ರೈತಹಿತಕ್ಕಾಗಿ ದಾವಣಗೆರೆ ಬಂದ್ ಬಹುತೇಕ ಯಶಸ್ವಿ

KannadaprabhaNewsNetwork |  
Published : Jun 29, 2025, 01:33 AM IST

ಸಾರಾಂಶ

ತರೀಕೆರೆ ಬಳಿಯ ಲಕ್ಕವಳ್ಳಿಯ ಭದ್ರಾ ಡ್ಯಾಂನ ಬಫರ್‌ ಝೋನ್‌ನ ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ, ಬಿಜೆಪಿ ಹಾಗೂ ಜಿಲ್ಲಾ ರೈತರ ಒಕ್ಕೂಟ ಶನಿವಾರ ಕರೆ ನೀಡಿದ್ದ ದಾವಣಗೆರೆ ಬಂದ್ ಬಹುತೇಕ ಯಶಸ್ವಿಯಾಗಿದೆ.

- ಭದ್ರಾ ಡ್ಯಾಂ ಬಳಿ ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿ ಕೈಬಿಡಲು ಪಟ್ಟು

- ಆಟೋ, ಬಸ್‌ಗೆ ಕಲ್ಲು ತೋರಿಸಿದ ನಾಗರಾಜ, ಮಾಜಿ ಸಚಿವ: ಎಸ್‌ಪಿ ವಾಕ್ಸಮರ

- ಅಲ್ಲಲ್ಲಿ ಟೈಯರ್ ಸುಟ್ಟು, ರಸ್ತೆ ಬಂದ್‌ಗೊಳಿಸಿ ಬಲವಂತದಿಂದ ಅಂಗಡಿಗಳ ಬಂದ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತರೀಕೆರೆ ಬಳಿಯ ಲಕ್ಕವಳ್ಳಿಯ ಭದ್ರಾ ಡ್ಯಾಂನ ಬಫರ್‌ ಝೋನ್‌ನ ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ, ಬಿಜೆಪಿ ಹಾಗೂ ಜಿಲ್ಲಾ ರೈತರ ಒಕ್ಕೂಟ ಶನಿವಾರ ಕರೆ ನೀಡಿದ್ದ ದಾವಣಗೆರೆ ಬಂದ್ ಬಹುತೇಕ ಯಶಸ್ವಿಯಾಗಿದೆ.

ಬಂದ್ ಹಿನ್ನೆಲೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಬಿ.ಜಿ. ಅಜಯಕುಮಾರ, ಬಿ.ಎಂ. ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು ಸೇರಿದಂತೆ ಮತ್ತಿತರರು ನೂರಾರು ಬೈಕ್‌, ಸ್ಕೂಟರ್‌ಗಳಲ್ಲಿ ಸಾಗುತ್ತ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಕೆಲಸವೂ ಸಾಗಿತ್ತು.

ಶಾಲಾ-ಕಾಲೇಜು, ಔಷಧಾಲಯ, ಆಸ್ಪತ್ರೆ, ಹಾಲು, ಔಷಧಿ ಅಂಗಡಿಗಳು ಸೇರಿದಂತೆ ತುರ್ತು ಸೇವೆಗೆ ಯಾವುದೇ ವ್ಯತ್ಯಯವಾಗಲಿಲ್ಲ. ಅಲ್ಲಲ್ಲಿ ನಗರ ಸಾರಿಗೆ ಬಸ್‌ಗಳು, ಆಟೋ ರಿಕ್ಷಾ, ಸರಕು ಸಾಗಾಣಿಕೆ ವಾಹನಗಳನ್ನು ಪ್ರತಿಭಟನಾಕಾರರು ತಡೆದು, ಬಂದ್‌ಗೆ ಸಹಕರಿಸಲು ಮನವಿ ಮಾಡುವುದು, ಎಚ್ಚರಿಕೆ ನೀಡುವುದು ನಡೆದಿತ್ತು. ಒಂದು ಕಡೆ ಕೈ ಮುಗಿದು ಬಂದ್‌ಗೆ ಸಹಕರಿಸುವಂತೆ ಕೋರುತ್ತಿದ್ದುದು ಕಂಡುಬಂತು. ಕೆಲ ರಸ್ತೆ, ವೃತ್ತಗಳಲ್ಲಿ ಹಳೆ ಟೈಯರ್‌ಗಳ ಸುಟ್ಟು ಪ್ರತಿಭಟಿಸಲಾಯಿತು.

ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಬೈಕ್‌, ಸ್ಕೂಟರ್‌, ಜೀಪುಗಳಲ್ಲಿ ತೆರಳುತ್ತಿದ್ದ ಮುಖಂಡರು, ಕಾರ್ಯಕರ್ತರು, ರೈತ ಮುಖಂಡರು ಮನವಿ ಮಾಡಿ, ಬಂದ್ ಮಾಡಿಸುತ್ತಾ ಸಾಗಿದ್ದರು. ಆದರೆ, ಬಂದೋಬಸ್ತ್‌ಗೆ ನೇಮಿಸಲ್ಪಟ್ಟ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮನವಿ ಮಾಡಿ, ಬಂದ್‌ಗೆ ಸಹಕಾರ ಕೋರಿ. ಆದರೆ, ಬಲವಂತವಾಗಿ ಬಂದ್ ಮಾಡಿಸಲು ಪ್ರಯತ್ನಿಸಿದರೆ ಸೂಕ್ತ ಕ್ರ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಹೋರಾಟದ ವೇಳೆ ಆಟೋ ರಿಕ್ಷಾ ಸಂಚಾರ, ನಗರ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಸಂಚರಿಸುತ್ತಿರುವುದನ್ನು ಗಮನಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಕೈಯಲ್ಲಿ ಕಲ್ಲನ್ನು ಹಿಡಿದು, ವಾಹನ ಚಾಲಕರಿಗೆ ಬೆದರಿಸುವಂತೆ ಸನ್ನೆ ಮಾಡಿದ್ದಕ್ಕೆ ಪ್ರಯಾಣಿಕರು, ಚಾಲಕರು ಸಹ ಬೇಸರಗೊಂಡರು.

ಪಕ್ಷದ ಮುಖಂಡರಾದ ಪಿ.ಸಿ. ಶ್ರೀನಿವಾಸ ಭಟ್‌, ಕೆ.ಎನ್. ವೆಂಕಟೇಶ, ಎನ್.ಎಚ್. ಹಾಲೇಶ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಹಲವಾರು ತಂಡಗಳಾಗಿ ನಗರಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಮುನ್ನೆಚ್ಚರಿಕೆಯಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪ್ರಮುಖ ವೃತ್ತ, ರಸ್ತೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಬಂದೋಬಸ್ತ್ ಮೇಲೆ ನಿಗಾ ವಹಿಸಿದ್ದರು. ಬಂದ್ ವೇಳೆ ಕಾಂಗ್ರೆಸ್ಸಿನ ಪ್ರತಿಭಟನೆ ವೇಳೆ ನಡೆದ ಹೈಡ್ರಾಮಾ, ಪೊಲೀಸರ ಜೊತೆಗೆ ವಾಕ್ಸಮರ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ಇಲ್ಲದಂತೆ ಶಾಂತಿ, ಸುವ್ಯವಸ್ಥಿತವಾಗಿ ಬಂದ್ ನಡೆಯಿತು.

- - -

(ಬಾಕ್ಸ್‌-1) * ರೇಣುಕಾಚಾರ್ಯಗೆ ಕಿಸಾನ್‌ ಕಾಂಗ್ರೆಸ್‌ ತರಾಟೆ

ಮತ್ತೊಂದು ಕಡೆ ಬಂದ್ ವೇಳೆ ತೆರೆದ ಜೀಪಿನಲ್ಲಿ ತೆರಳುತ್ತಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಕಿಸಾನ್ ಕಾಂಗ್ರೆಸ್ ಮುಖಂಡ ಸುರೇಶ ಜಾಧವ್ ತರಾಟೆಗೆ ತೆಗೆದುಕೊಂಡರು. ಚಿಕ್ಕಮಗಳೂರು ಜಿಲ್ಲೆ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುಮತಿ ನೀಡಿದ್ದೇ ನಿಮ್ಮ ಬಿಜೆಪಿ ಸರ್ಕಾರ. ಈಗ ನೀವೇ ಹೋರಾಟ ಮಾಡುತ್ತಿದ್ದೀರಿ. ನಿಮ್ಮ ಸರ್ಕಾರದ ಯೋಜನೆ ಕೈಗೊಂಡಿದ್ದಾಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಯಾಕೆ ಮಾಡುತ್ತಿದ್ದೀರಿ ಅಂತಾ ಪ್ರಶ್ನಿಸಿದರು. ಆಗ ಸುರೇಶ ಜಾಧವ್ ಹಾಗೂ ಪ್ರತಿಭಟನಾಕಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೆಲ ಕಡೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಪ್ರತಿಭಟನಾಕಾರರ ವಾಕ್ಸಮರವೂ ನಡೆಯಿತು.

- - - (ಬಾಕ್ಸ್‌-2) * ಜಿಲ್ಲಾ ಎಸ್‌ಪಿ-ರೇಣುಕಾಚಾರ್ಯ ಮಾತಿನ ಚಕಮಕಿ

ಮಧ್ಯಾಹ್ನದ ನಂತರ ರೇಣುಕಾಚಾರ್ಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತ್ತು, ರೇಣುಕಾಚಾರ್ಯ ಇತರರು ಬೈಕ್‌, ಸ್ಕೂಟರ್‌ಗಳಲ್ಲಿ ರ್ಯಾಲಿಯಲ್ಲಿ ಮುಂದೆ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸಲು ಹೊರಟಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಬೆಳಗ್ಗೆ 6ರಿಂದ ಮಧ್ಯಾಹ್ನದವರೆಗೂ ನಿಮ್ಮ ಬಂದ್‌, ಹೋರಾಟಕ್ಕೆ ಅವಕಾಶ ನೀಡಿದ್ದೇವೆ. ಅಂಗಡಿಗಳ ಬಲವಂತವಾಗಿ ಮುಚ್ಚಿಸಲು ಇಲ್ಲಿಂದ ನೀವು ಮುಂದೆ ಹೊರಟರೆ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುತ್ತೇವೆಂದು ಹೇಳಿದರು. ಆಗ ಮಾಜಿ ಸಚಿವ-ಎಸ್‌ಪಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.

- - -

(ಕೋಟ್‌) ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕುಗಳ ನೂರಾರು ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರೊದಗಿಸಲು ನಮ್ಮ ವಿರೋಧವಿಲ್ಲ. ಭದ್ರಾ ಡ್ಯಾಂ ಹಿನ್ನೀರಿನಿಂದ ಅಥವಾ ನದಿಯಿಂದ ನೀರು ಬೇಕಿದ್ದರೆ ಕೊಡಲಿ. ಆದರೆ, ಭದ್ರಾ ಡ್ಯಾಂ ಬಫರ್ ಝೋನ್‌ನ ಬಲದಂಡೆ ನಾಲೆಯನ್ನು ಸೀಳಿ ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿ ಕೈಗೊಂಡಿದ್ದಕ್ಕೆ ನಮ್ಮ ವಿರೋಧವಿದೆ. ತಕ್ಷಣವೇ ಅಂತಹ ಕಾಮಗಾರಿ ಕೈಬಿಡಬೇಕು.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

- - -

-(ಪೋಟೋಗಳಿವೆ)

PREV

Recommended Stories

ನಿವೃತ್ತಿ ಜೀವನ ಬವಣೆ ರಹಿತ ಉತ್ಸಾಹದಾಯಕವಾಗಿರಲಿ: ಡಾ.ಸಿದ್ದು ದಿವಾನ
ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಸಮಾರೋಪ