ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೆಣ್ಣು ಮಕ್ಕಳೇ ವೃದ್ಧ ತಾಯಿ ಹತ್ತಿರ ಇದ್ದ ಹಣ, ಆಸ್ತಿಯನ್ನು ಕಿತ್ತುಕೊಂಡು ಬೀದಿಗೆ ತಳ್ಳಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಲಿಂಗಶೆಟ್ಟಿಪುರದ ಹಿರಿಯ ಅಜ್ಜಿ ಹೆಸರು ಲಕ್ಷ್ಮೀದೇವಿ ಈಕೆಗೆ ಸುಮಾರು ಎಂಬತ್ತು ವರ್ಷ ವಯಸ್ಸಾಗಿರಬಹುದು, ಈಕೆಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳಿದ್ದರು. ಗಂಡ ಮತ್ತು ಇಬ್ಬರು ಗಂಡು ಮಕ್ಕಳು ತೀರಿಹೋಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡಲಾಗಿದೆ. ವೃದ್ಧೆ ಒಬ್ಬಳೆ ಹರಕಲು ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದಳು.
ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಆದರೆ ಎರಡು ವರ್ಷದ ಹಿಂದೆ ಬಿದ್ದ ಜಡಿ ಮಳೆಯಿಂದ ವಾಸವಿದ್ದ ಮನೆಯೂ ಬಿದ್ದು ಹೋಗಿತ್ತು. ಆವತ್ತಿನಿಂದ ಈ ಅಜ್ಜಿಯನ್ನು ಸಂಬಂಧದಲ್ಲಿ ಮೊಮ್ಮಗಳಾದ ಗೀತಾ ಎಂಬುವವರು ನೋಡಿಕೊಳ್ಳುತಿದ್ದರು. ಅತಿವೃಷ್ಟಿಯಿಂದ ಬಿದ್ದು ಹಾಳಾದ ಮನೆ ನಿರ್ಮಾಣಕ್ಕೆಂದು ಸರ್ಕಾರ ಐದು ಲಕ್ಷ ಮುಂಜೂರು ಮಾಡಿದ್ದು, ಅದರಲ್ಲಿ ಮೊದಲ ಕಂತಾಗಿ ಎರಡು ಲಕ್ಷ ಬಿಡುಗಡೆ ಮಾಡಿದೆ.
ಹಣ ಅಕೌಂಟ್ ಗೆ ಬಂದಿದ್ದೆ ತಡ ಇಷ್ಟು ದಿನ ತನ್ನ ತಾಯಿ ಏನಾಗಿದ್ದಾಳೆ ಅನ್ನೊದನ್ನು ಮರೆತಿದ್ದ ಮಕ್ಕಳಾದ ಕಲಾವತಿ ಮತ್ತು ಲಕ್ಷ್ಮೀಕಾಂತಮ್ಮ ಇದ್ದಕ್ಕಿದ್ದಂತೆ ಬಂದು ಅಮ್ಮನಿಗೆ ಎಲ್ಲಿಲ್ಲದ ಪ್ರೀತಿ ತೋರಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ.ವೃದ್ಧೆಯ ಹಣವನ್ನು ದೋಚಿದ ಪುತ್ರಿ
ಲಕ್ಷ್ಮೀದೇವಿಯನ್ನು ಪುಸಲಾಯಿಸಿ ಆಕೆ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿದ್ದಾರೆ. ಆಕೆಗೆ ಬರುತಿದ್ದ ಪೆನ್ಷನ್ ಹಣ ಕಿತ್ತುಕೊಂಡಿದ್ದಾರೆ. ನಂತರ ಪೋಸ್ಟ್ ಆಫೀಸ್‌ನಲ್ಲಿ ಇದ್ದ ಹಣವನ್ನೂ ಪಡೆದಿದ್ದಾರೆ. ಹಣ ಖಾಲಿಯಾಗುತ್ತಿದ್ದಂತೆ ಸರಿಯಾಗಿ ಊಟ ಹಾಕದೆ ಕಿರುಕುಳ ನೀಡಿ ಮಗಳು ಅಳಿಯ ಎರಡು ದಿನಗಳ ಹಿಂದೆ ಆಟೋದಲ್ಲಿ ಕರೆತಂದು ಊರಲ್ಲಿದ್ದ ಹುಣಸೆ ಮರದ ಕೆಳಗೆ ಬಿಟ್ಟು ಹೋಗಿದ್ದಾರೆ.ಎರಡು ದಿನಗಳಿಂದ ಉಪವಾಸವಿದ್ದ ಅಜ್ಜಿಯನ್ನು ಮತ್ತೆ ಅದೇ ಗ್ರಾಮದ ಗೀತಾ ಅನ್ನೋರು ಊಟ ಕಾಫಿ ಟೀ ಕೊಟ್ಟು ನೋಡಿಕೊಂಡಿದ್ದರು. ಈ ವಿಷಯವನ್ನು ಸಮಾಜ ಸೇವಕಿ ನಂದಿನಿ ಹಾಗೂ ಪ್ರವೀಣ್ ಶೆಟ್ಟಿ ಬಣದ ಕರವೇ ಹಿರಿಯ ನಾಗರಿಕರ ರಕ್ಷಣಾ ಇಲಾಖೆಗೆ ತಿಳಿಸಿದ್ದಾರೆ. ಹಿರಿಯ ನಾಗರಿಕರ ರಕ್ಷಣಾ ಸಮಿತಿ ಹೆಲ್ಪ್ ಲೈನ್ ಅಧಿಕಾರಿ ಆಗಮಿಸಿ ಅಜ್ಜಿಯ ಪರಿಸ್ಥತಿ ನೋಡಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ವೃದ್ಧೆಯ ಇಬ್ಬರು ಹೆಣ್ಣುಮಕ್ಕಳನ್ನ ಕರೆಸಿ ವಿಚಾರಣೆ ನಡೆಸಿದಾಗ ಇಬ್ಬರಲ್ಲಿ ಯಾರೂ ಆಕೆಯನ್ನು ನೋಡಿಕೊಳ್ಳಲು ಒಪ್ಪಿಕೊಂಡಿಲ್ಲ ಎಂದು ದೂರು ದಾಖಲಿಸಿಕೊಂಡಿದ್ದಾರೆ. ಸಿಕೆಬಿ-1 ಹೆತ್ತ ಮಕ್ಕಳಿಂದಲೇ ಬೀದಿ ಪಾಲಾದ ವೃದ್ಧೆ ಲಕ್ಷ್ಮೀದೇವಿ.