ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಸಾತನೂರು ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಕೊನೆಯ ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಶ್ರೀನರಸಿಂಹಸ್ವಾಮಿ ವಿಗ್ರಹಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾವರಣವನ್ನು ಸಹ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತಾದಿಗಳು ಸಹ ಬೆಟ್ಟದ ಕೆಳಗೆ ಅನ್ನಪ್ರಸಾದವನ್ನು ನೀಡುತ್ತಿದ್ದುದು ಕಂಡುಬಂತು. ಬೆಂಗಳೂರಿನ ದಾನಿ ನರಹರಿ ಕುಟುಂಬದವರು ಪ್ರತಿ ವರ್ಷ ಶ್ರಾವಣ ಮಾಸದ ಎಲ್ಲಾ ಶನಿವಾರಗಳಂದು ದೇವಾಲಯದ ಹೂವಿನ ಅಲಂಕಾರವನ್ನು ಮಾಡಿಕೊಂಡು ಬರುತ್ತಿದ್ದಾರೆ. ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ಭಕ್ತಸಮೂಹ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರು ಜಾತ್ರೆಯ ರೀತಿಯಲ್ಲಿ ದೇವಾಲಯಕ್ಕೆ ಹರಿದು ಬರುತ್ತಿದ್ದರು. ಸಾತನೂರು ಬೆಟ್ಟದ ಕೆಳಭಾಗದಿಂದ ಮೇಲ್ಭಾಗದವರೆಗೂ ಹೂವುಗಳಿಂದ ಅಲಂಕರಿಸಲಾಗಿತ್ತು.ನಗರದ ಪ್ರಮುಖ ದೇವಾಲಯಗಳಲ್ಲೊಂದಾದ ಶ್ರೀಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯ, ಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ ದೇವಾಲಯ, ಬೋವಿ ಕಾಲೋನಿಯ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ ಶ್ರಾವಣ ಸಂಭ್ರಮ ಮನೆಮಾಡಿತ್ತು. ಎಲ್ಲಾ ದೇವಾಲಯಗಳಲ್ಲೂ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ನೆರವೇರಿಸಲಾಗಿತ್ತು. ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.
ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಪಣಕನಹಳ್ಳಿ, ಗೊರವಾಲೆ ಎನ್.ಜೆ.ವೈ ಮಾರ್ಗ ಮತ್ತು ಸಂಪಹಳ್ಳಿ ಐ.ಪಿ ಮಾರ್ಗದಲ್ಲಿ ತುರ್ತು ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಆಗಸ್ಟ್ 19 ರಂದು ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ.