ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೃಶ್ಯಕಲಾ ಮಹಾ ವಿದ್ಯಾಲಯದ ವಜ್ರ ಮಹೋತ್ಸವದ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು, ಈ ಕ್ಷಣಗಳನ್ನು ಐತಿಹಾಸಿಕವಾಗಿಸಲು ಕಾಲೇಜಿನಲ್ಲಿ ಜುಲೈ ತಿಂಗಳಿನಿಂದ ವರ್ಷವಿಡೀ ಸಂಭ್ರಮಾಚರಣೆ, ಸರಣಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಜು.1964ರಿಂದ 2000ರವರೆಗಿನ ಹಿರಿಯ ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ. ಅದೇ ರೀತಿ ಹಳೆಯ ವಿದ್ಯಾರ್ಥಿಗಳ ಸಭೆ (2001ರಿಂದ 2023)ರ ನಡೆಯಲಿದೆ. ನಿವೃತ್ತ ಅಧ್ಯಾಪಕರ ಸಭೆ ಕರೆಯಲಾಗುವುದು. ಜುಲೈ 31ರ ಒಳಗಾಗಿ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವ ಹಿನ್ನೆಲೆ ಯಾವುದೇ ತೊಂದರೆಯಾಗದಂತೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.ಆಗಸ್ಟ್‌ನಲ್ಲಿ ಒಂದು ದಿನದ ಮಟ್ಟಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುವುದು. ಸೆಪ್ಟಂಬರ್‌ನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ನಡೆಸಲಾಗುವುದು. 7 ದಿನದ ಕಲಾ ಪ್ರದರ್ಶನ, ಸೆಮಿನಾರ್ ಆಯೋಜಿಸಲಾಗುವುದು. ಅಕ್ಟೋಬರ್‌ನಲ್ಲಿ ವಿದ್ಯಾರ್ಥಿಗಳಿಗೆ ಮೂರು ದಿನಗಳ ಟೆರಾಕೋಟಾ ಕಾರ್ಯಾಗಾರ ಆಯೋಜಿಸುವ ಉದ್ದೇಶವಿದೆ. ನವೆಂಬರ್‌ನಲ್ಲಿ ಲಲಿತಕಲಾ ಅಕಾಡೆಮಿಯಿಂದ ಕಲಾ ಶಿಬಿರ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮಾರ್ಚ್‌ನಲ್ಲಿ 3 ದಿನ ಹೊಸ ಮಾಧ್ಯಮ ಕಾರ್ಯಾಗಾರ ಇರುತ್ತದೆ. ಏಪ್ರಿಲ್‌ನಲ್ಲಿ ರಾಜ್ಯಮಟ್ಟದ ಕಲಾ ಶಿಕ್ಷಕರು, ಅಧ್ಯಾಪಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಮೇ ತಿಂಗಳಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ಕಲಾವಿದರಿಗೆ ಸನ್ಮಾನ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಸಮಾರೋಪ ಸಮಾರಂಭ ಹೀಗೆ ವರ್ಷವಿಡೀ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಯೂನಿವರ್ಸಿಟಿ ಕಾಲೇಜ್ ಆಫ್ ವಿಷ್ಯುಯಲ್ ಆರ್ಟ್ಸ್‌ನ ಶ್ರೀಮಂತ ಪರಂಪರೆ ಮತ್ತು ಭವಿಷ್ಯ ರೂಪಿಸುವ, ಹಿಂದಿನ ಹಾಗೂ ಪ್ರಸ್ತುತ ಇರುವ ವಿದ್ಯಾರ್ಥಿಗಳು, ಬೋಧಕರು, ಕಲಾವಿದರನ್ನು ಒಟ್ಟುಗೂಡಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.ಕರ್ನಾಟಕದ ಮೊಟ್ಟದ ಮೊದಲ ಸರ್ಕಾರಿ ಚಿತ್ರಕಲಾ ಶಾಲೆ 60ರ ಸಂಭ್ರಮೋತ್ಸವವನ್ನು ಅದ್ಧೂರಿಯಾಗಿ, ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಮಾಡುವ ಉದ್ದೇಶದಿಂದ ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ಹಲವಾರು ಮಹತ್ವಾಕಾಂಕ್ಷೆ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಕಾಲೇಜು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ಉನ್ನತ ಭವಿಷ್ಯದೊಂದಿಗೆ ಬದುಕು ರೂಪಿಸಿಕೊಳ್ಳುವ ಕಾಲೇಜಿನ ಹೆಗ್ಗುರು ರೂಪಿಸುವಂತೆ ಮಾಡುವ ಗುರಿ, ಆಶಯ ಹೊಂದಿದೆ ಎಂದು ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ದಾವಿವಿ ಮಹಾಬಲೇಶ್ವರ, ದೃಶ್ಯಕಲಾ ಮಹಾವಿದ್ಯಾಲಯದ ಡಾ.ಜೈರಾಜ ಚಿಕ್ಕಪಾಟೀಲ, ಡಾ.ಸತೀಶಕುಮಾರ ವಲ್ಲೇಪುರೆ ಇತರರು ಇದ್ದರು. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿದ್ದಾರೆ. ಇದು ನಾವೆಲ್ಲರೂ ಹೆಮ್ಮೆಪಡುವಂತಹ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿಗೆ ಮಹಾದ್ವಾರ, ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ವಿವಿ ಆವರಣದಲ್ಲಿ ಥೀಮ್ ಪಾರ್ಕ್ ಇದೆ. ಟೆಕ್ನಾಲಜಿ ಪಾರ್ಕ್ ಮಾಡುವ ಚಿಂತನೆಯೂ ಇದೆ. ಜೊತೆಗೆ ಕ್ಯಾಂಪಸ್‌ಗೆ ಹೊಸ ಹೊಸ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಪ್ರೊ.ಬಿ.ಡಿ ಕುಂಬಾರ್. ಕುಲಪತಿಗಳು ದಾವಿವಿ