ಇಂದು ಮಾಲಾಧಾರಿಗಳಿಂದ ಪಡಿ ಸಂಗ್ರಹ। ಪೊಲೀಸ್ ಇಲಾಖೆಯಿಂದ 26 ಚೆಕ್ ಪೋಸ್ಟ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಐಡಿ ಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಾಧಾರ ಹಾಗೂ ಗಾಳಿಕೆರೆ ಪ್ರದೇಶಗಳಲ್ಲಿ ನ. 4 ರ ಬೆಳಿಗ್ಗೆ 6 ರಿಂದ ನ. 6 ರ ಬೆಳಿಗ್ಗೆ 10 ಗಂಟೆವರೆಗೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಿ ಹಾಗೂ ಲಾಂಗ್ ಚಾಸಿಸ್‌ವುಳ್ಳ ವಾಹನಗಳ ಸಂಚಾರವನ್ನು ಸಹ ನಿರ್ಬಂಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಅ.30 ರಂದು ದತ್ತಮಾಲೆ ಧರಿಸಿರುವ ಶ್ರೀರಾಮ ಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿದಿನ ವ್ರತ ಆಚರಿಸುತ್ತಿದ್ದಾರೆ. ಗುರುವಾರ ದತ್ತ ದೀಪೋತ್ಸವ ಆಚರಿಸಿರುವ ಮಾಲಾಧಾರಿಗಳು ಶನಿವಾರ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಲಿದ್ದಾರೆ. ಹೀಗೆ ಸಂಗ್ರಹಿಸುವ ಪಡಿಯನ್ನು ಇರುಮುಡಿ ಕಟ್ಟಿ ಕೊಂಡು ಭಾನುವಾರ ದತ್ತಪೀಠಕ್ಕೆ ತೆರಳಲಿದ್ದಾರೆ. ದತ್ತಪೀಠಕ್ಕೆ ರಾಜ್ಯದ ವಿವಿಧೆಡೆಯಿಂದ ದತ್ತಮಾಲಾಧಾರಿಗಳು ಆಗಮಿಸುವ ಸಂದರ್ಭದಲ್ಲಿ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಗಡಿಭಾಗ ಹಾಗೂ ದತ್ತಪೀಠದ ರಸ್ತೆಯಲ್ಲಿ ಒಟ್ಟು 26 ಕಡೆ ಗಳಲ್ಲಿ ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ತೆರೆದಿದೆ. ಇಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. --- ಬಾಕ್ಸ್--- ದತ್ತಮಾಲಾಧಾರಿಗಳಿಂದ ದೀಪೋತ್ಸವದ ಸಂಭ್ರಮ ಚಿಕ್ಕಮಗಳೂರು; ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮಸೇನೆಯಿಂದ ನಗರದ ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದಲ್ಲಿ ದತ್ತ ದೀಪೋತ್ಸವ ನಡೆಯಿತು. ನೂರಾರು ಮಂದಿ ದತ್ತಮಾಲಾಧಾರಿಗಳು ದೀಪಗಳನ್ನು ಬೆಳಗಿಸುವ ಮೂಲಕ ಸಂಭ್ರಮಿಸಿದರು. 20ನೇ ವರ್ಷದ ದತ್ತಮಾಲಾ ಅಭಿಯಾನದ ಪ್ರಯುಕ್ತ ಹೂವು ಮತ್ತು ದೀಪದ ಮೂಲಕ ಬರೆದಿರುವುದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಶ್ರೀರಾಮಸೇನೆ ವಿಭಾಗದ ಅಧ್ಯಕ್ಷ ರಂಜಿತ್‌ಶೆಟ್ಟಿ, ದತ್ತಭಕ್ತರ ದೀಪೋತ್ಸವ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ. ದತ್ತಪೀಠದಿಂದ ದೀಪ ತಂದು ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು. ರಾಜ್ಯದ ಎಲ್ಲೆಡೆಯಿಂದ ದತ್ತಮಾಲಾಧಾರಿಗಳು ನ.5 ರಂದು ಶೋಭಾಯಾತ್ರೆಗೆ ಆಗಮಿಸುತ್ತಿದ್ದು ಯಾವುದೇ ಅಡಚಣೆಯಾಗಬಾರದು ಮತ್ತು ಅಭಿಯಾನ ಸಂಪೂರ್ಣ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ದೀಪೋತ್ಸವ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದುರ್ಗಾ ಸೇನೆ ಜಿಲ್ಲಾಧ್ಯಕ್ಷೆ ನವೀನ, ಸಮಸ್ತ ವಿಶ್ವಧರ್ಮ ರಕ್ಷಾ ಸಂಸ್ಥಾನ ಅಧ್ಯಕ್ಷ ಯೋಗಿ ಸಂಜಿತ್ ಸುವರ್ಣ, ಅಘೋರಿ ಖಣದ ವಿವೇಕ್‌ನಾಥ್‌ಜೀ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ಮುಖಂಡರಾದ ಅಭಿಜಿತ್, ನಂದನ್, ಮನು, ವೆಂಕಟೇಶ್ ಹಾಗೂ ಕಾರ್ಯಕರ್ತರು ಹಾಜರಿದ್ದರು. 3 ಕೆಸಿಕೆಎಂ 3 ದತ್ತಮಾಲಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನ ಶಂಕರಮಠದಲ್ಲಿ ದೀಪೋತ್ಸವ ನಡೆಯಿತು.