ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ದತ್ತಭಕ್ತರು, ಕ್ಷೀಣಿಸಿದ ದತ್ತಮಾಲಾಧಾರಿಗಳ ಸಂಖ್ಯೆ,ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಚಿಕ್ಕಮಗಳೂರು ನಗರದಲ್ಲಿ ನಡೆದ ಶೋಭಾಯಾತ್ರೆ, ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖ ವಾಗಿತ್ತು.
ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠ ಮುಂಭಾಗದಲ್ಲಿ ಬೆಳಿಗ್ಗೆ ಧರ್ಮ ಸಭೆ ನಡೆಯಿತು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ಯೋಗಿ ಸಂಜೀತ್ ಸುವರ್ಣ, ವಿವೇಕ್‌ನಾಥ್, ರಂಜಿತ್ ಶೆಟ್ಟಿ, ಅನಿಲ್ ಆನಂದ್, ನವೀನಾ ರಂಜಿತ್ ಪಾಲ್ಗೊಂಡಿದ್ದರು.ಬಳಿಕ ಹಾಸನ, ದಾವಣಗೆರೆ, ಕೋಲಾರ, ಬೆಂಗಳೂರು, ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ದತ್ತಭಕ್ತರು ಬಸವನಹಳ್ಳಿ ರಸ್ತೆಯ ಮೂಲಕ ಶೋಭಾಯಾತ್ರೆಯಲ್ಲಿ ತೆರಳಿದರು. ಹನುಮಂತಪ್ಪ ವೃತ್ತ ಬಳಸಿ ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ ಆಜಾದ್ ವೃತ್ತದಲ್ಲಿ ಮುಕ್ತಾಯಗೊಂಡಿತು.
ಪುಷ್ಪಾಲಂಕೃತಗೊಂಡ ತೆರೆದ ವಾಹನದಲ್ಲಿ ದತ್ತಾತ್ರೇಯರ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಾಣಗಳ ಬತ್ತಳಿಕೆಯನ್ನು ಹೆಗಲಮೇರಿಸಿಕೊಂಡು, ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ನಿಂತಿದ್ದ ಶ್ರೀರಾಮನ ಬೃಹತ್‌ಮೂರ್ತಿ ನೋಡುಗರ ಗಮನ ಸೆಳೆಯಿತು.
ದತ್ತಪೀಠದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು. ನಂತರ ದತ್ತಪೀಠದ ಹೊರ ವಲಯದಲ್ಲಿ ನಿರ್ಮಾಣ ಮಾಡಲಿರುವ ಶೆಡ್‌ನಲ್ಲಿ ಸತ್ಯದತ್ತ ವ್ರತ, ದತ್ತಹೋಮ, ಪೂರ್ಣಾಹುತಿಯ ನಂತರ ದತ್ತಭಕ್ತರು ಊರುಗಳಿಗೆ ವಾಪಸ್ ತೆರಳಿದರು.
ಮಳೆ : ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೋಡ, ಕೆಲವೆಡೆ ಮಳೆಯ ವಾತಾವರಣ ಇತ್ತು. ಭಾನುವಾರ ದತ್ತಪೀಠ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆ ಬಂದಿತು.
ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ದತ್ತಪೀಠ ಸೇರಿದಂತೆ ಸುತ್ತಮುತ್ತ ಬಂದ ಮಳೆಯಿಂದಾಗಿ ಕರ್ತವ್ಯ ನಿರತ ಸಿಬ್ಬಂದಿಗೆ ಅನಾನುಕೂಲವಾಯಿತು.
ದತ್ತಪೀಠಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ತಹಸೀಲ್ದಾರ್ ಡಾ. ಸುಮಂತ್ ಭೇಟಿ ನೀಡಿದ್ದರು. 5 ಕೆಸಿಕೆಎಂ 1