ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಚ್.ಬಿ.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ 2024-25ನೇ ಸಾಲಿನಲ್ಲಿ ಉಳಿತಾಯ ಬಜೆಟ್ ಮಂಡಿಸಿದರು. ಸ್ಕೈ ವಾಕ್, ಮೇಲ್ಸೇತುವೆಗಳು, ಸೋಲಾರ್ ದೀಪಗಳ ಅಳವಡಿಕೆ, ಬಾತಿ ಕೆರೆ, ಆವರಗೆರೆ ಕೆರೆಗಳ ಅಭಿವೃದ್ಧಿ, ನೂತನ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು, ವೇತನ, ಮತ್ತಿತರೆ ಖರ್ಚುಗಳಿಗೆ ಅನುದಾನ ಮೀಸಲಿಟ್ಟು, ಪಾಲಿಕೆಯಿಂದ 17.65 ಕೋಟಿ ರು.ಗಳ ಉಳಿತಾಯ ಬಜೆಟ್ ಮಂಡಿಸಿದರೆ, ಆಡಳಿತ ಪಕ್ಷ ಬಜೆಟ್ ಸಮರ್ಥಿಸಿಕೊಂಡರೆ ವಿಪಕ್ಷ ಬಿಜೆಪಿ ಬಜೆಟ್‌ಗೆ ಖಾಲಿ ಡಬ್ಬದ ಬಜೆಟ್ ಅಂತಾ ಹೀಗಳೆಯಿತು.
ಆರಂಭಿಕ ಶಿಲ್ಕು 5402.69 ಲಕ್ಷ ರು., ಸ್ವೀಕೃತಿಗಳು-ರಾಜಸ್ವ ಸ್ವೀಕೃತಿ 15,567.40 ಲಕ್ಷ ರು., ಬಂಡವಾಳ ಸ್ವೀಕೃತಿಗಳು 18224.75 ಲಕ್ಷ ರು., ಅಸಾಮಾನ್ಯ ಸ್ವೀಕೃತಿಗಳು 18951.00 ಲಕ್ಷ ರು. ಸೇರಿ ಒಟ್ಟು 52743.15 ಲಕ್ಷ ರು. ಒಟ್ಟು ಸ್ವೀಕೃತಿಗಳು. ಪಾವತಿಗಳು-ರಾಜಸ್ವ ಪಾವತಿಗಳು ₹13993.60 ರಾಜಸ್ವ ಪಾವತಿಗಳು, ₹22834.50 ಬಂಡವಾಳ ಪಾವತಿಗಳು, 19552 ರು.ಅಸಾಮಾನ್ಯ ಪಾವತಿಗಳು ಒಟ್ಟು 56380.10 ಲಕ್ಷ ರು. ಪಾವತಿಗಳಾಗಿದ್ದು, 1765.74 ರು. ಉಳಿತಾಯ ಬಜೆಟ್‌ನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಮಂಡಿಸಿದರು.ಖಾಲಿ ಡಬ್ಬದ ಬಜೆಟ್: ವಿಪಕ್ಷ ವ್ಯಂಗ್ಯ:
ಪಾಲಿಕೆ ಖಜಾನೆಯಲ್ಲಿ ಹಣ ಇದೆ: ಆಡಳಿತ ಪಕ್ಷ
ಪಾಲಿಕೆ ಆಡಳಿತ-ವಿಪಕ್ಷ ಸದಸ್ಯರ ಪರ-ವಿರೋಧದ ಮಧ್ಯೆಯೂ ಬಹುಮತದ ಮೂಲಕ ಬಜೆಟ್‌ನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಿಜೆಪಿ ಸದಸ್ಯ ಎಸ್.ಟಿ.ವೀರೇಶ ಮಾತನಾಡಿ, ಸಭೆಯ ಆರಂಭದಲ್ಲಿ ಹಿಂದಿನ ಬಜೆಟ್ ನಲ್ಲಿ ಆದ ಕೆಲಸಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದಾಗ ಸದಸ್ಯರೂ ಧ್ವನಿಗೂಡಿಸಿದರು. ಆಗ ಕಾಂಗ್ರೆಸ್‌ನ ಚಮನ್ ಸಾಬ್, ಎ.ನಾಗರಾಜ, ಮೊದಲು ಬಜೆಟ್ ಮಂಡನೆಯಾಗಲಿ. ಆ ನಂತರ ಇಡೀ ದಿನ ಚರ್ಚೆ ಮಾಡೋಣ. ಅಗತ್ಯ ಬಿದ್ದರೆ ಈ ಚರ್ಚೆಯ ಬಗ್ಗೆ ನಾಳೆ (ಬುಧವಾರ) ವಿಶೇಷ ಸಭೆ ಮಾಡಿ, ಚರ್ಚಿಸೋಣ ಎಂದರು. ಕಡೆಗೂ ಮೇಯರ್ ಚರ್ಚೆಗೆ ಅವಕಾಶ ನೀಡುವ ಭರವಸೆ ನಂತರವಷ್ಟೇ ಬಿಜೆಪಿ ಸದಸ್ಯರು ಬಜೆಟ್ ಮಂಡನೆಗೆ ಅನುವು ಮಾಡಿಕೊಟ್ಟರು.