;Resize=(412,232))
ದಾವಣಗೆರೆ : ಎಲ್ಲ ಸಮಾಜಗಳ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ, ಸೇವೆ ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು. ಈ ವಿಚಾರವನ್ನು ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಕೈಗೊಳ್ಳಬೇಕು ಎಂದು ರಂಭಾಪುರಿ ಶ್ರೀಗಳು ಆಗ್ರಹಿಸಿದ್ದಾರೆ.
ನಗರದ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಡಾ। ಶಾಮನೂರು ಶಿವಶಂಕರಪ್ಪ ನುಡಿನಮನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಧರ್ಮಕ್ಕೆ ಧಕ್ಕೆ ಬಂದಾಗ ಗಟ್ಟಿ ನಿಲುವು ತೆಗೆದುಕೊಂಡಿದ್ದರು. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜದಲ್ಲಿ ಐಕ್ಯತೆ, ಸೌಹಾರ್ದತೆ ಮೂಡಿಸಲು ಶ್ರಮಿಸಿದರು. ಸಮಾಜದ ಹಿತಕ್ಕೆ ಧಕ್ಕೆ ಬಂದಾಗ ಪಕ್ಷದ ವಿರುದ್ಧವಾಗಿ ಸಮಾಜದ ಐಕ್ಯತೆಗಾಗಿ ಎಸ್‌ಎಸ್ ಶ್ರಮಿಸಿದರು. ಪಕ್ಷ ಸಂಕಷ್ಟದಲ್ಲಿ ಇರುವಾಗ ಎಲ್ಲ ಸಂಪನ್ಮೂಲ ಒದಗಿಸಿ ಬಲ ತಂದ ಧೀಮಂತ ನಾಯಕ ಅವರು.
ರಾಜ್ಯದ ಇತಿಹಾಸದಲ್ಲಿ ಶಿವಶಂಕರಪ್ಪ ಅವರ ಹೆಸರು ಅಜರಾಮರ. ನಾಡು, ನುಡಿ, ಅಧ್ಯಾತ್ಮದ ಭಾವನೆ ಪುನರುತ್ಥಾನಗೊಳಿಸಿದ ಹಿರಿಯ ಜೀವ. ಜನಾನುರಾಗಿಯಾಗಿ ಶಿವಶಂಕರಪ್ಪ ಕೈಗೊಂಡಿದ್ದ ಸತ್ಕಾರ್ಯಗಳು ಎಲ್ಲರ ಮನದಲ್ಲೂ ಹಸಿರಾಗಿವೆ. ಸಾಮಾಜಿಕ ಕಳಕಳಿ, ಮಠಗಳ ಮೇಲಿನ ಅವರ ಅಭಿಮಾನ ಪದಗಳಿಂದ ವರ್ಣಿಸಲು ಅಸಾಧ್ಯ ಎಂದರು.
ದಾವಣಗೆರೆಗೆ ಹೊಸ ಆಯಾಮ ತಂದುಕೊಟ್ಟ ಮುತ್ಸದ್ಧಿ ರಾಜಕಾರಣಿ. ಶ್ರೇಷ್ಠ ದೈವಭಕ್ತರಾಗಿದ್ದರು. ಎಲ್ಲ ದೇವಾಲಯಗಳಿಗೆ ಜೀವ ತುಂಬಿದ, ಪುನರುತ್ಥಾನಗೊಳಿಸಿದ ಶ್ರೇಯಸ್ಸು ಶಾಮನೂರು ಅವರಿಗೆ ಸಲ್ಲುತ್ತದೆ. ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೆಲಸ ಮಾಡಿದ ಭಗೀರಥರಾಗಿದ್ದಾರೆ ಎಂದು ಶ್ಲಾಘಿಸಿದರು.
ಬದುಕಿದ್ದರೆ ಇನ್ನೊಂದು ಚುನಾವಣೆಗೆ ಸ್ಪರ್ಧಿಸಿ, ಗೆಲ್ಲುವ ಉತ್ಸಾಹದ ಚಿಲುಮೆಯಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಮೇರು ವ್ಯಕ್ತಿತ್ವದವರು. ಅವರು ಎಲ್ಲ ಜಾತಿ-ಮತಗಳ ಜನರನ್ನೂ ಮನುಷ್ಯರನ್ನಾಗಿ ಕಾಣುತ್ತಿದ್ದ ಮನುಷ್ಯಪ್ರೇಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ನಗರದ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ನುಡಿನಮನ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ, ದಾವಣಗೆರೆಯನ್ನು ವಿದ್ಯಾಕಾಶಿ ಮಾಡುವಲ್ಲಿ ಶಿವಶಂಕರಪ್ಪನವರ ಸೇವೆ ಮಹತ್ವದ್ದು ಎಂದರು.
ಶಾಮನೂರು ಶಿವಶಂಕರಪ್ಪನವರು ಹಿರಿಯ ಶಾಸಕರಾಗಿದ್ದರು. ನಗರಸಭೆ ಮಾಜಿ ಅಧ್ಯಕ್ಷ, ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ಸಚಿವರಾಗಿ ಶಿವಶಂಕರಪ್ಪನವರು ಮಾದರಿ ಜೀವನ ಸಾಗಿಸಿದಂತಹ ಸಾಧಕರಾಗಿದ್ದರು. ನೂರು ವರ್ಷ ಶಿವಶಂಕರಪ್ಪ ಆರೋಗ್ಯವಾಗಿ ಬಾಳುತ್ತಾರೆ ಎಂದುಕೊಂಡಿದ್ದೆ. ಆದರೆ, ಇಂತಹ ಹಿರಿಯರ ಅಗಲಿಕೆಯಿಂದಾಗಿ ರಾಜ್ಯಕ್ಕೆ, ಕಾಂಗ್ರೆಸ್ ಪಕ್ಷಕ್ಕಂತೂ ತುಂಬಲಾರದ ನಷ್ಟವಾಗಿದೆ ಎಂದು ಅವರು ಹೇಳಿದರು.
ಬದುಕಿದ್ದರೆ ಇನ್ನೊಂದು ಚುನಾವಣೆಗೆ ಸ್ಪರ್ಧಿಸಿ, ಗೆಲ್ಲುತ್ತಿದ್ದರು. ಕೊಡುಗೈ ದಾನಿಯಾಗಿದ್ದ ಶಾಮನೂರು 95 ವರ್ಷಗಳ ಕಾಲ ಸಾರ್ಥಕ ಜೀವನ ಬಾಳಿದ್ದಾರೆ. ಶಿವಶಂಕರಪ್ಪನವರ ಜನ್ಮದಿನಾಚರಣೆ, ದಾಲ್ ಮಿಲ್ ಉದ್ಘಾಟನೆಯಲ್ಲೂ ಭಾಗವಹಿಸಿದ್ದೆ. 95ರ ಹರೆಯದಲ್ಲೂ ತಮ್ಮ ಕೊನೆಯ ಘಳಿಗೆವರೆಗೂ ತುಂಬಾ ಕ್ರಿಯಾಶೀಲವಾಗಿದ್ದರು. ಹೊಸ ವ್ಯಾಪಾರ, ಉದ್ಯಮ ಸ್ಥಾಪಿಸಲು ಸದಾ ಆಲೋಚಿಸುತ್ತಿದ್ದ ಶಾಮನೂರು ಸುದೀರ್ಘ ಅವಧಿಗೆ ಕಾಂಗ್ರೆಸ್ ಖಜಾಂಚಿಯಾಗಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ವಿಜಾಪುರ ಮಹಿಳಾ ಕಾಲೇಜಿಗೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದಕ್ಕೆ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಂಡಿದ್ದಕ್ಕೆ ನನಗೆ ಸನ್ಮಾನಿಸಿದ್ದರು. ಜಾತ್ಯತೀತ ಆಗಿದ್ದರಿಂದಲೇ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆ ಇರುವ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಿರಂತರ ಶಾಸಕರಾಗಿ ಆಯ್ಕೆಯಾಗಿದ್ದರು. ಇದು ಶಾಮನೂರು ಜನಪರ ಬದ್ಧತೆಗೆ ಸಾಕ್ಷಿ ಎಂದು ಸಿಎಂ ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಜ್ಜಯನಿ, ಕೇದಾರ, ಕಾಶಿ, ಶ್ರೀಶೈಲ, ತರಳಬಾಳು, ಸುತ್ತೂರು, ಹರಿಹರ, ಸಿದ್ದಗಂಗಾ ಶ್ರೀಗಳು ಸೇರಿ ವಿವಿಧ ಮಠಾಧೀಶರು, ವಿವಿಧ ಧರ್ಮಗಳ ಧಾರ್ಮಿಕ ಗುರುಗಳು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಗಣ್ಯರು ಹಾಜರಿದ್ದರು.