ದೇವನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರಕಾರ ಎಸ್‌ಐಟಿ ತನಿಖೆ ನಿಲ್ಲಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸದಿದ್ದರೆ ದೇವನಹಳ್ಳಿಯಿಂದ ನೂರಾರು ಜನ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿ ಅಹೋರಾತ್ರಿ ಧರಣಿ ಮಾಡುವುದಾಗಿ ದೇವನಹಳ್ಳಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ಸಂಚಾಲಕ ಶಿವಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮಸ್ಥಳ ಪ್ರಮುಖವಾದುದು. ಪವಿತ್ರ ಕ್ಷೇತ್ರದ ಹೆಸರು ಹಾಳು ಮಾಡಲು, ಹಿಂದು ಧರ್ಮದ ಮೇಲೆ ಅವಹೇಳನ ಮಾಡುತ್ತಿರುವುದು ಅಕ್ಷಮ್ಯ. ಅನಾಮಿಕನೊಬ್ಬನ ದೂರಿನ ಮೇಲೆ ಸರಕಾರ ಎಸ್‌ಐಟಿ ತನಿಖೆ ಮಾಡುತ್ತಿದೆ. ಆತನು ನೂರಾರು ಹೆಣ ಹೂತಿದ್ದೇನೆ ಎಂದು ಹೇಳಿದ್ದರೂ ಯಾವುದೇ ಸಾಕ್ಷಿ ಪುರಾವೆಗಳು ದೊರೆತಿಲ್ಲ. ಧರ್ಮಸ್ಥಳದ ವಿರುದ್ಧ ದೂರು ನೀಡಿರುವ ಅನಾಮಿಕನ ಹೇಳಿಕೆ ಸತ್ಯಕ್ಕೆ ದೂರವಾದುದು. ಸಮೀರ್, ಅನಾಮಿಕ ಹಾಗೂ ಮಟ್ಟಣ್ಣನವರ್, ಮಹೇಶ್ ತಿಮ್ರೋಡಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಧರ್ಮಸ್ಥಳದ ಕೇಸನ್ನು ರಾಷ್ಟ್ರೀಯ ತನಿಖಾದಳ ಅಥವಾ ಸಿಬಿಐಗೆ ವಹಿಸಿದರೆ ಸತ್ಯ ತಿಳಿಯಲಿದೆ ಎಂದು ಒತ್ತಾಯಿಸಿದರು.ಸಮಿತಿ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಯಾರೋ ಅನಾಮಿಕನ ಮಾತನ್ನು ಕೇಳಿಕೊಂಡು ಸರಕಾರ ಎಸ್‌ಐಟಿ ರಚಿಸಿರುವ ಹಿಂದೆ ಷಢ್ಯಂತರ ನಡೆಯುತ್ತಿದೆ ಎಂದು ಎಲ್ಲರಿಗೂ ಅನುಮಾನ ಕಾಡುತ್ತಿದೆ. ದಿನಬೆಳಗಾದರೆ ಸಮಾಜದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಗಮನಹರಿಸದ ಸರಕಾರ ಒಬ್ಬ ಅನಾಮಿಕ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದಾಕ್ಷಣ ಎಸ್ಐಟಿ ತನಿಖೆ ನಡೆಸುತ್ತಿದೆ. ಆಧಾರರಹಿತ ಆರೋಪದ ಮೇಲೆ ನಡೆಯುತ್ತಿರುವ ಎಸ್‌ಐಟಿ ತನಿಖೆ ಸ್ಥಗಿತಗೊಳಿಸಿ ದೂರುದಾರರನ್ನು ಮಂಪರುಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಪದಾಧಿಕಾರಿಗಳಾದ ರಾಧಾಕೃಷ್ಣ, ಬಾಲಾಜಿ, ರಾಜಣ್ಣ, ಸೊಣ್ಣೇಗೌಡ, ಆಂಜನೇಯರೆಡ್ಡಿ, ಮಂಜುನಾಥ್, ಶಿವಪ್ರಸಾದ್, ಸೋಮಣ್ಣ, ಧರ್ಮೆಂದ್ರ, ನಾರಾಯಣಸ್ವಾಮಿ, ಮುನಿಶಾಮೇಗೌಡ ಇತರರಿದ್ದರು.೧೬ ದೇವನಹಳ್ಳಿ ಚಿತ್ರಸುದ್ದಿ:೦೨
ದೇವನಹಳ್ಳಿ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ಸಂಚಾಲಕ ಶಿವಪ್ರಸಾದ್ ಮಾತನಾಡಿದರು.