 2ಶೋಭಾಯಾತ್ರೆ ಅಂಗವಾಗಿ ಚಿಕ್ಕಮಗಳೂರಿನ ಶಂಕರಮಠ ಎದುರು ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಮೋದ್‌ ಮುತಾಲಿಕ್ ಮಾತನಾಡಿದರು. ಸಿ.ಟಿ.ರವಿ, ಗಂಗಾಧರ್ ಕುಲಕರ್ಣಿ ಹಾಗೂ ಮುಖಂಡರು ಇದ್ದರು.

-- 10 ಕೆಸಿಕೆಎಂ 3ಶ್ರೀರಾಮ ಸೇನೆ ದತ್ತಪೀಠದಲ್ಲಿ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನದ ಕೊನೆ ದಿನವಾದ ಭಾನುವಾರದಂದು ಪೂರ್ಣಾಹುತಿಯೊಂದಿಗೆ ತೆರೆ ಕಂಡಿತು.

--10 ಕೆಸಿಕೆಎಂ 4ಶ್ರೀರಾಮ ಸೇನೆಯ ನೇತೃತ್ವದಲ್ಲಿ ನಡೆದ ದತ್ತಮಾಲಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಭಾನುವಾರ ಶೋಭಾಯಾತ್ರೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌